ನಮ್ಮ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನ ಪುರಾಣ ಇತಿಹಾಸ ಹೊಂದಿದ್ದು, ಇಲ್ಲಿ ಪ್ರಾಚೀನ ಕಾಲದಿಂದಲೂ ಹಬ್ಬ ಹರಿದಿನಗಳಲ್ಲಿ ವಿಶೇಷ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ನಮ್ಮ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನ ಪುರಾಣ ಇತಿಹಾಸ ಹೊಂದಿದ್ದು, ಇಲ್ಲಿ ಪ್ರಾಚೀನ ಕಾಲದಿಂದಲೂ ಹಬ್ಬ ಹರಿದಿನಗಳಲ್ಲಿ ವಿಶೇಷ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಊರಿನ ಎಲ್ಲರೂ ಒಂದೆಡೆ ಸೇರಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿ ಎಲ್ಲರೂ ನೆರೆಯುವ ಒಂದು ಹಬ್ಬದ ವಾತಾವರಣ ಇತ್ತು. ಅದಿಂದು ಹಳ್ಳಿಗಳಲ್ಲಿ ಕಾಣದಂತಾಗಿದೆ ಎಂದು ದೇವಸ್ಥಾನದ ಅಧ್ಯಕ್ಷ ಎನ್.ಆರ್.ಭಟ್ಟ ಬಿದ್ರೆಪಾಲ ಹೇಳಿದರು.

ಬುಧವಾರ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಮತ್ತು ಸಿರಿ ಕಲಾಬಳಗ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅನಾದಿಕಾಲದಿಂದಲೂ ನಡೆದುಬಂದಂತೆ ರಾತ್ರಿ ಬೆಳಗಿನವೆರೆಗೂ ಜಾಗರಣೆ ನಡೆಯುವ ಪರಿಪಾಟ ಇಂದಿಗೂ ಇದೆ. ಬದಲಾವಣೆಯ ಕಾಲಘಟ್ಟದಲ್ಲಿ ನಾವಿಂದು ಇಂತಹ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಿ, ದೇವರ ಮುಂದೆ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಕಳೆದ ೬ ವರ್ಷಗಳಿಂದ ಸಿರಿ ಕಲಾಬಳಗ ನಮಗೆ ಕೈಜೋಡಿಸಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ಇಂದು ಹಳ್ಳಿಗಳು ಬರಡಾಗಲು ಕುಟುಂಬದಲ್ಲಿ ಒಂದೆರಡು ಮಕ್ಕಳನ್ನು ಪಡೆಯುವುದು ಕಾರಣ. ಅವರೂ ಉನ್ನತ ವ್ಯಾಸಂಗಕ್ಕಾಗಿ ಮಹಾನಗರಕ್ಕೆ ಹೋಗುವುದು, ಸಂಸ್ಕಾರವಿಲ್ಲದ ಶಿಕ್ಷಣವೂ ಒಂದು ಕಾರಣ. ಯುವಕರು ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಆರ್ಥಿಕವಾಗಿ ಸಬಲರಾಗಿದ್ದಾರೆ. ಆದ್ದರಿಂದ ಬೇರೆಯವರ ಕಾರ್ಯಕ್ರಮದಿಂದ ನಮಗೇನು ಲಾಭ ಎನ್ನುವ ಚಿಂತನೆ ಬೆಳೆಯುತ್ತಿದೆ. ಅಲ್ಲದೇ ಜಂಗಮವಾಣಿಯಿಂದ ಕುಳಿತಲ್ಲೇ ಜಗತ್ತಿನ ಚಿತ್ರಣವನ್ನು ಕಾಣಬಹುದು. ಈ ಎಲ್ಲ ಕಾರಣಗಳಿಂದ ಇಂದು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜನ ವಿರಳವಾಗುತ್ತಿದ್ದಾರೆ. ಆದರೂ ಕಲೆ, ಕಲಾವಿದರು ಉಳಿಯಬೇಕಾದರೆ ಸಂಘಟನೆ ನಿರಂತರ ಇರಬೇಕು ಎಂದರು.

ಸನ್ಮಾನಿತರಾದ ಜಿ.ಎಸ್. ಗಾಂವ್ಕರ ಕಂಚಿಪಾಲ, ವಿ.ಟಿ. ಭಟ್ಟ ಸಾಂದರ್ಭಿಕ ಮಾತನಾಡಿದರು. ಸನ್ಮಾನಿತರಾದ ನಾರಾಯಣ ಭಾಗ್ವತ ದೇವರಗದ್ದೆ, ಗಣಪತಿ ಭಟ್ಟ ಕವಡಿಕೆರೆ, ವಿಶ್ವೇಶ್ವರ ಹೆಬ್ಬಾರ ಹಾಲೆಪಾಲ, ನರಸಿಂಹ ಭಟ್ಟ ಚಂದಗುಳಿ ಶುಭಹಾರೈಸಿದರು. ವೇ.ಮೂ. ಮಹೇಶ ಭಟ್ಟ ಕಂಚನಗದ್ದೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಗೇಂದ್ರ ಭಾಗ್ವತ ಶೇಡಿಜಡ್ಡಿ ಯಕ್ಷಗಾನ ಪದ್ಯದೊಂದಿಗೆ ಪ್ರಾರ್ಥಿಸಿದರು. ಸಂಘಟಕರಾದ ರವೀಂದ್ರ ಭಟ್ಟ ಅಣಲಗಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶ್ರೀಧರ ಅಣಲಗಾರ ನಿರ್ವಹಿಸಿ, ವಂದಿಸಿದರು.