ಮಂಗಳೂರಲ್ಲಿ ಪಂಡಿತ್‌ ಓಂಕಾರ ಗುಲ್ವಾಡಿಗೆ ಸನ್ಮಾನ

| Published : Apr 17 2025, 12:07 AM IST

ಸಾರಾಂಶ

ಸಪ್ತಕ ಬೆಂಗಳೂರು ನೇತೃತ್ವದಲ್ಲಿ ಚಿರಂತನ ಚಾರಿಟೆಬಲ್ ಟ್ರಸ್ಟ್ ಸುರತ್ಕಲ್, ರಾಮಕೃಷ್ಣ ಮಠ ಮಂಗಳೂರು ಸಹಯೋಗದಲ್ಲಿ, ವಿವಿಧ ಹಿಂದೂಸ್ಥಾನಿ ಸಂಗೀತ ಸಂಸ್ಥೆಗಳ ಸಹಕಾರದಲ್ಲಿ ಇತ್ತೀಚೆಗೆ ಮಂಗಳೂರಿನ ರಾಮಕೃಷ್ಣ ಮಠದ ಸಭಾಭವನದಲ್ಲಿ ಪಂಡಿತ್ ಓಂಕಾರ ಗುಲ್ವಾಡಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಪ್ತಕ ಬೆಂಗಳೂರು ನೇತೃತ್ವದಲ್ಲಿ ಚಿರಂತನ ಚಾರಿಟೆಬಲ್ ಟ್ರಸ್ಟ್ ಸುರತ್ಕಲ್, ರಾಮಕೃಷ್ಣ ಮಠ ಮಂಗಳೂರು ಸಹಯೋಗದಲ್ಲಿ, ವಿವಿಧ ಹಿಂದೂಸ್ಥಾನಿ ಸಂಗೀತ ಸಂಸ್ಥೆಗಳ ಸಹಕಾರದಲ್ಲಿ ಇತ್ತೀಚೆಗೆ ಮಂಗಳೂರಿನ ರಾಮಕೃಷ್ಣ ಮಠದ ಸಭಾಭವನದಲ್ಲಿ ಪಂಡಿತ್ ಓಂಕಾರ ಗುಲ್ವಾಡಿ ಅವರನ್ನು ಸನ್ಮಾನಿಸಲಾಯಿತು.

ಯುವ ಕಲಾವಿದರಾದ ಅಂಕುಶ ನಾಯಕ್ ಅವರ ಸಿತಾರ್ ಹಾಗೂ ಕಾರ್ತಿಕ ಭಟ್ಟ ಅವರ ಕೊಳಲು ವಾದನ ಜುಗಲ್‌ಬಂದಿಗೆ ಹೇಮಂತ ಜೋಶಿ ಅವರ ತಬಲಾ ವಾದನ ಮನಸೂರೆಗೊಂಡಿತು. ನಂತರ ಪಂಡಿತ ವೆಂಕಟೇಶ ಕುಮಾರ ಧಾರವಾಡ ಅಧ್ಯಕ್ಷತೆಯಲ್ಲಿ ಓಂಕಾರ ಗುಲ್ವಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗುಲ್ವಾಡಿ, ಇದೆಲ್ಲವೂ ಸಾಧನೆ ನನ್ನಿಂದ ಸಾಧ್ಯವಾಗಿದ್ದು ವಿದ್ಯಾ ಗುರು ಪಂಡಿತ್ ತಾರಾನಾಥ ಹಾಗೂ ಆಧ್ಯಾತ್ಮ ಗುರು ಪಂಡಿತ್ ಚಿದಾನಂದ ನಗರಕರ ಅವರಿಂದಾಗಿ ಎಂದರು.

ಸಪ್ತಕದ ಜಿ.ಎಸ್. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವೆಂಕಟೇಶ ಕುಮಾರ್ ಅವರು ಓಂಕಾರ ಗುಲ್ವಾಡಿ ಅವರ ತಬಲಾ ನುಡಿಸಾಣಿಕೆಯ ವಿಶೇಷತೆಯನ್ನು ವಿಶ್ಲೇಷಿಸಿದರು. ಸ್ವತಂತ್ರ ತಬಲಾ ವಾದನದಲ್ಲಿಯೂ, ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುತ್ತಿರುವ ಗುರುವಾಗಿಯೂ ಗುಲ್ವಾಡಿ ಅವರು ಅಭಿನಂದನಾರ್ಹರು, ಅನುಕರಣೀಯರು ಎಂದು ಶ್ಲಾಘಿಸಿದರು.

ಓಂಕಾರ ಗುಲ್ವಾಡಿ ಅವರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ನಂತರ ಸುಮಾರು ಎರಡು ಗಂಟೆಗಳ ಕಾಲ ನಡೆದ

ಪಂ. ವೆಂಕಟೇಶ ಕುಮಾರ್ ಅವರ ಗಾಯನಕ್ಕೆ ಪಂ. ಓಂಕಾರ ಗುಲ್ವಾಡಿ ಅವರ ತಬಲಾ ಹಾಗೂ

ಪಂ. ಸುಧೀರ ನಾಯಕ್ ಅವರ ಹಾರ್ಮೋನಿಯಂ ವಾದನ ಮನಸೂರೆಗೊಂಡಿತು. ಜೂನಿಯರ್ ಶಂಕರ್ ಇಂದ್ರಜಾಲ ಪ್ರವೀಣ ತೇಜಸ್ವಿ ಶಂಕರ್‌ ಕಾರ್ಯಕ್ರಮ ನಿರ್ವಹಿಸಿದರು.