ಮಹಾತ್ಮರ ಆದರ್ಶ ಹೊಂದಿದಾಗ ಅವರ ಪ್ರತಿಮೆಗೆ ಗೌರವ: ರುದ್ರಪ್ಪ ಲಮಾಣಿ

| Published : Feb 14 2025, 12:31 AM IST

ಮಹಾತ್ಮರ ಆದರ್ಶ ಹೊಂದಿದಾಗ ಅವರ ಪ್ರತಿಮೆಗೆ ಗೌರವ: ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮರ ಪ್ರತಿಮೆಗಳು ಅಥವಾ ವೃತ್ತಗಳಲ್ಲಿ ಅಳವಡಿಸುವ ನಾಮಫಲಕಗಳಿಗೆ ನಿಜವಾದ ಗೌರವ ಬರಬೇಕಾದರೆ ಮೊದಲು ನಾವು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿಧಾನಸಭೆಯ ಉಪಾಧ್ಯಕ್ಷರಾದ ರುದ್ರಪ್ಪ ಲಮಾಣಿ ಬಂಜಾರ ಸಮುದಾಯದ ಯುವಕರಿಗೆ ಕರೆ ನೀಡಿದರು.

ವಿಧಾನಸಭೆಯ ಉಪಾಧ್ಯಕ್ಷ ಅಭಿಪ್ರಾಯ । ಸೇವಾಲಾಲ್ 286ನೇ ಜಯಂತಿ । ಸಂತರ ಹೆಸರಿನ ನಾಮಫಲಕ ಅನಾವರಣ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಹಾತ್ಮರ ಪ್ರತಿಮೆಗಳು ಅಥವಾ ವೃತ್ತಗಳಲ್ಲಿ ಅಳವಡಿಸುವ ನಾಮಫಲಕಗಳಿಗೆ ನಿಜವಾದ ಗೌರವ ಬರಬೇಕಾದರೆ ಮೊದಲು ನಾವು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿಧಾನಸಭೆಯ ಉಪಾಧ್ಯಕ್ಷರಾದ ರುದ್ರಪ್ಪ ಲಮಾಣಿ ಬಂಜಾರ ಸಮುದಾಯದ ಯುವಕರಿಗೆ ಕರೆ ನೀಡಿದರು.

ನಗರದಲ್ಲಿ ಗುರುವಾರ ಸಂತಶ್ರೇಷ್ಠ ಸೇವಾಲಾಲ್ ಅವರ 286ನೇ ಜಯಂತಿ ಅಂಗವಾಗಿ ಹೊನ್ನಾಳಿ ಪಟ್ಟಣದ ತುಂಗಭದ್ರಾ ನದಿ ಸಮೀಪ ಇರುವ ವೃತ್ತಕ್ಕೆ ಸಂತಸೇವಾಲಾಲರ ವೃತ್ತ ಹೆಸರಿನ ನಾಮಫಲಕ ಅನಾವರಣ ಮಾಡಿ ಮಾತನಾಡಿದರು.

ನಾಮಫಲಕ ಅಥವಾ ಪ್ರತಿಮೆ ಅನಾವರಣ ಮಾಡುವುದು ಮುಖ್ಯವಲ್ಲ ಮಹಾತ್ಮರ ಹೆಸರಿನಲ್ಲಿ ಯಾವಾಗಲೂ ಒಳ್ಳೆಯ ಸಮಾಜಮುಖಿ ಕಾರ್ಯಗಳು ನಡೆಯಬೇಕೇ ಹೊರತು ಸಾಮರಸ್ಯ ಹಾಳಾಗಬಾರದು ಆ ನಿಟ್ಟಿನಲ್ಲಿ ಎಲ್ಲರೂ ಸದ್ಭಾವದಿಂದ ಜೀವನ ನಡೆಸಬೇಕು ಎಂದರು.

ಇಲ್ಲಿ ನಾಮಫಲಕ ಹಾಗೂ ಪ್ರತಿಮೆ ಅನಾವರಣಕ್ಕೆ ಒಂದೇ ದಿನದಲ್ಲಿ ಸಂಬಂಧಪಟ್ಟ ಸಚಿವರ ಬಳಿ ಲಿಖಿತ ಅನುಮತಿ ಪಡೆದು ಇಲ್ಲಿ ಪ್ರತಿಮೆ ಅನಾವರಣ ಹಾಗೂ ನಾಮಫಲಕ ಅಳವಡಿಕೆಗೆ ಸಂಬಂಧಪಟ್ಟ ಪುರಸಬೆಯಿಂದಲೂ ಅನುಮತಿ ಪಡೆಯಲಾಗಿದೆ ಎಂದರು.

ಸಂತರು,ಶರಣರು ನಡೆದಾಡಿರುವ ಈ ಹೊನ್ನಾಳಿ ಪಟ್ಟಣದಲ್ಲಿ ನಮ್ಮ ಸಂತರ ಹೆಸರನ್ನುಇಟ್ಟು ನಾಮಫಲಕ ಅನಾವರಣ ಮಾಡಲಿಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡಿರುವುದಕ್ಕೆ ಹಾಲಿ ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಸಮುದಾಯದ ಪ್ರಮುಖರಿಗೆ ಧನ್ಯವಾದ ಅರ್ಪಿಸಿದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಕೆಲವು ತಿಂಗಳ ಹಿಂದೆಯೇ ಈ ಸ್ಥಳದಲ್ಲಿ ಇಲ್ಲಿ ನಾಮಫಲಕ ಅನಾವರಣಕ್ಕೆ ಸಮುದಾಯದ ಯುವಕರು ಮನವಿ ಮಾಡಿದ್ದರು,ಆದರೆ ಸರ್ಕಾರ ಹಾಗೂ ಪುರಸಭೆಯಿಂದ ಅನುಮತಿ ಪಡೆದೇ ನಾಮಫಲಕ ಅನಾವರಣ ಮಾಡೋಣ ಎಂದು ಹೇಳಿದ್ದೆ, ಅದರಂತೆ ಈಗ ನಾಮಫಲಕ ಅನಾವರಣಾ ಆಗುತ್ತಿದೆ ಎಂದರು.

ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್ ಜಯದೇವನಾಯ್ಕ ಮಾತನಾಡಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ನಮ್ಮ ಸಮುದಾಯದವರು ಬಹಳ ಅದೃಷ್ಟ ಮಾಡಿದ್ದಾರೆ,ಕಾಂಗ್ರೆಸ್ ಇರಲಿ ಬಿಜೆಪಿ ಇರಲಿ ಯಾವುದೇ ಸರ್ಕಾರ ಅಥವಾ ಯಾವುದೇ ಪಕ್ಷದ ಶಾಸಕರಿರಲಿ ನಮ್ಮ ಸಮುದಾಯದವರು ಬಹಳ ಪ್ರೀತಿಯಿಂದ ಕೆಲಸ ಮಾಡಿಸುತ್ತಾರೆ,ಹೊನ್ನಾಳಿ ಪಟ್ಟಣಕ್ಕೆ ಸಮೀಪ ಇರುವ ಸ್ಥಳದಲ್ಲಿ ಸಮುದಾಯಕ್ಕೆ ಸ್ಥಳ ನೀಡಿದರೆ ನಾನು ಸಮುದಾಯ ನಿರ್ಮಾಣಕ್ಕೆ ನಿಗಮದಿಂದ 2 ಕೋಟಿ ರು. ಹಣ ನೀಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಬಂಜಾರ ಸಮುದಾಯದವರು ಯಾರೇ ಬರಲಿ ಇಲ್ಲಿ ಪಕ್ಷಾತೀತವಾಗಿ ತಮ್ಮ ತಾಂಡ ಅಥವಾ ಗ್ರಾಮದ ಅಭಿವೃದ್ಧಿಗೆ ಒಟ್ಟಾಗಿ ಬಂದು ಕೆಲಸ ಮಾಡಿಸಿಕೊಂಡು ಹೋಗುತ್ತಾರೆ,ಅಭಿವೃದ್ಧಿಗೆ ಇಂತಹ ಒಗ್ಗಟ್ಟು ಮುಂದೆಯೂ ಇರಬೇಕು ಎಂದರು.

ಹೊನ್ನಾಳಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್,ಪುರಸಭೆ ಅಧ್ಯಕ್ಷ ಮೈಲಪ್ಪ,ಸಮುದಾಯದ ಪ್ರಮುಖರಾದ ಡಾ,ಈಶ್ವರ್‌ನಾಯ್ಕ್,ಸುರೇಂದ್ರನಾಯ್ಕ್,ಮಾರುತಿನಾಯ್ಕ್,ಅಂಜುನಾಯ್ಕ್,ಜುಂಜ್ಯಾನಾಯ್ಕ್,ರಮೇಶ್‌ನಾಯ್ಕ್,ಪುರಸಭೆ ಸದಸ್ಯ ಬಾಬು ಹೋಬಳದಾರ್ ಮುಖ್ಯಾಧಿಕಾರಿ ಲೀಲಾವತಿ,ವಿಜೇಂದ್ರಪ್ಪ ಇದ್ದರು.