ಆಧುನಿಕ ದಿನಗಳಲ್ಲೂ ಇಂತಹ ಘಟನೆಗಳು ನಡೆಯುತ್ತಿರುವುದು ಖಂಡನೀಯ ಎಂದ ಅವರು, ಗ್ರಾಮದಲ್ಲಿ ನಡೆದ ಘಟನೆಯಿಂದ ಕುಟುಂಬದವರೆಲ್ಲ ಭಯಭೀತರಾಗಿದ್ದಾರೆ. ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ, ವಿವೇಕಾನಂದಗೆ ಸರ್ಕಾರಿ ಉದ್ಯೋಗ, ಮನೆ ಹಾಗೂ ಆರ್ಥಿಕ ಪರಿಹಾರ ನೀಡುವುದು ಸೇರಿದಂತೆ ಕೆಲವು ಬೇಡಿಕೆ ಮುಂದಿಟ್ಟಿದ್ದಾರೆ.
ಹುಬ್ಬಳ್ಳಿ:
ಮರ್ಯಾದಾ ಹತ್ಯೆ ಪ್ರಕರಣಕ್ಕಾಗಿಯೇ ಪ್ರತ್ಯೇಕ ಕಾಯ್ದೆ ಜಾರಿಗೆ ತರುವ ಅಗತ್ಯವಿಲ್ಲ. ಈಗಾಗಲೇ ಸಾಕಷ್ಟು ಕಾನೂನುಗಳಿವೆ. ಅವುಗಳಲ್ಲಿ ಏನಾದರೂ ಲೋಪ-ದೋಷಗಳಿದ್ದರೆ ತಿದ್ದುಪಡಿ ಮಾಡಲು ಚಿಂತನೆ ನಡೆಸಲಾಗುವುದು. ಈ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ರಚಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.ಅವರು ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಮರ್ಯಾದಾ ಹತ್ಯೆಗೀಡಾದ ಮಾನ್ಯಾಳ ಪತಿ ವಿವೇಕಾನಂದ ದೊಡ್ಡಮನಿ ನಿವಾಸಕ್ಕೆ ಬುಧವಾರ ಸಂಜೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಆಧುನಿಕ ದಿನಗಳಲ್ಲೂ ಇಂತಹ ಘಟನೆಗಳು ನಡೆಯುತ್ತಿರುವುದು ಖಂಡನೀಯ ಎಂದ ಅವರು, ಗ್ರಾಮದಲ್ಲಿ ನಡೆದ ಘಟನೆಯಿಂದ ಕುಟುಂಬದವರೆಲ್ಲ ಭಯಭೀತರಾಗಿದ್ದಾರೆ. ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ, ವಿವೇಕಾನಂದಗೆ ಸರ್ಕಾರಿ ಉದ್ಯೋಗ, ಮನೆ ಹಾಗೂ ಆರ್ಥಿಕ ಪರಿಹಾರ ನೀಡುವುದು ಸೇರಿದಂತೆ ಕೆಲವು ಬೇಡಿಕೆ ಮುಂದಿಟ್ಟಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನ್ಯಾಯ ಒದಗಿಸಲಾಗುವುದು. ಈಗಾಗಲೇ ಜಿಲ್ಲಾಡಳಿತದಿಂದ ಪ್ರಾಥಮಿಕವಾಗಿ ನೀಡಬೇಕಾದ ಪರಿಹಾರ ನೀಡಿದೆ ಎಂದರು.ಘಟನೆ ನಡೆದ ಒಂದು ಗಂಟೆಯೊಳಗೆ ನನಗೆ ಮಾಹಿತಿ ಗೊತ್ತಾಗಿದೆ. ಅಧಿಕಾರಿಗಳಿಗೆ ಏನು ಸೂಚನೆ ನೀಡಬೇಕೋ ಅದನ್ನೆಲ್ಲ ನೀಡಲಾಗಿದೆ. ಅದಕ್ಕೆ ಅನುಗುಣವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಆಸ್ಪತ್ರೆಗೆ ಭೇಟಿ:ಬಳಿಕ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವೇಕಾನಂದ ತಾಯಿ ರೇಣವ್ವ ದೊಡ್ಡಮನಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಉತ್ತಮ ಚಿಕಿತ್ಸೆ, ಔಷಧಿ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಈ ವೇಳೆ ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಐಜಿ ಚೇತನ ಸಿಂಗ್ ರಾಠೋಡ, ಜಿಲ್ಲಾಧಿಕಾರಿ ದಿವ್ಯಪ್ರಭು, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ ಆರ್ಯ ಸೇರಿದಂತೆ ಇತರರು ಇದ್ದರು.ಹುಬ್ಬಳ್ಳಿಯಲ್ಲಿ ಮನೆ
ಗೃಹ ಸಚಿವರು ವಿವೇಕಾನಂದ ದೊಡ್ಡಮನಿ ಕುಟುಂಬದವರೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಈ ವೇಳೆ ಕುಟುಂಬಸ್ಥರು ಆದಷ್ಟು ಬೇಗನೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು, ನಮಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದರು. ಜತೆಗೆ ನಮಗೆ ಗ್ರಾಮದಲ್ಲಿ ಇರಲು ಭಯವಾಗುತ್ತಿದ್ದು, ಬೇರೆಡೆ ಮನೆ, ಜೀವನಕ್ಕೆ ಸರ್ಕಾರಿ ಉದ್ಯೋಗ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಹುಬ್ಬಳ್ಳಿಯಲ್ಲಿ ಮನೆ ವ್ಯವಸ್ಥೆ ಮಾಡುವಂತೆ ಶಾಸಕ ಪ್ರಸಾದ ಅಬ್ಬಯ್ಯಗೆ ಸೂಚಿಸಿದರು. ಆಗ ಅಬ್ಬಯ್ಯ, ಆದಷ್ಟು ಶೀಘ್ರವೇ ಆಶ್ರಯ ಮನೆ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜತೆಗೆ ಕುಟುಂಬಕ್ಕೆ ಬೇಕಾದ ಭದ್ರತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ವೈಯಕ್ತಿಕವಾಗಿ ಸಚಿವರು ಕುಟುಂಬಕ್ಕೆ ₹3 ಲಕ್ಷ ಧನಸಹಾಯ ಮಾಡಿದರು.