ಸಾರಾಂಶ
ಮರಿಯಮ್ಮನಹಳ್ಳಿ: ಇಲ್ಲಿಯ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭವ್ಯ ಇತಿಹಾಸವಿದೆ, ಅದ್ಭುತ ಶಕ್ತಿಯಿದೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ನೇಮಿರಾಜ್ ನಾಯ್ಕ್ ಹೇಳಿದರು.
ಇಲ್ಲಿನ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಎರಡು ನೂತನ ರಥಗಳ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳಾದ ಜಯರಾಜ್ ಸಿಂಗ್ ಹಾಗೂ ಶ್ಯಾಮ್‌ರಾಜ್ ಸಿಂಗ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಸುಮಾರು 500-600 ವರ್ಷಗಳ ಹಿಂದೆ ನಾರಾಯಣದೇವರಕೆರೆಯಲ್ಲಿ ಈ ದೇವಸ್ಥಾನಗಳನ್ನು ನಿರ್ಮಿಸಲಾಗಿತ್ತು. ಅಲ್ಲಿಂದ ಮರಿಯಮ್ಮನಹಳ್ಳಿಗೆ ಸ್ಥಳಾಂತರಿಸಲಾಯಿತು. ಪ್ರತಿವರ್ಷ ಶ್ರೀರಾಮ ನವಮಿಯಂದು ಜೋಡು ರಥೋತ್ಸವ ನಡೆಯುತ್ತದೆ ಎಂದು ಅವರು ವಿವರಿಸಿದರು.ಈ ಜೋಡಿ ರಥಗಳು ಶಿಥಿಲಾವಸ್ಥೆ ತಲುಪಿತ್ತು. ಹೊಸ ರಥ ನಿರ್ಮಾಣಕ್ಕೆ ಅಂದಾಜು ₹3 ಕೋಟಿ ಬೇಕಿತ್ತು. ಆಗ ಹೊಸಪೇಟೆಯ ಉದ್ಯಮಿಗಳಾದ ಶಾಮರಾಜ್ ಸಿಂಗ್ ಅವರು ₹1.5 ಕೋಟಿ ವೆಚ್ಚದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವರ ನೂತನ ರಥ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು. ಜಯರಾಜ್ ಸಿಂಗ್ ಅವರು ಸಹ ₹50 ಲಕ್ಷಗಳನ್ನು ಶ್ರೀ ಆಂಜನೇಯಸ್ವಾಮಿ ದೇವರ ನೂತನ ರಥದ ನಿರ್ಮಾಣಕ್ಕೆ ದೇಣಿಗೆ ನೀಡಿದರು. ಈ ರಥ ನಿರ್ಮಾಣಕ್ಕೆ ಭಕ್ತರ ಸಹಕಾರವೂ ಬೇಕು ಎಂದು ಎಂದು ಅವರು ವಿವರಿಸಿದರು. ದೇವಸ್ಥಾನ ಅಭಿವೃದ್ಧಿ ಜತೆಗೆ ಮುಖ್ಯದ್ವಾರ ನಿರ್ಮಾಣ ನಿರ್ಮಾಣ ಕಾರ್ಯ ಸಹ ನಡೆಯಲಿದೆ. ಶಿಲೆಯ ಮುಖ್ಯದ್ವಾರ ನಿರ್ಮಾಣವಾಗಲಿದೆ. ಮುಖ್ಯದ್ವಾರದ ಮೇಲೆ 108 ಅಡಿಗಳಷ್ಟು ರಾಜಗೋಪುರ ನಿರ್ಮಾಣವಾಗಲಿದೆ ಎಂದರು.ಹೊಸಪೇಟೆಯ ಉದ್ಯಮಿಗಳಾದ ಜಯರಾಜ್ ಸಿಂಗ್ ಮತ್ತು ಶಾಮರಾಜ್ ಸಿಂಗ್ ಮಾತನಾಡಿ, ದೇವರ ಕೆಲಸಕ್ಕೆ ಮತ್ತು ಒಳ್ಳೆಯ ಕೆಲಸಕ್ಕೆ ನಮ್ಮ ಕುಟುಂಬದಿಂದ ಅಳಿಲು ಸೇವೆ ಸಲ್ಲಿಸುತ್ತೇವೆ. ದೇವರ ಆಜ್ಞೆಯನ್ನು ಪಾಲಿಸಿಕೊಂಡು ಹೋಗುತ್ತಿದ್ದೇವೆ. ದೇವರಿಗೆ ಕೊಡುವಷ್ಟು ದೊಡ್ಡವರು ನಾವಲ್ಲ ಎಂದರು.
ರೂಪ ಎಲೆಗಾರ್, ದೊಡ್ಡ ಮಂಜುನಾಥ, ಎಂ. ವೆಂಕಟೇಶ್, ತಳವಾರ್ ದೊಡ್ಡ ರಾಮಣ್ಣ, ಮಜ್ಗಿ ಶಿವಪ್ಪ, ಸಣ್ಣ ದುರುಗಪ್ಪ, ವಿ.ಎನ್. ನಾಗೇಶ್, ಈ. ಎರ್ರಿಸ್ವಾಮಿ, ಡಿ. ನರಸಿಂಹಮೂರ್ತಿ, ಗೋವಿಂದರ ಪರಶುರಾಮ, ಸಜ್ಜೇದ್ ವಿಶ್ವನಾಥ, ಕೆ. ರಘುವೀರ್, ಬಿ. ರುದ್ರಮುನಿ ಉಪಸ್ಥಿತರಿದ್ದರು.ಪೂಜಾರ್ ನೇಹಾ ಪ್ರಾರ್ಥಿಸಿದರು. ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯ ಚಿದ್ರಿ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪ ತಹಸೀಲ್ದಾರ್ ಎಚ್. ನಾಗರಾಜ ವಂದಿಸಿದರು.
ಎರಡು ನೂತನ ರಥಗಳ ನಿರ್ಮಾಣ ಕಾಮಗಾರಿಗಾಗಿ ಮರಿಯಮ್ಮನಹಳ್ಳಿಗೆ ಆಗಮಿಸಿದ ತೇಗ, ಹೊನ್ನೆ, ಭೋಗಿ ಮತ್ತು ಶಿವನ ಕಟ್ಟಿಗೆಯ ದಿನ್ನೆಗಳನ್ನು ಹೊತ್ತ ಎರಡು ಲಾರಿಗಳಿಗೆ ಪಟ್ಟಣದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಲಾಯಿತು. ರಥದ ನೀಲನಕ್ಷೆಯನ್ನು ಶಾಸಕ ಕೆ. ನೇಮಿರಾಜ್ ನಾಯ್ಕ್ ಅನಾವರಣಗೊಳಿಸಿದರು.ಉದ್ಯಮಿಗಳಾದ ಜಯರಾಜ್ ಸಿಂಗ್ ಮತ್ತು ಶಾಮರಾಜ್ ಸಿಂಗ್ ಹಾಗೂ ಬಾಲಾಜಿ ಸಿಂಗ್ ಅವರನ್ನು ಗೌರವಿಸಲಾಯಿತು.
ಹನುಮ ಮಾಲಾಧಾರಿಗಳಿಂದ ಶ್ರೀವಿಷ್ಣು ಸಹಸ್ರನಾಮ, ಶ್ರೀ ಲಲಿತ ಸಹಸ್ರ ನಾಮ ಮತ್ತು ಶ್ರೀ ಹನುಮಾನ್ ಚಾಲೀಸ್ ಪಠಣ ಹಾಗೂ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.