ಹೊನ್ನಾವರ ಪೊಲೀಸ್‌ ಠಾಣೆಗೆ ಅರಣ್ಯ ಅತಿಕ್ರಮಣದಾರರ ಮುತ್ತಿಗೆ

| Published : Dec 12 2024, 12:30 AM IST

ಸಾರಾಂಶ

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸದಿದ್ದಲ್ಲಿ ಡಿ. 21ರಂದು ಅರಣ್ಯ ಇಲಾಖೆ ಮುತ್ತಿಗೆ ಹಾಕಲಾಗುವುದು ಎಂದು ರವೀಂದ್ರ ನಾಯ್ಕ ಎಚ್ಚರಿಸಿದರು.

ಹೊನ್ನಾವರ: ತಾಲೂಕಿನ ಕೆಂಚಗಾರದಲ್ಲಿ ಅರಣ್ಯ ಇಲಾಖೆಯವರು ರಾಜು ನಾಯ್ಕ ಎಂಬವರ ಅತಿಕ್ರಮಣ ತೆರವು ಪ್ರಕರಣ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಬೇಕೆಂದು ನೂರಾರು ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣದಾರರು ಬುಧವಾರ ಹೊನ್ನಾವರ ಪೊಲೀಸ್ ಠಾಣೆಗೆ ಆಗಮಿಸಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಾರ್ವಜನಿಕರು ಮಾತನಾಡಿ, ಇತ್ತೀಚೆಗೆ ವಲಯ ಅರಣ್ಯ ಅಧಿಕಾರಿ ಸವಿತಾ ದೇವಾಡಿಗ ನೇತೃತ್ವದಲ್ಲಿ ಇನ್ನುಳಿದ ೪೦ ಅರಣ್ಯ ಸಿಬ್ಬಂದಿ ಅರಣ್ಯವಾಸಿ ರಾಜು ತಿಪ್ಪಯ್ಯ ನಾಯ್ಕ ಅನಾದಿ ಕಾಲದಿಂದ ಸಾಗುವಳಿ ಕ್ಷೇತ್ರಕ್ಕೆ ಅತಿಕ್ರಮಣವಾಗಿ ಪ್ರವೇಶಿಸಿದ್ದಾರೆ. ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ₹೫೦,೦೦೦ ಮೌಲ್ಯದ ಬೆಳೆಯನ್ನು ನಷ್ಟ ಮಾಡಿದ್ದಾರೆ. ಜತೆಗೆ ಸಾಕ್ಷಿಯನ್ನು ನಾಶಪಡಿಸಿ ಕಾನೂನಿಗೆ ವ್ಯತಿರಿಕ್ತವಾಗಿ ಕರ್ತವ್ಯಚ್ಯುತಿ ಎಸಗಿದ್ದಲ್ಲದೇ ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸಿದ್ದಾರೆ ಎಂದು ಆರೋಪಿಸಿದರು.

ಘಟನಾ ಸ್ಥಳದಲ್ಲಿ ಅಕ್ರಮ ಬಂಧನದಲ್ಲಿಟ್ಟು, ದೈಹಿಕ ಮತ್ತು ಮಾನಸಿಕ ಹಿಂಸೆ ಮಾಡುವುದರೊಂದಿಗೆ ಅರಣ್ಯವಾಸಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ದೌರ್ಜನ್ಯಕ್ಕೆ ಒಳಗಾದ ರಾಜು ನಾಯ್ಕ ಈಗಾಗಲೇ ಡಿ. ೯ರಂದು ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಕುರಿತು ಹೊನ್ನಾವರ ಠಾಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಪ್ರಕರಣ ದಾಖಲಿಸುವ ತನಕ ಠಾಣೆಯಲ್ಲೇ ಇರುತ್ತೇವೆ ಎಂದು ಅತಿಕ್ರಮಣದಾರರು ಬಿಗಿಪಟ್ಟು ಹಿಡಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಠಾಣೆಗೆ ಮುತ್ತಿಗೆ ಹಾಕಿದ ಅರಣ್ಯವಾಸಿಗಳ ಮನವೊಲಿಸಲು ಪ್ರಯತ್ನಿಸಿದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಬಿಗಿಪಟ್ಟು ಹಿಡಿದರು. ನಿರಂತರ ಅರಣ್ಯವಾಸಿಗಳಿಗೆ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ವಲಯ ಅಧಿಕಾರಿ ವಿರುದ್ಧ ಅರಣ್ಯವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಗದೀಶ ಅವರೊಂದಿಗೆ ರವೀಂದ್ರ ನಾಯ್ಕ ದೂರವಾಣಿಯಲ್ಲಿ ಮಾತನಾಡಿದರು. ಕೆಂಚಗಾರದಲ್ಲಿನ ಘಟನೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸದಿದ್ದಲ್ಲಿ ಡಿ. 21ರಂದು ಅರಣ್ಯ ಇಲಾಖೆ ಮುತ್ತಿಗೆ ಹಾಕಲಾಗುವುದು ಎಂದು ರವೀಂದ್ರ ನಾಯ್ಕ ಎಚ್ಚರಿಸಿದರು.

ಅರಣ್ಯ ಸಿಬ್ಬಂದಿ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಮುಕ್ತ ಹಾಗೂ ಸಮಗ್ರ ತನಿಖೆ ಜರುಗಿಸಲಾಗುವುದು. ತನಿಖೆಯಲ್ಲಿ ಅರಣ್ಯ ಇಲಾಖೆಗೆ ಹಸ್ತಕ್ಷೇಪ ಮಾಡಲು ಪೊಲೀಸ್ ಇಲಾಖೆ ಅವಕಾಶ ನೀಡದು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಗದೀಶ ತಿಳಿಸಿದರು. ಪಿಎಸ್‌ಐ ರಾಜಶೇಖರ, ಸಿಪಿಐ ವಸಂತ ಆಚಾರಿ ಗೋಕರ್ಣ, ಸಾವಿತ್ರಿ ನಾಯ್ಕ ಪಿಎಸ್‌ಐ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ರಾಮ ಮರಾಠಿ, ಇಬ್ರಾಹಿಂ ಸಾಬ್‌, ಕಿರಣ ಮರಾಠಿ, ಮಾಬ್ಲೇಶ್ವರ ನಾಯ್ಕ, ಮಹೇಶ ಸಾಲ್ಕೋಡ, ನಗರ ಅಧ್ಯಕ್ಷ ಸುರೇಶ ಮೇಸ್ತಾ, ತಾಲೂಕು ಅಧ್ಯಕ್ಷ ಚಂದ್ರಕಾಂತ ಕೊಚರೆಕರ್, ಮಂಜು ಮರಾಠಿ ಕುಮಟಾ, ರಾಜೇಶ ಮಿತ್ರ ನಾಯ್ಕ ಚಂದನಗೇರಿ, ವಿನೋದ ನಾಯ್ಕ, ಚಂದ್ರು ನಾಯ್ಕ ಬೆಳಕೆ, ಶಬ್ಬೀರ್ ಭಟ್ಕಳ, ಮಹೇಂದ್ರ ನಾಯ್ಕ ಕತಗಾಲ, ದೇವರಾಜ ಗೊಂಡ ಭಟ್ಕಳ, ಸುರೇಶ ತುಬೊಳ್ಳಿ, ಚಂದ್ರಹಾಸ ನಾಯ್ಕ ಅನಂತವಾಡಿ ಉಪಸ್ಥಿತರಿದ್ದರು.