ಕೊಪ್ಪಳ ನಗರದ ಭಾಗ್ಯನಗರ ರಸ್ತೆಯ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಹಾಗೂ ತಾಲೂಕು ಹೂಗಾರ ಸಮಾಜದ ವತಿಯಿಂದ ಶರಣ ಹೂಗಾರ ಮಾದಯ್ಯನವರ ಜಯಂತಿ ನಡೆಯಿತು.

ಕೊಪ್ಪಳ: ರಾಜ್ಯದ ಅತಿ ಹಿಂದುಳಿದ ಹೂಗಾರ ಸಮಾಜದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು. ಹೂಗಾರ ಅಭಿವೃದ್ಧಿ ನಿಗಮಕ್ಕೆ ಸಮರ್ಪಕ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಜಾತಿ ಪ್ರಮಾಣಪತ್ರದ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿ ಮುಂದಿನ ತಿಂಗಳು ಕಾರಟಗಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದು ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ರಾಜ್ಯಾಧ್ಯಕ್ಷ ಬಸವರಾಜ್ ಹೂಗಾರ ಹೇಳಿದರು.

ನಗರದ ಭಾಗ್ಯನಗರ ರಸ್ತೆಯ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಹಾಗೂ ತಾಲೂಕು ಹೂಗಾರ ಸಮಾಜದ ವತಿಯಿಂದ ಆಯೋಜಿಸಿದ್ದ ಶರಣ ಹೂಗಾರ ಮಾದಯ್ಯನವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಹೂಗಾರ ಸಮಾಜದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆಯಾಯಿತು. ಆದರೆ ನಂತರ ಅಧಿಕಾರಕ್ಕೆ ಬಂದ ಸರ್ಕಾರ ನಿಗಮಕ್ಕೆ ಸಮರ್ಪಕ ಅನುದಾನ ನೀಡದಿರುವುದರಿಂದ ಸಮಾಜದ ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಯೋಜನೆಗಳ ಪ್ರಯೋಜನ ದೊರೆಯುತ್ತಿಲ್ಲ ಎಂದು ಹೇಳಿದರು.

ಸಚಿವ ಶಿವರಾಜ ತಂಗಡಗಿ ಮನಸ್ಸು ಮಾಡಿದರೆ ನಿಗಮಕ್ಕೆ ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬಹುದಾಗಿದೆ. ಆದರೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಹೂಗಾರ ಸಮಾಜದ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ನಿಗಮಕ್ಕೆ ಅಗತ್ಯ ಅನುದಾನ ಹಾಗೂ ಯೋಜನೆಗಳನ್ನು ಒದಗಿಸಬೇಕು. ಇಲ್ಲವಾದರೆ ಮುಂದಿನ ತಿಂಗಳು ಕಾರಟಗಿಯಲ್ಲಿ ಸಭೆ ನಡೆಸಿ ಧರಣಿಯ ದಿನಾಂಕ ನಿಗದಿಪಡಿಸಿ, ಸಚಿವರ ನಿವಾಸದ ಎದುರು ಸಮಾಜದ ಮುಖಂಡರು ಹಾಗೂ ಸಮುದಾಯದವರೊಂದಿಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅಖಿಲ ಕರ್ನಾಟಕ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿಯಾದಾಗ ಮಾತ್ರ ಸಮಗ್ರ ಪ್ರಗತಿ ಸಾಧ್ಯ ಎಂದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಮಾತನಾಡಿ, ಶರಣ ಹೂಗಾರ ಮಾದಯ್ಯ ಅವರು ಸಾರಿದ ಮಾನವೀಯತೆ, ಕಾಯಕ ಹಾಗೂ ಸಮಾನತೆಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.

ಬಿಸರಳ್ಳಿ ಮಠದ ಶ್ರೀ ಶಿವಶಾಂತ ವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ನದಿ ಸಿನ್ನೂರಿನ ಮಹಾಶಕ್ತಿಪೀಠದ ಶ್ರೀ ಗುರುರಾಜೇಂದ್ರ ಶಿವಯೋಗಿಗಳು ಹಾಗೂ ಮೈನಹಳ್ಳಿ ಬಿಕ್ಕನಹಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಶರಣು ಬಾಲಪ್ಪ ಹೂಗಾರ, ಕೊಪ್ಪಳ ತಾಲೂಕು ಅಧ್ಯಕ್ಷ ಸತೀಶ ಹೂಗಾರ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಜ್ಯೂನಿಯರ್ ರವಿಚಂದ್ರನ್, ಉದ್ಯಮಿ ಅಮರೇಶ ಹೂಗಾರ, ಹಿರಿಯರಾದ ಸಂಗಪ್ಪ ಹೂಗಾರ, ರಂಗವ್ವ ಹೂಗಾರ, ಯಂಕಪ್ಪ ಹೂಗಾರ ಕವಲೂರು, ನಿವೃತ್ತ ಶಿಕ್ಷಕ ಭೀಮಪ್ಪ ಹೂಗಾರ, ಈರಣ್ಣ ಹೂಗಾರ ಕೆರೆಹಳ್ಳಿ ಪಾಲ್ಗೊಂಡಿದ್ದರು.

ಜಯಂತಿ ಅಂಗವಾಗಿ ಶರಣ ಹೂಗಾರ ಮಾದಯ್ಯನವರ ಭಾವಚಿತ್ರ ಅಲಂಕರಿಸಿ, ಮಹಿಳೆಯರು ಕುಂಭ-ಕಳಸಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಳಿಕ ಪಾನಗಂಟಿ ಕಲ್ಯಾಣ ಮಂಟಪಕ್ಕೆ ಆಗಮಿಸಿದರು.