ಇನಾಂವೀರಾಪುರ ಗ್ರಾಮದಲ್ಲಿ ದೌರ್ಜನ್ಯ ಪ್ರಕರಣ ನಡೆದ ನಂತರದಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ರಕ್ಷಣೆ ಕಾರ್ಯ ನಿರ್ವಹಿಸಲಾಗಿದೆ. ಈ ಪ್ರಕರಣದಲ್ಲಿ ಅಮಾನತು ಮಾಡಲಾಗಿರುವ ಪೇದೆಗಳನ್ನು ತನಿಖೆ ಮಾಡಿ‌, ಕ್ರಮ ಕೈಗೊಳ್ಳಲಾಗುವುದು.

ಹುಬ್ಬಳ್ಳಿ:

ಇನಾಂ ವೀರಾಪೂರ ಗ್ರಾಮದಲ್ಲಿ ನಡೆದ ದೌರ್ಜನ್ಯ ಪ್ರಕರಣದ ಕುರಿತು ಸಂಪೂರ್ಣ ತನಿಖೆಗೆ ವಿಶೇಷ ಸರ್ಕಾರಿ ಅಭಿಯೋಜಕರು ಹಾಗೂ ತ್ವರಿತ ನ್ಯಾಯಾಲಯ ಸ್ಥಾಪನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಡಿಜಿಪಿ ಡಾ. ಕೆ. ರಾಮಚಂದ್ರರಾವ್ ಹೇಳಿದರು.

ಶನಿವಾರ ತಾಲೂಕಿನ ಇನಾಂ ವೀರಾಪೂರ ಗ್ರಾಮಕ್ಕೆ ತೆರಳಿ ವಿವೇಕಾನಂದ ದೊಡಮನಿ ಕುಟುಂಬಸ್ಥರನ್ನು ಭೇಟಿ ಮಾಡಿದ ಬಳಿಕ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನರ ವಿರುದ್ಧ ದೂರು ದಾಖಲಾಗಿದ್ದು, ಈಗಾಗಲೇ 8 ಜನರನ್ನು ಬಂಧಿಸಿದ್ದು, ಒಬ್ಬರು ಅಪ್ರಾಪ್ತ, ಉಳಿದ ಐವರು ಮಹಿಳೆಯರಿದ್ದಾರೆ. ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯವು ಮುಖ್ಯ ಸಾಕ್ಷಿಯಾಗಿದೆ. ಅದನ್ನು ವಶಕ್ಕೆ ಪಡೆದಿದ್ದು, ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ದೌರ್ಜನ್ಯ ಪ್ರಕರಣದಲ್ಲಿ 60 ದಿನಗಳೊಳಗೆ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಪ್ರಕರಣಕ್ಕೆ ಡಿಜಿಟಲ್ ಸಾಕ್ಷ್ಯಾಧಾರಗಳು ಬಹಳ ಮುಖ್ಯವಾಗಿದ್ದು ನೊಂದವರಿಗೆ ನ್ಯಾಯ ಒದಗಿಸಲಾಗುವುದು ಎಂದರು.

ಎಸ್ಪಿ ಗುಂಜನ್ ಆರ್ಯ ಮಾತನಾಡಿ, ಇನಾಂವೀರಾಪುರ ಗ್ರಾಮದಲ್ಲಿ ದೌರ್ಜನ್ಯ ಪ್ರಕರಣ ನಡೆದ ನಂತರದಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ರಕ್ಷಣೆ ಕಾರ್ಯ ನಿರ್ವಹಿಸಲಾಗಿದೆ. ಈ ಪ್ರಕರಣದಲ್ಲಿ ಅಮಾನತು ಮಾಡಲಾಗಿರುವ ಪೇದೆಗಳನ್ನು ತನಿಖೆ ಮಾಡಿ‌, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಿಗಾ ವಹಿಸಲಾಗುವುದು. ಘಟನೆ ನಡೆದ ಬಳಿಕ ಇನಾಂ ವೀರಾಪುರ ಗ್ರಾಮದಲ್ಲಿ ಶಾಂತಿ ಸಭೆ ಮಾಡಲಾಗಿದೆ. ಅಲ್ಲಿನ ಜನರು ಸಹ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲೂ ಮತ್ತಷ್ಟು ಶಾಂತಿ ಸಭೆ ಏರ್ಪಡಿಸಲಾಗುವುದು ಎಂದರು.

ಈ ವೇಳೆ ಡಿಸಿಆರ್‌ಇ ಬೆಳಗಾವಿ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದ ಇದ್ದರು.