ಫೆ. 20ರಿಂದ ಹೊನ್ನಾವರ ಉತ್ಸವ

| Published : Feb 13 2025, 12:46 AM IST

ಸಾರಾಂಶ

ಫೆ. ೨೦ರಿಂದ ೨೩ರ ವರೆಗೆ ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಹಾಗೂ ಹೊನ್ನಾವರ ಉತ್ಸವ ಸಮಿತಿಯ ಆಶ್ರಯದಲ್ಲಿ ಹೊನ್ನಾವರ ಉತ್ಸವ-೨೦೨೫ ನಡೆಯಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಕೃಷ್ಣಾನಂದ ಭಟ್ ತಿಳಿಸಿದರು.

ಹೊನ್ನಾವರ: ಫೆ. ೨೦ರಿಂದ ೨೩ರ ವರೆಗೆ ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಹಾಗೂ ಹೊನ್ನಾವರ ಉತ್ಸವ ಸಮಿತಿಯ ಆಶ್ರಯದಲ್ಲಿ ಹೊನ್ನಾವರ ಉತ್ಸವ-೨೦೨೫ ನಡೆಯಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಕೃಷ್ಣಾನಂದ ಭಟ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಟಲ್ ಕರಾವಳಿ ಫ್ಯಾಶನ್ ಶೋ, ಮಿಸ್ ಕರಾವಳಿ ಸ್ಪರ್ಧೆ, ರಾಜ್ಯಮಟ್ಟದ ನೃತ್ಯ ಸ್ಪರ್ಧೆ, ಗಾಯನ ಹಾಗೂ ನೃತ್ಯ, ಕಾಮಿಡಿ ಶೋ ಮುಂತಾದವು ನಡೆಯಲಿದ್ದು, ಸಿನಿಮಾ ಹಾಗೂ ಧಾರವಾಹಿ ನಟ- ನಟಿಯರು, ಸ್ಥಳೀಯ ಕಲಾವಿದರು ಭಾಗವಹಿಸುವರು ಎಂದು ತಿಳಿಸಿದರು.

ವಿವಿಧ ಸಂಘ-ಸಂಸ್ಥೆಗಳ ಸಹಕಾರದ ಮೇರೆಗೆ ನಡೆಯುವ ಕಾರ್ಯಕ್ರಮಕ್ಕೆ ಸಚಿವ ಮಂಕಾಳ ವೈದ್ಯ, ಅವರ ಪುತ್ರಿ ಬೀನಾ ವೈದ್ಯ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಮಾಸಪ್ಪ ನಾಯ್ಕ, ಕಾಂಗ್ರೆಸ್ ಮುಖಂಡ ರವಿ ಶೆಟ್ಟಿ ಕವಲಕ್ಕಿ, ಪ್ರೊ. ರಾಜು ಮಾಳಗಿಮನೆ ಮುಂತಾದವರ ಸಹಕಾರದಲ್ಲಿ ಸಂಘಟಿಸಲಾಗಿದೆ ಎಂದು ತಿಳಿಸಿದರು.

ರಿಯಾಲಿಟಿ ಶೋ ಖ್ಯಾತಿಯ ಶ್ರೀರಾಮ ಜಾದೂಗಾರ ಮಾತನಾಡಿ, ಫೆ. ೨೦ರಂದು ೬-೧೪ ವರ್ಷದ ಮಕ್ಕಳಿಗೆ ಲಿಟಲ್ ಕರಾವಳಿ, ೧೪ ವರ್ಷ ಮೇಲ್ಪಟ್ಟವರಿಗೆ ಮಿಸ್ ಕರಾವಳಿ ಫ್ಯಾಶನ್‌ ಶೋ ಆಯೋಜಿಸಲಾಗಿದೆ. ನಿರ್ಣಾಯಕರಾಗಿ ಬಿಗ್ ಬಾಸ್ ಖ್ಯಾತಿಯ ಹಂಸ, ನಟಿ ಕಾವ್ಯಾ ಗೌಡ, ಮಾಡೆಲಿಂಗ್ ಹರ್ಷಿತಾ ರಾಠೋಡ, ಧಾರಾವಾಹಿ ನಟಿ ಸ್ವಾತಿ ಪಾಲ್ಗೊಳ್ಳುವರು. ವಿಶೇಷ ಆಹ್ವಾನಿತರಾಗಿ ವಾಗ್ಮಿ ಚೈತ್ರಾ ಕುಂದಾಪುರ ಭಾಗವಹಿಸುವರು. ಮಂಗಳೂರಿನ ಸಮದ್ ಗಡಿಯಾರ್, ದೀಪ್ತಿ ದಿಲ್ ಸೆ, ರಾಕೇಶ ದಿಲ್ ಸೆ, ಸಾದಿಕ್ ಬಿಂದಾಸ್ ಅವರಿಂದ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದರು.

ನೃತ್ಯ ಕಾರ್ಯಕ್ರಮದ ಸಂಘಟಕ ನಾಗರಾಜ ಮಾತನಾಡಿ, ಫೆ. ೨೧ರಂದು ರಾಜ್ಯ ಮಟ್ಟದ ಆಯ್ದ ತಂಡ ಹಾಗೂ ಜಿಲ್ಲೆಯ ವಿವಿಧ ತಂಡಗಳ ನೃತ್ಯ ಸ್ಪರ್ಧೆ ನಡೆಯಲಿದ್ದು, ನಿರ್ಣಾಯಕರಾಗಿ ಕೋರಿಯಾಗ್ರಾಫರ್ ಮುರುಗಾ ಮಾಸ್ಟರ್, ಡಿ.ಕೆ.ಡಿ. ವಿನ್ನರ್ ಬೃಂದಾ ಭಾಗವಹಿಸುವರು. ಸತೀಶ ಹೆಮ್ಮಾಡಿ ಅವರಿಂದ ಜಾದೂ ಪ್ರದರ್ಶನವಿದೆ ಎಂದು ತಿಳಿಸಿದರು.

ಫೆ. ೨೨ರಂದು ದ್ವಾಪರ ಹಾಡಿನ ಖ್ಯಾತಿಯ ಜಸ್ಕರನ್ ಸಿಂಗ್, ದಿವ್ಯಾ ರಾಮಚಂದ್ರ, ಅಶ್ವಿನ್ ಶರ್ಮಾ, ಸಂದೇಶ ನಿರ್ಮಾರ್ಗ ಹಾಗೂ ಶಿವಾನಿ ತಂಡದವರಿಂದ ಮ್ಯೂಸಿಕಲ್ ನೈಟ್ ಹಾಗೂ ಡಾನ್ಸ್ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಮಾತನಾಡಿ, ಫೆ. ೨೩ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ರಾತ್ರಿ ೧೦ ಗಂಟೆಗೆ ಶ್ರೀ ಹರ್ಷ, ಸುಪ್ರೀತ್‌ ಫಾಲ್ಗುಣ, ನಾದಿರಾ ಬಾನು, ವಾಸುಶ್ರೀ, ದಿಯಾ ಹೆಗಡೆ ತಂಡದವರಿಂದ ಗಾಯನ, ಮಿಮಿಕ್ರಿ ಕಿಂಗ್ ಗೋಪಿ, ಮಜಾಭಾರತದ ರಾಘವೇಂದ್ರ, ಸುಶ್ಮಿತಾ, ಹೇಮಾ ತಂಡದವರಿಂದ ಕಾಮಿಡಿ ಶೋ ನಡೆಯಲಿದೆ ಎಂದರು.

ಉತ್ಸವ ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಮನೋರಂಜನಾ ಕಾರ್ಯಕ್ರಮದ ಜತೆ ರಾಜ್ಯ ಮಟ್ಟದ ಕಲಾವಿದರನ್ನು ಆಹ್ವಾನಿಸುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.

ಸಮಿತಿಯ ಗೌರವಾಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ವಿವಿಧ ಸಂಘಟನೆಯ ಸಹಕಾರದ ಮೇರೆಗೆ ಸ್ಥಳಿಯ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.

ಸಂಘಟನೆಯ ಗೌರವ ಸಲಹೆಗಾರ ಶಿವರಾಜ ಮೇಸ್ತ, ಉಮೇಶ ಮೇಸ್ತ, ಜಯ ಕರ್ನಾಟಕ ಸಂಘಟನೆಯ ಆರ್.ಕೆ. ಮೇಸ್ತ, ಮೀನುಗಾರ ಸಂಘದ ನಿರ್ದೇಶಕ ರವಿ ಮೊಗೇರ, ಸಂಘಟಕ ವಿನಾಯಕ ಶೆಟ್ಟಿ ಸಾಲ್ಕೋಡ, ಮೋಹನ ಅಚಾರ್ಯ, ಮಣಿಕಂಠ ಶೆಟ್ಟಿ, ಶ್ರೀನಿವಾಸ ನಾಯ್ಕ, ಮತ್ತಿತರರು ಇದ್ದರು.