ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಸಮೀಪದ ಪುಟ್ಟ ಗ್ರಾಮ ಮಾರಾಪುರದ ಯುವಪ್ರತಿಭೆ, ಉದಯೋಣ್ಮುಖ ಸೈಕ್ಲಿಂಗ್ ಕ್ರೀಡಾಪಟು ಹೊನ್ನಪ್ಪ ಚಿದಾನಂದ ಧರ್ಮಟ್ಟಿ 2ನೇ ಬಾರಿಗೆ ರಾಷ್ಟ್ರಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ಆಗಿ ಆಯ್ಕೆ ಆಗುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.ಮೈಸೂರಲ್ಲಿ ನಡೆದ 16 ವರ್ಷದೊಳಗಿನ ಬಾಲಕರ ರಾಜ್ಯ ಮಟ್ಟದ 15ನೇ ಸೈಕ್ಲಿಂಗ್ ಚಾಂಪಿಯನ್ ಶಿಪ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ 2ನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ರಾಜ್ಯದ ವಿವಿಧ ಕ್ರೀಡಾ ಶಾಲೆಗಳ ಒಟ್ಟು 33 ಬಾಲಕರಲ್ಲಿ 21 ನಿಮಿಷ 26 ಸೆಕೆಂಡಗಳಲ್ಲಿ 30 ಕಿ.ಮೀ ಕ್ರಮಿಸಿ ಇದೇ ಡಿ.4ರಂದು ಒರಿಸ್ಸಾದ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಚಾಂಪಿಯನ್ ಶಿಪನಲ್ಲಿ ಭಾಗವಹಿಸಲಿದ್ದಾನೆ.
2ನೇ ಬಾರಿ ಆಯ್ಕೆ:8ನೇ ತರಗತಿಯಲ್ಲಿ ಓದುತ್ತಿದ್ದಾಗ 2022ರ ಜುಲೈ ತಿಂಗಳಿನಿಂದ ಚಂದರಗಿ ಕ್ರೀಡಾವಸತಿ ಶಾಲೆ ಸೈಕ್ಲಿಂಗ್ ಕೋಚ್ ಭೀಮಶಿ ವಿಜಯನಗರ ಮಾರ್ಗದರ್ಶನದಲ್ಲಿ ನಿತ್ಯ ಕಠಿಣ ಅಭ್ಯಾಸದ ಫಲವಾಗಿ ಇಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಹೊನ್ನಪ್ಪನ ಅವಿರತ ಕಠಿಣ ಪರಿಶ್ರಮ, ಅಚಲ ಕ್ರೀಡಾಸಕ್ತಿಯೇ ಕಾರಣ. ಕಳೆದ ವರ್ಷವೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಗ್ರಾಮೀಣ ಪ್ರತಿಭೆ:ಜಿಲ್ಲೆಯ ಗಡಿಗ್ರಾಮವಾದ ಮಾರಾಪುರದ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಚಿದಾನಂದ ಮತ್ತು ಶಾಂತ ದಂಪತಿಗೆ ಜನಿಸಿದ ಹೊನ್ನಪ್ಪ ಸದ್ಯ 10ನೇ ತರಗತಿ ಓದುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆ. 1ರಿಂದ 5ನೇ ತರಗತಿ ಸಮೀರವಾಡಿ ಕೆ.ಜಿ ಸೋಮಯ್ಯಾ ಶಾಲೆಯಲ್ಲಿ ಪೂರ್ಣಗೊಳಿಸಿ, 6ನೇ ತರಗತಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ಚಂದರಗಿ ಕ್ರೀಡಾವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದಾನೆ. ಕಳೆದ ಎರಡು ವರ್ಷಗಳಿಂದ ಸೈಕ್ಲಿಂಗ್ ತರಬೇತಿ ಪಡೆಯುತ್ತಿದ್ದಾನೆ.
ಹೆಚ್ಚಿನ ತರಬೇತಿ ಅವಶ್ಯ:ಈ ಗ್ರಾಮೀಣ ಪ್ರತಿಭೆಗೆ ಉನ್ನತ ತರಬೇತಿ ಕೊಟ್ಟರೆ ಈ ಹೊನ್ನಪ್ಪ ನಮ್ಮ ದೇಶದ ಸೈಕ್ಲಿಂಗ್ ಕ್ಷೇತ್ರದ ಅಪ್ಪಟ ಚಿನ್ನಪ್ಪ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ.
ಹೊನ್ನಪ್ಪ ಕಳೆದ 2 ವರ್ಷದಿಂದ ನಮ್ಮ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಸೈಕ್ಲಿಂಗ್‌ನಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡು ಸತತವಾಗಿ 2ನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆತರೆ ರಾಷ್ಟ್ರೀಯ ಸೈಕ್ಲಿಂಗ್ ಪಟು ಆಗುವುದರಲ್ಲಿ ಎರಡು ಮಾತ್ತಿಲ್ಲ.ಭೀಮಶಿ ವಿಜಯನಗರ, ಸೈಕ್ಲಿಂಗ್ ತರಬೇತುದಾರ ಕ್ರೀಡಾವಸತಿ ಶಾಲೆ, ಕೆ.ಚಂದರಗಿ