ಸಾರಾಂಶ
ಹಾವೇರಿ: ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಆದಷ್ಟು ಬೇಗ ರೈತರ ಬೇಡಿಕೆ ಈಡೇರಿಸುವುದಾಗಿ ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಭರವಸೆ ನೀಡಿದರು.ಜಿಲ್ಲಾಡಳಿತ ಭವನದ ಎದುರು ರೈತ ಸಂಘ ಮತ್ತು ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ರೈತರು ಹಮ್ಮಿಕೊಂಡಿರುವ ಅಹೋರಾತ್ರಿ ಪ್ರತಿಭಟನೆ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.ನಿಮ್ಮ ಬೇಡಿಕೆ ನ್ಯಾಯ ಸಮ್ಮತವಾಗಿದೆ. ಆದರೆ, ತಕ್ಷಣಕ್ಕೆ ಆಗುವುದು ಕಷ್ಟ. ವರದಾ ಬೇಡ್ತಿ ನದಿ ಜೋಡಣೆ ಕೇಂದ್ರ ಸರ್ಕಾರದಿಂದ ಆಗಬೇಕಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ, ಇಂಧನ ಸಚಿವರಿಗೆ ನಿಮ್ಮ ಬೇಡಿಕೆಗಳನ್ನು ಮನವರಿಕೆ ಮಾಡಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಗ್ಯಾರಂಟಿ ಯೋಜನೆ ಅನಿಷ್ಠಾನದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಇದ್ದರು.
ಈ ಸಂದರ್ಭದಲ್ಲಿ ರೈತ ಮುಖಂಡರು ಮಾತನಾಡಿ, ನಿಮ್ಮ ಪ್ರಯತ್ನ ನೀವು ಮಾಡಿ. ಆದರೆ, ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಬೇಡಿಕೆ ಈಡೇರದೇ ಹೋರಾಟ ಕೈಬಿಡುವುದಿಲ್ಲ ಎಂದು ಹೇಳಿದರು.ಬೇಡ್ತಿ- ವರದಾ ನದಿ ಜೋಡಣೆ, ಬೆಳೆ ವಿಮೆ ಮತ್ತು ಪರಿಹಾರ, ವಿದ್ಯುತ್ ಸಮಸ್ಯೆ ನಿವಾರಣೆ, ರೈತ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಸೇರಿದಂತೆ ವಿವಿಧ ರೈತ ಸಂಘಟನೆಗಳ ಸಾಮೂಹಿಕ ನಾಯಕತ್ವದಲ್ಲಿ ೫ನೇ ದಿನವಾದ ಬುಧವಾರ ಧರಣಿ ಸತ್ಯಾಗ್ರಹದ ನೇತೃತ್ವವನ್ನು ರಟ್ಟಿಹಳ್ಳಿ ತಾಲೂಕಿನ ನೂರಾರು ರೈತರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಸಿಲಿಕಾನ್ ಸಿಟಿ ನಿರ್ಮಾತೃ ಎಸ್.ಎಂ. ಕೃಷ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಪ್ರತಿಭಟನೆಗೆ ಚಾಲನೆ ಕೊಡಲಾಯಿತು.
ಈ ವೇಳೆ ರೈತ ಮುಖಂಡರು ಮಾತನಾಡಿ, ಜಿಲ್ಲೆಯ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ತಾರತಮ್ಯ ಆಗಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬೆಳೆವಿಮೆ ಹಣ ಹಾಕದೇ ಬೆಳೆವಿಮೆ ಕಂಪನಿಯವರು ರೈತರಿಗೆ ಅನ್ಯಾಯ ಮಾಡಿದ್ದು, ಕೂಡಲೇ ಜಿಲ್ಲಾಡಳಿತ ಬೆಳೆ ವಿಮೆ ತುಂಬಿಸಿಕೊಂಡ ಕಂಪನಿಯವರನ್ನು ಕರೆಸಿ ಲೆಕ್ಕಾಚಾರ ಮಾಡಿಸಿ, ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಇದರಿಂದ ಹಾವೇರಿ ಜಿಲ್ಲೆಯಲ್ಲಿ ವರ್ಷವಿಡೀ ನೀರಾವರಿ ಮಾಡಬಹುದಾಗಿದೆ. ವ್ಯರ್ಥವಾಗಿ ಹರಿಯುವ ನೀರನ್ನು ಇಲ್ಲಿಗೆ ತಂದರೆ ಈ ಭಾಗದಲ್ಲಿ ರೈತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಎಚ್.ಎಚ್. ಮುಲ್ಲಾ, ಶಂಕ್ರಣ್ಣ ಶಿರಗಂಬಿ, ಬಸನಗೌಡ ಗಂಗಪ್ಪನವರ, ಶಿವಬಸಪ್ಪ ಗೋವಿ, ಗುಡ್ಡನಗೌಡ ಪ್ಯಾಟಿಗೌಡ್ರು, ಸುರೇಶ್ ಚಲವಾದಿ, ಶಂಭು ಮುತ್ತಗಿ, ಮಲ್ಲನಗೌಡ ಮಳಗಿ, ಫಯಾದ್‌ಸಾಬ್ ದೊಡ್ಡಮನಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.