ಓಮಿನಿ- ಲಾರಿ ನಡುವೆ ಭೀಕರ ಅಪಘಾತ: ಮೂವರ ಸಾವು

| Published : Aug 25 2024, 01:50 AM IST

ಸಾರಾಂಶ

ಓಮಿನಿ ಕಾರೊಂದರ ಟೈರ್ ಬ್ಲಾಸ್ಟ್ ಆಗಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ತಾಲೂಕಿನ ಹೆಬಸೂರ- ಕಿರೇಸೂರ ಗ್ರಾಮದ ಮಧ್ಯೆ ಶುಕ್ರವಾರ ರಾತ್ರಿ ನಡೆದಿದೆ.

ಹುಬ್ಬಳ್ಳಿ: ಓಮಿನಿ ಕಾರೊಂದರ ಟೈರ್ ಬ್ಲಾಸ್ಟ್ ಆಗಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ತಾಲೂಕಿನ ಹೆಬಸೂರ- ಕಿರೇಸೂರ ಗ್ರಾಮದ ಮಧ್ಯೆ ಶುಕ್ರವಾರ ರಾತ್ರಿ ನಡೆದಿದೆ.

ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದ ಜಾಫರಸಾಬ ರಾಜೇಸಾಬ ಮಂಗಳೂರ (70), ಮಹ್ಮದ ಮುಸ್ತಫಾ ಜಾಫರಸಾಬ ಮಂಗಳೂರ (36) ಮತ್ತು ಸೊಹೇಬ್ ಮಹ್ಮದ ಮುಸ್ತಫಾ ಮಂಗಳೂರ (6) ಮೃತ ದುರ್ದೈವಿಗಳು. ಇದರಿಂದಾಗಿ ತಂದೆ, ಮಗ, ಮೊಮ್ಮಗ ಮೃತಪಟ್ಟಂತಾಗಿದೆ.

ಇನ್ನು ಇಮಾಮಸಾಬ ಮಂಗಳೂರ, ಚಾಲಕ ಹುಸೇನಭಾಷಾ ಮಂಗಳೂರ ಮತ್ತು ಬಾಲಕ ಫೈಜಲ್ ಮಂಗಳೂರ ಗಾಯಗೊಂಡಿದ್ದು, ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ತೀವ್ರ ‌ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ವೃದ್ಧರಾದ ಇಮಾಮಸಾಬರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಕರ ಮನೆಗೆ ಹೋಗಬೇಕಾದವರು ಮಸಣಕ್ಕೆ!

ಜಾಫರಸಾಬ ಮಂಗಳೂರ ಎಂಬುವವರಿಗೆ ಕೆಲ ದಿನಗಳ ಹಿಂದೆ ಲಕ್ವಾ (ಪಾರ್ಶ್ವವಾಯು) ಹೊಡೆದಿತ್ತು. ಇವರ ಪುತ್ರ ಮಹ್ಮದಮುಸ್ತಫಾ ತಂದೆಗೆ ಔಷಧ ಕೊಡಿಸುವ ಸಲುವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿಯ ಹಲಗಾ ಗ್ರಾಮಕ್ಕೆ ಮಗನಾದ ಸೋಹೆಬ್ (ಜಾಫರಸಾಬರ ಮೊಮ್ಮಗ) ಹಾಗೂ ಸಂಬಂಧಿಕರನ್ನು ಕರೆದುಕೊಂಡು ಹೋಗಿದ್ದರು.

ಹಲಗಾಕ್ಕೆ ಹೋಗಿ ವಾಪಸ್‌ ಕೊಪ್ಪಳಕ್ಕೆ ಹೋಗುವ ಮುನ್ನ ಹೆಬಸೂರಲ್ಲಿರುವ ಸಂಬಂಧಿಕರನ್ನು ಭೇಟಿಯಾಗಿ ಹೋಗಲು ಹೆಬಸೂರಿನತ್ತ ಹೊರಟಿದ್ದರು. ಆದರೆ, ದಾರಿ ಮಧ್ಯೆ ಕಿರಸೂರ ಬಳಿ ಜೋಡಬೆಂಚಿಕೇರಿ ಸೇತುವೆ ಬಳಿ ಕಾರಿನ ಟೈರ್‌ ಬ್ಲಾಸ್ಟ್‌ ಆಗಿ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದಿದೆ.