. ಮೂರು ದಶಕಗಳ ಜಿಲ್ಲೆಯ ರೈತರ ಬೇಡಿಕೆಯಾಗಿದ್ದ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕೆ ಕೇಂದ್ರದೊಂದಿಗೆ ರಾಜ್ಯ ಸರ್ಕಾರವೂ ಆಸಕ್ತಿ ತೋರಿರುವುದು ಮಹತ್ವದ ಬೆಳವಣಿಗೆಯಾಗಿದೆ.

ನಾರಾಯಣ ಹೆಗಡೆ

ಹಾವೇರಿ: ಮೂರು ದಶಕಗಳ ಜಿಲ್ಲೆಯ ರೈತರ ಬೇಡಿಕೆಯಾಗಿದ್ದ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕೆ ಕೇಂದ್ರದೊಂದಿಗೆ ರಾಜ್ಯ ಸರ್ಕಾರವೂ ಆಸಕ್ತಿ ತೋರಿರುವುದು ಮಹತ್ವದ ಬೆಳವಣಿಗೆಯಾಗಿದೆ.

ರಾಜ್ಯ ಸರ್ಕಾರವು ಡಿಪಿಆರ್‌ಗೆ ಅನುಮತಿ ನೀಡಿರುವುದಲ್ಲದೇ ಇತ್ತೀಚೆಗೆ ಕೇಂದ್ರ ಜಲಶಕ್ತಿ ಆಯೋಗದ ಸಭೆಯಲ್ಲಿ ಚರ್ಚೆಯಾಗಿರುವುದು ಯೋಜನೆ ಜಾರಿಯಾಗುವ ಭರವಸೆ ಮೂಡಿಸಿದೆ.

ದಕ್ಷಿಣ ಭಾರತದ ಅತ್ಯಂತ ಹಳೆಯ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲೇ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಘೋಷಣೆಯಾಗಿತ್ತು. ಈ ಹಿಂದೆ ಅನುಷ್ಠಾನಕ್ಕೆ ಪ್ರಯತ್ನವಾಗಿದ್ದರೂ ಸಾಕಾರವಾಗಿರಲಿಲ್ಲ. ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ (ಎನ್‌ಡಬ್ಲುಡಿಎ) ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಿದಾಗ ಬೇಡ್ತಿ ಕೊಳ್ಳ ಪ್ರದೇಶದ ಜನರಿಂದ ತೀವ್ರ ವಿರೋಧ ವ್ಯಕ್ತವಾದ್ದರಿಂದ ಯೋಜನೆ ಅನುಷ್ಠಾನವನ್ನು ಸರ್ಕಾರ ಕೈಬಿಟ್ಟಿತ್ತು. ಈಗ ಹಿಂದಿನ ಯೋಜನೆಯ ಸ್ವರೂಪ ಬದಲಿಸಿ, ಪರಿಸರಕ್ಕೆ ಹೆಚ್ಚಿನ ಹಾನಿಯಾಗದ ರೀತಿಯಲ್ಲಿ ಬೇಡ್ತಿ ನದಿ ನೀರನ್ನು ವರದೆಗೆ ಹರಿಸುವುದು ಹೊಸ ಪ್ರಸ್ತಾವನೆಯಲ್ಲಿದೆ. ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆಯಾದರೂ ಅದರ ಅನುಷ್ಠಾನ ರಾಜ್ಯ ಸರ್ಕಾರದಿಂದಲೇ ಆಗಬೇಕು. ಈ ಕಾರಣಕ್ಕೆ ರಾಜ್ಯ ಸರ್ಕಾರ ಡಿಪಿಆರ್‌ಗೆ ಅನುಮತಿ ನೀಡಬೇಕಾಗುತ್ತದೆ. ಈಗ ರಾಜ್ಯ ಸರ್ಕಾರ ಇದಕ್ಕೆ ಅನುಮತಿ ನೀಡಿರುವುದರಿಂದ ಯೋಜನೆಯ ಆರಂಭಿಕ ಹೆಜ್ಜೆ ಇಟ್ಟಂತಾಗಿದೆ.

ಸರ್ಕಾರದ ಆಸಕ್ತಿ: ರಾಜ್ಯ ಸರ್ಕಾರ ಕೂಡ ಯೋಜನೆ ಜಾರಿ ನಿಟ್ಟಿನಲ್ಲಿ ಆಸಕ್ತಿ ತೋರಿರುವುದು ಸ್ಪಷ್ಟವಾಗಿದೆ. ವಾರದ ಹಿಂದೆ ಕೇಂದ್ರ ಜಲಶಕ್ತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ ಅವರು, ಯೋಜನೆಯ ಡಿಪಿಆರ್ ತಯಾರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ, ಅಲ್ಲದೇ ಕೇಂದ್ರ ಸರ್ಕಾರ ಯೋಜನೆಗೆ ₹10 ಸಾವಿರ ಕೋಟಿ ಮೀಸಲಿಟ್ಟಿದ್ದು, ನಮ್ಮ ಪಾಲಿನ ಒಂದು ಸಾವಿರ ಕೋಟಿ ಹೂಡಿಕೆ ಮಾಡಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿರುವುದು ಮಹತ್ವ ಪಡೆದುಕೊಂಡಿದೆ.

ಬದಲಾವಣೆ ಏನು?: ಉದ್ದೇಶಿತ ಹೊಸ ಯೋಜನೆಯಲ್ಲಿ ಎರಡು ಲಿಂಕೇಜ್ ಮೂಲಕ, ಯಾವ ಪ್ರದೇಶಕ್ಕೂ ತೊಂದರೆಯಾಗದ ರೀತಿಯಲ್ಲಿ ಬೇಡ್ತಿ ನದಿಯಿಂದ ನೀರನ್ನು ಲಿಫ್ಟ್ ಮಾಡಿ ವರದೆಗೆ ತರುವುದಾಗಿದೆ. ಬೇಡ್ತಿಯಿಂದ ವರದಾ ನದಿಗೆ ನೀರು ಲಿಫ್ಟ್ ಮಾಡುವುದು ಒಂದಾದರೆ, ಬೇಡ್ತಿಯಿಂದ ಧರ್ಮಾ ಜಲಾಶಯದಲ್ಲಿ ನೀರು ಸಂಗ್ರಹಿಸಿ ಭರ್ತಿ ಮಾಡಿ ಅಲ್ಲಿಂದ ವರದಾ ನದಿಗೆ ಹರಿಸುವುದು ಮತ್ತೊಂದು ಮಾರ್ಗವಾಗಿದೆ. ಈ ಎರಡು ಮಾರ್ಗಗಳ ಮೂಲಕ ಕ್ರಮವಾಗಿ 10.6 ಟಿಎಂಸಿ ಮತ್ತು 7.6 ಟಿಎಂಸಿ ಸೇರಿದಂತೆ 18.42 ಟಿಎಂಸಿ ನೀರನ್ನು ವರದಾ ನದಿಗೆ ಹರಿಸುವುದು ಉದ್ದೇಶಿತ ಯೋಜನೆಯಲ್ಲಿದೆ.ಜಿಲ್ಲೆಗೆ ಅನುಕೂಲ: ಉದ್ದೇಶಿತ ಯೋಜನೆಯಿಂದ 18 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಹಾವೇರಿ, ಗದಗ, ಕೊಪ್ಪಳ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ತುಂಗಭದ್ರಾ ನದಿ ಹರಿಯುವ 1,06,220 ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಸುವ ಗುರಿ ಇದೆ.

ಹಾವೇರಿ ಜಿಲ್ಲೆಯ ಹಾನಗಲ್ಲ, ಹಾವೇರಿ, ಸವಣೂರು, ಶಿಗ್ಗಾಂವಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ವರದಾ ನದಿ ನೀರು ಕೃಷಿಗೆ ಪ್ರಮುಖ ಆಧಾರವಾಗಿದೆ. ಆದರೆ ಮಳೆ ಕೊರತೆ, ಅವೈಜ್ಞಾನಿಕ ನೀರು ಸಂಗ್ರಹ ಮೊದಲಾಗಿ ನದಿಯ ನೀರು ಮಳೆಗಾಲ ಮುಗಿಯುತ್ತಿದ್ದಂತೆಯೇ ಬತ್ತಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಬೇಡ್ತಿ ನದಿ ಜೋಡಣೆಯ ಮೂಲಕ ಜಿಲ್ಲೆಯ ಕೃಷಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ನಿವಾರಣೆಗೆ ಅನುಕೂಲವಾಗಲಿದೆ ಎಂಬುದು ರೈತರ ಆಶಯವಾಗಿದೆ.ವರದಾ- ಬೇಡ್ತಿ ನದಿಗಳ ಜೋಡಣೆಗೆ ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದೇವೆ. ಈಗ ರಾಜ್ಯ ಸರ್ಕಾರ ಡಿಪಿಆರ್‌ಗೆ ಅನುಮತಿ ನೀಡಿರುವುದರಿಂದ ಕೇಂದ್ರ ಸರ್ಕಾರವು ಆದಷ್ಟು ಬೇಗ ಯೋಜನಾ ವರದಿ ಸಲ್ಲಿಸಬೇಕು. ಯೋಜನೆ ವಿರೋಧಿಗಳ ಧ್ವನಿಗೆ ಮನ್ನಣೆ ನೀಡದೇ ಕುಡಿಯುವ ನೀರಿಗಾಗಿ ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ

ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಧನಾತ್ಮಕ ಸ್ಪಂದನೆಯಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯವರಿಂದ ವಿರೋಧ ವ್ಯಕ್ತವಾಗಿದೆ. ಅವರ ವಿರೋಧ ಅವೈಜ್ಞಾನಿಕವಾಗಿದೆ. ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ನೀರನ್ನು ನಾವು ಕೇಳುತ್ತಿದ್ದೇವೆ. ಈ ಭಾಗದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಆ ಭಾಗದ ಜನರ ಮನವರಿಕೆ ಮಾಡಿಕೊಟ್ಟು ಯೋಜನೆ ಜಾರಿ ಮಾಡಬೇಕು ಎಂದು ವರದಾ- ಬೇಡ್ತಿ ನದಿ ಜೋಡಣೆ ಹೋರಾಟ ಸಮಿತಿ ಅಧ್ಯಕ್ಷ

ಸೋಮಶೇಖರ ಕೋತಂಬರಿ ಹೇಳಿದರು.