ಸರಗೂರಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೂತನ ಸಂಸದರಿಗೆ ಸನ್ಮಾನ

| Published : Oct 09 2024, 01:45 AM IST

ಸರಗೂರಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೂತನ ಸಂಸದರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಸರಗೂರಿನಲ್ಲಿ ಭವನ ನಿರ್ಮಾಣಕ್ಕೆ ನಿವೇಶನದ ಕೊರತೆ ಇದ್ದು, ಶಾಸಕರು, ತಾಲೂಕು ಆಡಳಿತ ನಿವೇಶನ ಕೊಡಿಸುವುದಾದರೆ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಇದಲ್ಲದೆ ಸರಗೂರು ಪಟ್ಟಣದಲ್ಲಿರುವ ಅಂಬೇಡ್ಕರ್ ಭವನದ ಅಭಿವೃದ್ಧಿಗೆ ಒಂದು ಕೋಟಿ ರು. ಅನುದಾನ ನೀಡಲಾಗುವುದು. ಜನಾಂಗದವರು ಸಂಘಟನೆಯಲ್ಲಿ ತೊಡಗಿದರೆ ಸಂಪೂರ್ಣವಾಗಿ ಸಹಕಾರ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಸರಗೂರು

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆದಿ ಕರ್ನಾಟಕ ಮಹಾಸಭಾ ಕೋಟೆ, ಸರಗೂರು ಘಟಕದಿಂದ ನಡೆದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಸಂಸದರಿಗೆ ಸನ್ಮಾನ ಸಮಾರಂಭ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೋಟೆ ಮಾದರಿಯಲ್ಲಿಯೇ ಸರಗೂರಿನಲ್ಲಿಯೂ ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 5 ಕೋಟಿ ರು. ಅನುದಾನವನ್ನು ಸರ್ಕಾರದಿಂದ ಕೊಡಿಸಿಕೊಡುವುದಾಗಿ ಭರವಸೆ ನೀಡಿದರು.

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೂತನ ಸಂಸದರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸರಗೂರಿನಲ್ಲಿ ಭವನ ನಿರ್ಮಾಣಕ್ಕೆ ನಿವೇಶನದ ಕೊರತೆ ಇದ್ದು, ಶಾಸಕರು, ತಾಲೂಕು ಆಡಳಿತ ನಿವೇಶನ ಕೊಡಿಸುವುದಾದರೆ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಇದಲ್ಲದೆ ಸರಗೂರು ಪಟ್ಟಣದಲ್ಲಿರುವ ಅಂಬೇಡ್ಕರ್ ಭವನದ ಅಭಿವೃದ್ಧಿಗೆ ಒಂದು ಕೋಟಿ ರು. ಅನುದಾನ ನೀಡಲಾಗುವುದು. ಜನಾಂಗದವರು ಸಂಘಟನೆಯಲ್ಲಿ ತೊಡಗಿದರೆ ಸಂಪೂರ್ಣವಾಗಿ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.

ಸನ್ಮಾನ ಸ್ವೀಕರಿಸಿದ ಸಂಸದ ಸುನಿಲ್ ಬೋಸ್ ಮಾತನಾಡಿ, ಮೌಢ್ಯ ಬಿಟ್ಟು ಶಾಲೆಗಳತ್ತ ಮುಖ ಮಾಡಿ. ಎಲ್ಲರಲ್ಲೂ ಪ್ರತಿಭೆ ಇರುತ್ತೆ. ಅದನ್ನು ಹೊರ ತರಬೇಕಷ್ಟೆ. ಪೋಷಕರು ಮಕ್ಕಳ ಪ್ರತಿಭೆ ಗುರುತಿಸುವ ಕೆಲಕ್ಕೆ ಹೋಗುವುದಿಲ್ಲ. ಒತ್ತಡಕ್ಕೆ ಮಣಿದು ಕಲಿಕೆ ಮಾಡಬೇಡಿ. ಆಸಕ್ತಿಗೆ ಅನುಗುಣವಾಗಿ ಕಲಿಕೆ ಆರಂಭಿಸಿ ಎಂದು ಕಿವಿಮಾತು ಹೇಳಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ವಿಶ್ವಜ್ಞಾನಿ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮಹತ್ವ ಸ್ಥಾನ ನೀಡಿದ್ದರು. ಶಿಕ್ಷಣ, ಸಂಘಟನೆ, ಹೋರಾಟ ಮಾಡಬೇಕು ಎಂಬುದನ್ನು ಕಲಿಸಿಕೊಟ್ಟವರು. ಇಂಥವರ ಹೆಸರಿನಲ್ಲಿ ತಾಲೂಕು ಮಟ್ಟದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 27 ಗುಂಟೆ ನಿವೇಶನ ಗುರುತಿಸಲಾಗಿದ್ದು, ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಿದರು.

ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸರಗೂರು ನೂತನ ತಾಲೂಕು ಆಗಿದ್ದು ಇಲ್ಲಿಗೆ ಎಲ್ಲಾ ತರಹದ ಅತ್ಯುನ್ನತ ಉತ್ತಮ ಕಾಲೇಜವಗಳನ್ನು ನೀಡಬೇಕು ಹಾಗೂ ಒಳ್ಳೆಯ ಅಸ್ಪತ್ರೆ ನೀಡಬೇಕು, ಅಂದರೆ ಹೃದಯಕ್ಕೆ ಸಂಬಂಧಪಟ್ಟಂತೆ ಜಯದೇವ ಆಸ್ಪತ್ರೆಯ ಶಾಖಾ ಘಟಕವನ್ನು ಇಲ್ಲಿಯೇ ಸ್ಥಾಪನೆ ಮಾಡಿಸಬಹುದಲ್ಲ ನಾವುಗಳು ಅಲ್ಲಿಗೆ ಹೋಗುವುದು ತಪ್ಪುತ್ತದೆ ಇಲ್ಲೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದೆಂದು ತಿಳಿಸಿದರು.

ನಮ್ಮ ಮಕ್ಕಳು ವಿದ್ಯೆಗೆ ಬದ್ಧರಾದಾಗ ಮಾತ್ರ ಬಾಬಾ ಸಾಹೇಬರ ಕನಸನ್ನು ನೆನಸು ಮಾಡಬಹುದು ಎಂದರು.

ಮೈಸೂರಿನ ಗಾಂಧಿ ನಗರದ ಊರಿಲಿಂಗಿ ಪೆದ್ದಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಅಂತರಸಂತೆ ಸಾರನಾಥ ಬುದ್ಧ ವಿಹಾರದ ಮಾತೆ ಬಿಕ್ಕುಣಿ ಗೌತಮಿ ಬಂತೇಜಿ ಬುದ್ದ ವಂದನೆ ಮಾಡಿದರು, ಸರಗೂರು ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಶಿವಣ್ಣ ಮತ್ತು ಎಚ್. ಡಿ.ಕೋಟೆ ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಹೆಚ್.ಸಿ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ರುಕಿಯಾ ಬೇಗಂ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಚೆನ್ನೀಪುರ ಮಲ್ಲೇಶ್, ಬನ್ನವಾಡಿ ರಮೇಶ್, ಜಿಪಂ ಮಾಜಿ ಸದಸ್ಯ ಕೆ. ಚಿಕ್ಕವೀರನಾಯಕ, ಭಾಗ್ಯಲಕ್ಷ್ಮಿನಿಂಗರಾಜು, ಮರಿದೇವಯ್ಯ, ನಿಲವಾಗಿಲು ಗೋಪಾಲಸ್ವಾಮಿ, ಬಿ.ಸಿ.ಬಸಪ್ಪ, ಗ್ರಾಮೀಣ ಮಹೇಶ್, ವಕೀಲ ಶಿವರಾಜು, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ದೇವಲಾಪುರ ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು, ಪಪಂ ಸದಸ್ಯ ಚಲುವಕೃಷ್ಣ, ಮಾಜಿ ಅಧ್ಯಕ್ಷರಾದ ಪುಟ್ಟಯ್ಯ, ಮುದ್ದುಮಲ್ಲಯ್ಯ, ಶಿವಣ್ಣ, ಎಂ.ಡಿ. ಮಂಚಯ್ಯ ಇದ್ದರು.