ಕನ್ನಡಪ್ರಭವಾರ್ತೆ ಪುತ್ತೂರು
ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜವನ್ನು ರಕ್ಷಿಸುವ ಸೈನಿಕರನ್ನು ಗುರುತಿಸುವುದು, ಅವರ ತ್ಯಾಗವನ್ನು ಸ್ಮರಿಸುವುದು ಮತ್ತು ಸಂಕಷ್ಟದ ಸಂದರ್ಭಗಳಲ್ಲಿ ಅವರ ಕುಟುಂಬಗಳೊಂದಿಗೆ ನಿಲ್ಲುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬ ನಂಬಿಕೆಯಿಂದ ಈ ಸೇವಾ ಕಾರ್ಯ ಆರಂಭಿಸಲಾಗಿದೆ ಎಂದು ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ಹೇಳಿದರು.ಅವರು ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ವತಿಯಿಂದ ಮಾಜಿ ಸೈನಿಕರ ಸಂಘ ಪುತ್ತೂರು ಇದರ ಸಹಯೋಗದೊಂದಿಗೆ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಅಂಗವಾಗಿ ಪುತ್ತೂರು ಸೈನಿಕ ಭವನದಲ್ಲಿ ಬುಧವಾರ ಅರ್ಹ ಸೈನಿಕರ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರಭಕ್ತ ನಾಗರಿಕ ವೇದಿಕೆ ಮೂಲಕ ಈ ಉದ್ದೇಶದಿಂದ ಸುಮಾರು 13 ವರ್ಷಗಳ ಹಿಂದೆ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಯುವಜನರಲ್ಲಿ ದೇಶಭಕ್ತಿಯ ಮನೋಭಾವ ಬೆಳೆಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರುವಂತೆ ಪ್ರೇರೇಪಿಸುವುದು ಇದರ ಮತ್ತೊಂದು ಪ್ರಮುಖ ಗುರಿಯಾಗಿದೆ. ಇಂದು ಈ ಪ್ರಯತ್ನ ಯಶಸ್ಸಿನತ್ತ ಸಾಗುತ್ತಿರುವುದು ಸಂತಸದ ವಿಷಯವಾಗಿದೆ. ವಿವಿಧ ಸಂಘ-ಸಂಸ್ಥೆಗಳು, ರೋಟರಿ, ಸಹಿತ ಅನೇಕ ಸಂಘಟನೆಗಳು ಈ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಇನ್ನಷ್ಟು ಶಕ್ತಿ ತುಂಬಿದೆ. ಒಂದು ಸಂಘಟನೆಯಿಂದ ಎಲ್ಲ ಸೈನಿಕ ಕುಟುಂಬಗಳ ಸಂಕಷ್ಟಗಳನ್ನು ನಿವಾರಿಸಲು ಸಾಧ್ಯವಿಲ್ಲ. ಆದರೂ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ವರ್ಷ 23 ಸೈನಿಕ ಕುಟುಂಬಗಳಿಗೆ ರು. 6.90 ಲಕ್ಷ ನೆರವು ವಿತರಿಸಲು ಸಾಧ್ಯವಾಗಿದೆ. ಅದು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನವಾಗಿದೆ ಎಂದು ಹೇಳಿದರು.ರಾಷ್ಟ್ರಭಕ್ತ ವೇದಿಕೆ ಉಪಾಧ್ಯಕ್ಷ ಮತ್ತು ಜಿಲ್ಲಾ ಮಾಜಿ ಸೈನಿಕ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಮಾತನಾಡಿ, ವೇದಿಕೆಯು ನಿರಂತರ 13 ವರ್ಷಗಳಿಂದ ಸೈನಿಕರಿಗಾಗಿ ಸೇವೆ ಮಾಡುತ್ತಿದೆ. ಕೇವಲ ಹಣ ನೀಡುವುದು ಮಾತ್ರವಲ್ಲ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ದೇಶ ರಕ್ಷಣೆಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಸುಮಾರು ಐದಾರು ಸಾವಿರ ಮಂದಿ ಜಿಲ್ಲೆಯಲ್ಲಿ ಮಾಜಿ ಸೈನಿಕರಿದ್ದಾರೆ. ಆದರೆ ಸಂಘದ ಸದಸ್ಯರಾಗಿರುವುದು ಕೇವಲ ಸಾವಿರ ಸಂಖ್ಯೆ ಮಾತ್ರ. ಮಾಜಿ ಸೈನಿಕರು ಸಂಘದ ಸದಸ್ಯರಾಗುವಂತೆ ಮನವಿ ಮಾಡಿದರು.
ಈ ಸಂದರ್ಭ ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಚಂದ್ರಶೇಖರ್ ದೇಲಂಪಾಡಿ, ವಿಶ್ವನಾಥ ಪೂಜಾರಿ, ಶಿವಪ್ಪ ಗೌಡ ಪೋಳ್ಯ, ಸುಂದರ ಪೂಜಾರಿ ನಿಡ್ಪಳ್ಳಿ, ಅಶೋಕ್, ವಿಜಯ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಜ್ವಲ್ ಪ್ರಭು, ಸಂತೋಷ್ ರೈ ಕೈಕಾರ, ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ ದೇವಾಡಿಗ, ಯಶ್‌ಪಾಲ್ ಸುವರ್ಣ, ಹರೀಶ್, ಪುತ್ತೂರು ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ತುಳಸಿದಾಸ್ ಪಿಲಿಂಜ, ಕಾರ್ಯದರ್ಶಿ ಪುರಂದರ, ಭಾಸ್ಕರ್ ನಾಯ್ಕ್, ಶಿವಪ್ಪ ಗೌಡ, ಶ್ರೀರಂಗಶಾಸ್ತ್ರಿ, ಚಂಚಲಾಕ್ಷ, ವೇದಿಕೆಯ ಉದಯ ಕುಮಾರ್, ಜನಾರ್ದನ ಪಡುಮಲೆ, ದಿನೇಶ್ ಜೈನ್, ಧನು ಪಟ್ಲ, ಗಿರೀಶ್ ಪಡ್ಡಾಯೂರು ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಸಂತ ಗೌಡ ಸ್ವಾಗತಿಸಿದರು. ಸಾರ್ಜಂಟ್ ರಮಾನಾಥ ರೈ ವಂದಿಸಿದರು. ಉಪಾಧ್ಯಕ್ಷ ಸುಂದರ ಗೌಡ ನಡುಬೈಲು ಕಾರ್ಯಕ್ರಮ ನಿರೂಪಿಸಿದರು.