ಸಾರಾಂಶ
ರಾಮನಗರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಿಸಲು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಶ್ರಮಿಸುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಗಾಂಧೀಜಿ ಅವರಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗೌರವ ಸಲ್ಲಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗಾಂಧೀಜಿರವರ ಆಶಯದಂತೆ ಬಡವರ, ಮಹಿಳೆಯರ, ಶೋಷಿತರ, ದಲಿತರ ಸಬಲೀಕರಣಕ್ಕೆ ಒತ್ತು ನೀಡಿದೆ. ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಅರ್ಹ ಕುಟುಂಬದ ಫಲಾನುಭವಿಗಳಿಗೆ ಅಂದಾಜು ವಾರ್ಷಿಕ 48-60 ಸಾವಿರ ರು. ಸೌಲಭ್ಯ ನೇರವಾಗಿ ತಲುಪಿಸುತ್ತಿದೆ ಎಂದರು.ಜಾತಿ, ಮತ, ಧರ್ಮ, ಭಾಷೆ ಆಧಾರದ ಭೇದ-ಭಾವವಿಲ್ಲದೆ ದೇಶದ ವೈವಿಧ್ಯತೆ ಗೌರವಿಸಿ, ಅಖಂಡತೆಯನ್ನು ಪಾಲಿಸುತ್ತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಾಗಿದೆ. ಎಲ್ಲರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ‍್ಯ ದೊರಕಿಸುವ ಮೂಲಕ ರಾಜಕೀಯ ಸ್ವಾತಂತ್ರ‍್ಯ ಅಬಾಧಿತವಾಗುವಂತೆ ಶ್ರಮಿಸಬೇಕಾಗಿದೆ. ಈ ಗುರಿ ಸಾಧನೆಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ. ಸ್ವಸ್ಥ, ಸಮೃದ್ಧ, ಸಮ-ಸಮಾಜದ ನಾಡು ಕಟ್ಟೋಣ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಆರಿಸಿಕೊಂಡ ವಿಶ್ವದ ಏಕೈಕ ಹೋರಾಟಗಾರ. ಇಂದು ದೇಶಾದ್ಯಂತ ಪ್ರಚಲಿತವಿರುವ “ಆತ್ಮ-ನಿರ್ಭರ ಭಾರತ” ಎಂಬ ಪದವನ್ನು ಗಾಂಧೀಜಿಯವರು 100 ವರ್ಷಗಳ ಹಿಂದೆಯೇ “ಸ್ವದೇಶಿ” ಎಂಬುದಾಗಿ ವ್ಯಾಖ್ಯಾನ ಮಾಡಿ ಬ್ರಿಟೀಷ್‌ರ ವಿರುದ್ಧ ಆರ್ಥಿಕ ಕ್ರಾಂತಿ ಮಾಡಿದ್ದರು ಎಂದರು.ಶಾಂತಿ ಮಾರ್ಗದಿಂದ ಸ್ವಾತಂತ್ರ‍್ಯಗಳಿಸಿದ ಅಪರೂಪದ ಕೀರ್ತಿ ನಮ್ಮ ಭಾರತಕ್ಕೆ ಸಲ್ಲಬೇಕು. ಏಕೆಂದರೆ, ವಿಶ್ವದ ಕೈಗಾರಿಕಾ ಕ್ರಾಂತಿಯ ನಂತರ ಬ್ರಿಟನ್ ಅಗಾಧ ರೀತಿಯಲ್ಲಿ ಸನ್ನದ್ಧಗೊಂಡು, ತನ್ನ ಸೇನಾ ಬಲ ಹಾಗೂ ನೌಕಾ ಬಲದಿಂದಾಗಿ ಅದು ಶಕ್ತಿವಂತ ದೇಶವಾಗಿತ್ತು. ಬ್ರಿಟನ್ ಸೇನೆ ಭಾಗವಹಿಸಿದ ಯಾವುದೇ ಯುದ್ಧಗಳಲ್ಲಿ ಅದು ಸೋತಿದ್ದೇ ಇಲ್ಲ ಎಂಬಂತಿತ್ತು. ಗಾಂಧೀಜಿ ಹುಟ್ಟುವ ಮೊದಲೇ ಭಾರತದಲ್ಲಿ ನಡೆದ ಶಸಸ್ತ್ರ ಹೋರಾಟಗಳನ್ನು ಬ್ರಿಟಿಷರು ದಮನಿಸಿದ್ದರು. ಶಸಸ್ತ್ರ ಯುದ್ಧದ ಮೂಲಕ ಬ್ರಿಟಿಷರನ್ನು ಹಿಮ್ಮೆಟ್ಟಿಸಲು ವ್ಯವಸ್ಥೆಗಳು ಇರಲಿಲ್ಲ. ಗಾಂಧೀಜಿ ಒಬ್ಬ ಮಹಾನ್ ವಾಸ್ತವವಾದಿ. ಬ್ರಿಟಿಷರನ್ನು ಎದುರಿಸಲು ಅಹಿಂಸಾತ್ಮಕ ಹೋರಾಟ ಎಂಬ ಪ್ರಬಲ ಅಸ್ತ್ರವನ್ನು ಬಳಸಿದರು ಎಂದು ಸ್ಮರಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿಯಿಂದ ರಚಿತವಾದ ನಮ್ಮ ಸಂವಿಧಾನವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನಿಲ್ಲಲು ಕಾರಣವಾಗಿದೆ. ಸಂವಿಧಾನದ ಪೂರ್ವ ಪೀಠಿಕೆಯು ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಒಳಗೊಂಡಿದೆ. ನಮ್ಮ ರಾಷ್ಟ್ರ ನಿರ್ಮಾತೃಗಳ ಕನಸುಗಳನ್ನು ನನಸಾಗಿಸಲು, ನಾವೆಲ್ಲರೂ ಸೌಹಾರ್ದತೆ ಮತ್ತು ಸಹೋದರತ್ವದ ಮನೋಭಾವದಿಂದ ಮುನ್ನಡೆಯಲು ಅದು ಕಾರಣವಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನಕ್ಕೆ ರಾಮಲಿಂಗಾರೆಡ್ಡಿ ಗೌರವ ಸಲ್ಲಿಸಿದರು. ವಿವಿಧ ಶಾಲೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡಿತು. ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂರು ಶಾಲಾ ತಂಡಗಳಿಗೆ ಪ್ರಥಮ ಬಹುಮಾನ ಹಾಗೂ ಪ್ರಶಸ್ತಿ ಪತ್ರ , ಅಂಗಾಗ ದಾನಕ್ಕೆ ಸಮ್ಮತಿಸಿದ ಕುಟುಂಬದವರನ್ನು ಸಚಿವ ರಾಮಲಿಂಗಾರೆಡ್ಡಿ ಸನ್ಮಾನಿಸಿದರು.
ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಡಾ. ಸಿ.ಎನ್. ಮಂಜುನಾಥ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ರಾಮನಗರ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ), ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಉಪವಿಭಾಗಾಧಿಕಾರಿ ಬಿನೋಯ್ , ಪದ್ಮಶ್ರೀ ಪುರಸ್ಕೃತ ಹಾಸನ್ ರಘು ಮತ್ತಿತರರು ಉಪಸ್ಥಿತರಿದ್ದರು.-------------------------------
15ಕೆಆರ್ ಎಂಎನ್ 1,2.ಜೆಪಿಜಿ1.ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಧ್ವಜಾರೋಹಣ ನೆರವೇರಿಸಿದರು.
2.ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಪಥಸಂಚಲನ ತಂಡಕ್ಕೆ ಗೌರವ ಸಲ್ಲಿಸಿದರು.---------------------------