ಸಾರಾಂಶ
ಕಾರವಾರ: ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಭೂಸುರಕ್ಷಾ ತಂತ್ರಾಂಶದಲ್ಲಿ ಇಂಡೆಕ್ಸಿಂಗ್ ಹಾಗೂ ಕ್ಯಾಟಲಾಗಿಂಗ್ ಮಾಡಿ ಅಪ್‌ಲೋಡ್ ಮಾಡಲಾಗುವ ಕಾರ್ಯದಲ್ಲಿ ನಾನ್ ಪೈಲಟ್ ತಾಲೂಕುಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
ತಹಸೀಲ್ದಾರ್ ಕಚೇರಿಯ ಅಭಿಲೇಖಾಲಯದಲ್ಲಿರುವ ಎ ಮತ್ತು ಬಿ ವರ್ಗದ (ಎ ವರ್ಗದ ದಾಖಲೆಗಳು ಶಾಶ್ವತವಾಗಿರುತ್ತದೆ ಹಾಗೂ ಬಿ ವರ್ಗದ ದಾಖಲೆಗಳು 30 ವರ್ಷಗಳ ಕಾಲ ಸಂರಕ್ಷಿಸಲ್ಪಡುತ್ತದೆ.) ದಾಖಲೆಗಳಾದ ಕೈಬರಹ ಪಹಣಿ, ಮ್ಯುಟೇಶನ್ ವಹಿ, ಭೂಮಂಜೂರಾತಿ ಕಡತಗಳು, ಭೂಪರಿವರ್ತನೆ ಕಡತಗಳು, ಭೂಸುಧಾರಣೆ ಕಡತಗಳನ್ನು ನವೀನ ತಂತ್ರಜ್ಞಾನ ಒಳಗೊಂಡ ಸ್ಕ್ಯಾನರ್‌ಗಳನ್ನು ಬಳಸಿ ಸ್ಕ್ಯಾನ್ ಮಾಡಿ ಭೂಸುರಕ್ಷಾ ತಂತ್ರಾಂಶದಲ್ಲಿ ಇಂಡೆಕ್ಸಿಂಗ್ ಹಾಗೂ ಕ್ಯಾಟಲಾಗಿಂಗ್ ಮಾಡಿ ಅಪಲೋಡ್ ಮಾಡುವ ಈ ಕಾರ್ಯದಲ್ಲಿ ಹೊನ್ನಾವರ ತಾಲೂಕು ಈ ವರೆಗೆ 15,57,896 ಪುಟಗಳಷ್ಟು ದಾಖಲೆಗಳನ್ನು ಅಪಲೋಡ್ ಮಾಡಿ ರಾಜ್ಯದಲ್ಲಿಯೇ ಹೆಚ್ಚು ಪ್ರಗತಿ ಸಾಧಿಸಿ ಪ್ರಥಮ ಸ್ಥಾನದಲ್ಲಿದ್ದು, ಈ ಬಗ್ಗೆ ರಾಜ್ಯದ ಕಂದಾಯ ಸಚಿವರು ಮತ್ತು ಕಂದಾಯ ಇಲಾಖೆಯ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಹಾಲಿ ಅಸ್ತಿತ್ವದಲ್ಲಿರುವ ಅರ್ಧ ಶತಮಾನಕ್ಕಿಂತಲೂ ಹಳೆಯ ಭೂ ದಾಖಲೆಗಳನ್ನು ಪುನರಾವರ್ತಿತವಾಗಿ ಭೌತಿಕವಾಗಿ ಪ್ರತಿಗಳನ್ನು ಮಾಡಿ ಸಾರ್ವಜನಿಕರಿಗೆ ಒದಗಿಸುವ ಪ್ರಕ್ರಿಯೆಯಿಂದಾಗಿ ಈ ಪ್ರಮುಖ ದಾಖಲೆಗಳಿಗೆ ಹಾನಿ ಮತ್ತು ನಾಶವನ್ನು ಉಂಟುಮಾಡುತ್ತಿದೆ. ಒಂದು ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ನಿರ್ದಿಷ್ಟ ಹಳ್ಳಿಯ ದಾಖಲೆಗಳಿಗಾಗಿ ವಿನಂತಿಗಳು ಇದ್ದಲ್ಲಿ, ಅದೇ ದಿನದಲ್ಲಿ ಒಂದೇ ರೀತಿಯ ದಾಖಲೆಗಳನ್ನು ಪುನರಾವರ್ತಿತವಾಗಿ ಬಳಸಬೇಕಾಗುತ್ತದೆ. ಇದರಿಂದ ಕೆಲವು ಪ್ರಮುಖ ದಾಖಲೆಗಳು ಶಿಥಿಲಗೊಂಡು ನಾಶವಾಗಲು ಕಾರಣವಾಗುತ್ತದೆ. ಭೂ ದಾಖಲೆಗಳನ್ನು ಸುರಕ್ಷಿತವಾಗಿ ಇಡುವುದು ಮತ್ತು ನಿರ್ವಹಿಸುವುದು ಕಂದಾಯ ಇಲಾಖೆಯ ಪ್ರಮುಖ ಜವಾಬ್ದಾರಿ ಕೂಡ ಆಗಿದೆ.
ತಂತ್ರಜ್ಞಾನವನ್ನು ಬಳಸಿಕೊಂಡು, ಭೂ ದಾಖಲೆಗಳನ್ನು ಹುಡುಕುವ ಮತ್ತು ಪಡೆಯುವ ಪ್ರಯತ್ನವನ್ನು ಮಾಡಿದ್ದಲ್ಲಿ ಸಾರ್ವಜನಿಕರಿಗೆ ಭೂ ದಾಖಲೆಗಳನ್ನು ತ್ವರಿತವಾಗಿ ಒದಗಿಸಬಹುದು ಮತ್ತು ಅದೇ ಸಮಯದಲ್ಲಿ ಭೌತಿಕ ನಿರ್ವಹಣೆಯ ಸಂದರ್ಭವನ್ನು ಕಡಿಮೆ ಮಾಡುವ ಮೂಲಕ ಭೂ ದಾಖಲೆಗಳ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಬಹುದಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವು ಭೂಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದೆ.ಈ ಮಾದರಿಯಲ್ಲಿ ಸಂಗ್ರಹಿಸಿದಲ್ಲಿ ಸಾರ್ವಜನಿಕರು ಕೋರುವ ದಾಖಲೆಗಳು ಕ್ಷಣಮಾತ್ರದಲ್ಲಿ ಅವರಿಗೆ ಲಭ್ಯವಾಗಲಿದೆ. ಇದರಿಂದಾಗಿ ಸಮಯ, ಹಣ ವ್ಯಯವಾಗುವುದು ತಪ್ಪಿ ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತಕ್ಕೆ ಈ ಯೋಜನೆ ನಾಂದಿಯಾಗಲಿದೆ. ಮಹತ್ವದ ದಾಖಲೆಗಳನ್ನು ತಿದ್ದಲು, ಕಳೆಯಲು, ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನೈಜ ದಾಖಲೆಗಳು ಭದ್ರವಾಗಿರುತ್ತದೆ. ದಾಖಲೆಗಳ ಅಲಭ್ಯತೆ ಹಾಗೂ ತಿದ್ದುಪಡಿಯಿಂದ ಸರ್ಕಾರಿ ಜಮೀನು ಭೂಗಳ್ಳರ ಪಾಲಾಗುವುದು ತಪ್ಪುತ್ತದೆ. ದಾಖಲೆಗಳು ಶಿಥಿಲಗೊಂಡ ಕಾರಣದಿಂದಾಗಿ ವಿವಿಧ ಭೂಸಂಬಂಧಿತ ಪ್ರಕರಣಗಳಲ್ಲಿ ಉಂಟಾಗುವ ಅನಾವಶ್ಯಕ ಸಂದೇಹ ಕಡಿಮೆಯಾಗುವುದಲ್ಲದೇ ದಾಖಲೆಗಳ ಕೊರತೆಯಿಂದಾಗಿ ವ್ಯಾಜ್ಯಗಳು ಸೃಷ್ಟಿಯಾಗುವುದು ತಪ್ಪುತ್ತದೆ.
ಜಿಲ್ಲೆಯ ಎಲ್ಲ 12 ತಾಲೂಕುಗಳಲ್ಲಿಯೂ ಈ ಯೋಜನೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಯಾವುದೇ ಕಚೇರಿಗಳಿಗೆ ಅಲೆದಾಡದೇ, ಮನೆಯಲ್ಲಿಯೇ ಕುಳಿತು, ಆನ್‌ಲೈನ್ ಮೂಲಕವೇ ಅತ್ಯಂತ ತ್ವರಿತಗತಿಯಲ್ಲಿ ತಮ್ಮ ಭೂದಾಖಲೆಗಳನ್ನು ಪಡೆಯಬಹುದಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ.