ಹೊರಟ್ಟಿ ವಿಪ ಸದಸ್ಯರಾಗಿ 45 ವರ್ಷ: ಬೃಹತ್‌ ಅಭಿನಂದನಾ ಸಮಾರಂಭ

| Published : Jul 20 2025, 01:15 AM IST

ಹೊರಟ್ಟಿ ವಿಪ ಸದಸ್ಯರಾಗಿ 45 ವರ್ಷ: ಬೃಹತ್‌ ಅಭಿನಂದನಾ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಸಭಾಪತಿ ಬಸವರಾಜ ಹೊರಟ್ಟಿಯವರ ರಾಜಕೀಯ ಅನುಭವ ಯುವ ರಾಜಕಾರಣಿಗಳಿಗೆ ಅಗತ್ಯವಾಗಿದೆ

ಹುಬ್ಬಳ್ಳಿ: ವಿಧಾನ ಪರಿಷತ್‌ಗೆ ಸತತವಾಗಿ ಎಂಟು ಬಾರಿ ಆಯ್ಕೆಯಾಗುವ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್ ಸದಸ್ಯರಾಗಿ ೪೫ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೃಹತ್ ಅಭಿನಂದನಾ ಸಮಾರಂಭ ಆಯೋಜಿಸಲು ನಿರ್ಧರಿಸಲಾಯಿತು.

ಈ ಕುರಿತು ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹೊರಟ್ಟಿ ಅವರ ಅಭಿಮಾನಿ ಬಳಗ, ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳ ಹಾಗೂ ಗಣ್ಯರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ವೇಳೆ ಬೃಹತ್ ಸಮಾರಂಭದಲ್ಲಿ ಹೊರಟ್ಟಿ ಅವರನ್ನು ಗೌರವಿಸಲು ನಿರ್ಣಯಿಸಲಾಯಿತು.

ಆಗಸ್ಟ್ ೧೬ ಅಥವಾ ೧೭ರಂದು ಆಯೋಜಿಸಲು ನಿರ್ಧರಿಸಿದ್ದು, ಅದಕ್ಕೂ ಮುನ್ನ ಹೊರಟ್ಟಿ ಅವರೊಂದಿಗೆ ಚರ್ಚಿಸಿ ನಿರ್ಧರಿಸಲು ಸಭೆಯಲ್ಲಿ ಸೇರಿದ್ದವರು ಒಪ್ಪಿಗೆ ಸೂಚಿಸಿದರು.

ವಿಧಾನಸಭೆ ವಿರೋಧಪಕ್ಷದ ಉಪನಾಯಕ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸಭಾಪತಿ ಬಸವರಾಜ ಹೊರಟ್ಟಿಯವರ ರಾಜಕೀಯ ಅನುಭವ ಯುವ ರಾಜಕಾರಣಿಗಳಿಗೆ ಅಗತ್ಯವಾಗಿದೆ. ಅಭಿನಂದನಾ ಸಮಾರಂಭಕ್ಕೆ ಉಪರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲು ಸಲಹೆ ನೀಡಿದರು.

ಕೆಎಲ್‌ಇ ನಿರ್ದೇಶಕ, ಹಿರಿಯ ಮುಖಂಡ ಶಂಕರಣ್ಣ ಮುನವಳ್ಳಿ ಮಾತನಾಡಿ, ಸಮಾರಂಭವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ. ಅದಕ್ಕೂ ಮುನ್ನ ಸಮಿತಿಗಳ ರಚಿಸಿ ಯಾವ ಸ್ಥಳದಲ್ಲಿ ಸಮಾರಂಭ ಆಯೋಜಿಸಿದರೆ ಸೂಕ್ತ, ಯಾವ ದಿನವಾದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂಬುದನ್ನು ಗಮನಿಸಿ ಸಮಾರಂಭ ಮಾಡಬೇಕು ಎಂದರು.

ಉದ್ಯಮಿ ಸುಧಾಕರ ಶೆಟ್ಟಿ ಮಾತನಾಡಿ, ಯಾವುದೇ ಕಾರಣಕ್ಕೂ ತರಾತುರಿ ಕಾರ್ಯಕ್ರಮ ಬೇಡ. ವಿಭಿನ್ನವಾಗಿ ಮಾಡೋಣ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಬಸವರಾಜ ಹೊರಟ್ಟಿ ಅವರ ಗರಡಿಯಲ್ಲಿ ಹಲವಾರು ರಾಜಕೀಯ ನಾಯಕರು ಹೊರ ಹೊಮ್ಮಿದ್ದಾರೆ. ಹೊರಟ್ಟಿಯವರ ಕರ್ಮಭೂಮಿ ಹುಬ್ಬಳ್ಳಿ ಆಗಿದ್ದು, ಅವರಿಗೆ ಅಭಿನಂದನಾ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಸಭೆಯಲ್ಲಿ ಜಿ.ಆರ್. ಭಟ್, ರವಿ ದಂಡಿನ, ಅರವಿಂದ ಕಟಗಿ, ಡಾ. ಜಿ.ಬಿ. ಸತ್ತೂರ, ಡಾ. ರವಿ ಕಲಘಟಗಿ, ಸಂಜೀವಕುಮಾರ ಭೂಶೆಟ್ಟಿ ಮಾತನಾಡಿ ತಮ್ಮ ಅಭಿಪ್ರಾಯ ತಿಳಿಸಿದರು.

ಸಭೆಯಲ್ಲಿ ಮಹಾಪೌರ ಜ್ಯೋತಿ ಪಾಟೀಲ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ, ಎಸ್.ಜಿ. ಹಿರೇಗೌಡರ, ಶಿವಾನಂದ ಬೆಂತೂರ, ಪೂಜಾ ಹೊಸಮನಿ, ಸಿ.ಎನ್. ಶ್ಯಾಗೋಟಿ, ಪ್ರಕಾಶ ಬೆಂಡಿಗೇರಿ, ಬಿ.ಎಸ್. ಪಾಟೀಲ, ಬಿ.ಬಿ. ಗಂಗಾಧರಮಠ, ಜಗದೀಶ ದ್ಯಾವಪ್ಪನವರ, ವಿಶ್ವನಾಥ ಕೊರವಿ, ಶಿವಾನಂದ ಕರಿಗಾರ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.