ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಹೊನ್ನಾಪುರಮಠ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರ ಮತ್ತು ಹಿಂದಿನ ಕಾಲದ ಕವಿಗಳಿಗೆ ಒಂದೊಂದು ರೀತಿಯ ಸಾಹಿತ್ಯ ರಚನೆಯ ಹೆದ್ದಾರಿಗಳು ಇದ್ದವು. ಇಂದು ಅವು ಕಿರುದಾರಿಗಳಾಗಿವೆ. ವಿಭಿನ್ನ ಪ್ರಕಾರದ ಸಾಹಿತ್ಯ ರಚನೆ ಆಗುತ್ತಿರುವುದನ್ನು ಕಾಣುತ್ತೇವೆ ಎಂದು ಕಲಬುರ್ಗಿಯ ಕೇಂದ್ರಿಯ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಕ್ರಮ ವಿಸಾಜಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಗದಿಗೆಯ್ಯಾ ಹೊನ್ನಾಪುರಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಕನ್ನಡ ಸಾಹಿತ್ಯದ ಇತ್ತೀಚಿನ ಸ್ವರೂಪ’ ವಿಷಯ ಕುರಿತು ಉಪನ್ಯಾಸ ನೀಡಿದರು.
ಇವತ್ತಿನ ಸಾಹಿತ್ಯ ಅನೇಕ ಬಣ್ಣಗಳ ಸಮ್ಮಿಶ್ರಣ ಸಂಕೀರ್ಣವಾಗಿದೆ. ಅನುವಾದದ ಮಹಾಪುರ ಹರಿದು ಬರುತ್ತಿದೆ. ವಿದೇಶಿ ಸಾಹಿತ್ಯದ ಅನುಭವಗಳನ್ನು ಕಟ್ಟಿಕೊಡುವ ಭ್ರಮೆಯಿಂದ ನಾವೀಗ ಹೊರಬಂದಿದ್ದೇವೆ. ಇವತ್ತಿನ ಸಾಹಿತ್ಯದಲ್ಲಿ ಜೀವನದ ಆದರ್ಶ ಮೌಲ್ಯಗಳೇನಿವೆ? ಜಾಗತೀಕರಣದ ತಲ್ಲಣಗಳು, ಮಾರುಕಟ್ಟೆಯ ಪ್ರಭಾವಗಳ ಶೋಧನೆಯ ಜೀವನವನ್ನು ಭೋಗಿಸುತ್ತಿದ್ದೇವೆಯೇ ಹೊರತು ಜೀವನವನ್ನು ಜೀವಿಸುತ್ತಿಲ್ಲ ಎಂಬುದನ್ನು ಸಾಹಿತ್ಯ ಮನಗಾಣಬೇಕಿದೆ ಎಂದರು.
ಪ್ರಸ್ತುತ ಸಾಹಿತ್ಯದಲ್ಲಿ ಕೋಮುವಾದದ ವಿಕಾರ ಮನಸ್ಥಿತಿಯನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಲೇಖಕರು ಹುಡುಕುತ್ತಿದ್ದಾರೆ. ದೈನಂದಿನ ಭಾಷೆಗಳಲ್ಲಿ ಮಾತನಾಡಲು ಆಗದ್ದನ್ನು ಸಾಹಿತ್ಯ ಲೋಕದ ಮೂಲಕ ಮಾತನಾಡುವ ಪ್ರಯತ್ನವನ್ನು ಲೇಖಕ ಮಾಡುತ್ತಿದ್ದಾನೆ. ಪುರಾಣಗಳನ್ನು ಹಿಡಿದು ಮಾತನಾಡಿಸುವ ಸಾಮರ್ಥ್ಯ ಇತ್ತೀಚಿನ ಲೇಖಕರಲ್ಲಿ ಕಾಣಸಿಗುತ್ತಿಲ್ಲ.
ಎಡಪಂಥ, ಬಲಪಂಥ ಯಾವ ಪಂಥಗಳಿಗೂ ಸಿಲುಕದೇ, ಇವತ್ತಿನ ಲೇಖಕ ಇರುವುದನ್ನು ಕಾಣುತ್ತೇವೆ. ವ್ಯಕ್ತಿಗತ ಆತಂಕಕ್ಕಿಂತ ಸಮುದಾಯಗಳ ಆತಂಕಗಳು, ದುರಂತ ಪ್ರಜ್ಞೆ, ವಿಷಾದದ ಪ್ರಜ್ಞೆ ಇವತ್ತಿನ ಸಾಹಿತ್ಯ ಲೋಕದಲ್ಲಿ ಎದ್ದು ಕಾಣುತ್ತಿದೆ. ಹಿಂದಿನ ಲೇಖಕರು ಎದುರು-ಬದುರು ಇರುತ್ತಿದ್ದರು. ಒಬ್ಬರ ಸಾಹಿತ್ಯಕ್ಕೆ ಪೂರಕ ಇಲ್ಲವೆ, ವಿರುದ್ಧವಾಗಿ ಸಾಹಿತ್ಯ ರಚನೆ ಮಾಡುತ್ತಿದ್ದರು.
ಇವತ್ತಿನ ಸಾಹಿತಿಗಳು ಅಕ್ಕ-ಪಕ್ಕದಲ್ಲಿಯೇ ಇರುವುದರಿಂದ ತೀವ್ರ ಸಂವೇದನೆಗಳಿಗೆ ಅವಕಾಶ ಇಲ್ಲದಾಗಿದೆ. ಹಾಗಾಗಿ ಸೃಜನಶೀಲ ಕೃತಿಗಳು ಇವತ್ತು ಲಭ್ಯವಾಗುತ್ತಿಲ್ಲ ಎಂದರು.
ಎಮೆರಿಟಸ್ ಪ್ರೊಫೆಸರ್ ಪ್ರೊ. ಸಿ.ಆರ್. ಯರವಿನತೆಲಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯದ ವಿವಿಧ ಪ್ರಕಾರಗಳ ಚೂರು, ಚೂರುಗಳನ್ನು ಕೂಡಿಸಿ ಸಮಗ್ರ ಚಿತ್ರಣವನ್ನು ವಿಕ್ರಮ ವಿಸಾಜಿಯವರು ಕಟ್ಟಿಕೊಟ್ಟರು. ಇವತ್ತು ಗಟ್ಟಿ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿದೆ.
ಇವತ್ತಿನ ಸಾಹಿತ್ಯಕ್ಕೆ ವಿಶಾಲತೆಯಿದೆ. ಆದರೆ, ಆಳದ ಕೊರತೆಯಿದೆ ಎಂದು ಹೇಳಿದರು. ದತ್ತಿ ದಾನಿಗಳ ಪರವಾಗಿ ಜಗದೇವಿ ಹೊನ್ನಾಪುರಮಠ ಮಾತನಾಡಿದರು. ಸತೀಶ ತುರಮರಿ ಸ್ವಾಗತಿಸಿದರು. ಶಿ.ಮ. ರಾಚಯ್ಯನವರ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಹೇಮಾ ಪಟ್ಟಣಶೆಟ್ಟಿ, ನಿಂಗಣ್ಣ ಕುಂಟಿ, ಸರಸ್ವತಿ ಪೂಜಾರ, ಸುಜಾತಾ ಹಡಗಲಿ, ವೀಣಾ ತಿರಕಪಡಿ ಮತ್ತಿತರರು ಇದ್ದರು.