ಎರಡು ಕಾರ್‌ಗಳ ಮಧ್ಯೆ ಭೀಕರ ಅಪಘಾತ: ಮಗು ಸಾವು, ಐವರಿಗೆ ಗಾಯ

| Published : Sep 02 2024, 02:05 AM IST

ಸಾರಾಂಶ

ಸ್ವೀಫ್ಟ್‌ ಡಿಜೈರ್ ಹಾಗೂ ಬಲೋನಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಗು ಮೃತಪಟ್ಟಿದೆ.

ಯಲಬುರ್ಗಾ: ಸ್ವೀಫ್ಟ್‌ ಡಿಜೈರ್ ಹಾಗೂ ಬಲೋನಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟು, ೧೧ ವರ್ಷದ ಮಗು ಸೇರಿದಂತೆ ಐವರು ಗಾಯಗೊಂಡ ಘಟನೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಕೊಪ್ಪಳ ರಸ್ತೆ ಬ್ರೀಜ್ ಹತ್ತಿರ ಭಾನುವಾರ ಬೆಳಗ್ಗೆ ನಡೆದಿದೆ.

ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದ ಒಂದೂವರೆ ವರ್ಷದ ಮಗು ಸಂಪ್ರೀತ್ ಸ್ಥಳದಲ್ಲೇ ಮೃತಪಟ್ಟಿದೆ.

ಕೊಪ್ಪಳದ ೧೧ ವರ್ಷದ ಮಹಾಲಕ್ಷ್ಮೀ ವಿರೂಪಾಕ್ಷಯ್ಯ ಕೊರಗಲ್‌ಮಠ, ಚಾಲಕ ಶಿವಪ್ಪ ಶರಣಯ್ಯ ಕೊರಗಲ್‌ಮಠ, ವಿರೂಪಾಕ್ಷಯ್ಯ ಬಸಯ್ಯ ಕೊರಗಲ್‌ಮಠ, ಗಂಗಮ್ಮ ವಿರೂಪಾಕ್ಷಯ್ಯ ಕೊರಗಲ್‌ಮಠ ಕೊಪ್ಪಳ ಹಾಗೂ ಪ್ರೀತಿ ಸಂಗಯ್ಯ ಹಿರೇಮಠ (ಟಣಕನಕಲ್) ಮತ್ತು ಸಂಗಪ್ಪ ದೇವಪ್ಪ ಗಡಾದ ನಿವೃತ್ತ ಸೈನಿಕ (ಸಂಗನಾಳ) ಹಾಗೂ ಪ್ರಭುದೇವ ಶಾಂತಪ್ಪ ಹೊಸಂಗಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೊಪ್ಪಳ ಸಿದ್ದೇಶ್ವರ ನಗರದವರು ಹಾಗೂ ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದವರು ಸ್ವಿಫ್ಟ್ ಡಿಜೈನರ್ ಕಾರಿನಲ್ಲಿ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ದೇವಸ್ಥಾನಕ್ಕೆ ಹೋಗಿ ಕೊಪ್ಪಳಕ್ಕೆ ಹೋಗುತ್ತಿದ್ದಾಗ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಬಲೋನಾ ಕಾರು ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಿಂದ ಸಂಗನಾಳ ಗ್ರಾಮಕ್ಕೆ ಬರುವ ವೇಳೆ ಈ ಅಪಘಾತ ನಡೆದಿದೆ. ಯಲಬುರ್ಗಾ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.ಬೈಕಿಗೆ ಹಿಂಬಂದಿಯಿಂದ ವಾಹನ ಡಿಕ್ಕಿ: ಇಬ್ಬರ ಸಾವು

ಕುಷ್ಟಗಿ: ಬೈಕಿಗೆ ಹಿಂಬಂದಿಯಿಂದ ವಾಹನವೊಂದು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಕಡೇಕೊಪ್ಪ ಕ್ರಾಸ್‌ನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಪಟ್ಟಣದಿಂದ ಇಲಕಲ್ ನಗರದ ಕಡೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಕಡೇಕೊಪ್ಪ ಕ್ರಾಸ್ ಬಳಿ ಈ ಅಪಘಾತ ನಡೆದಿದ್ದು ಮೃತಪಟ್ಟವರನ್ನು ತಾಲೂಕಿನ ವಣಗೇರಾ ಗ್ರಾಮದ ಪರಶುರಾಮ ಗುರಿಕಾರ (40) ಹನಮಂತಪ್ಪ ಗುರಿಕಾರ (35) ಎಂದು ಗುರುತಿಸಲಾಗಿದೆ.

ಮೃತರು ಇಲಕಲ್ ನಗರದತ್ತ ತೆರಳುತ್ತಿದ್ದರು. ಬೈಕಿನಲ್ಲಿ ಹೋಗುವಾಗ ಹಿಂಬದಿಯಿಂದ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ವಾಹನದ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.ಈ ಘಟನಾ ಸ್ಥಳಕ್ಕೆ ಸಿಪಿಐ ಯಶವಂತ ಬಿಸನಳ್ಳಿ ಹಾಗೂ ಪಿಎಸ್‌ಐ ಹನುಮಂತಪ್ಪ ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾಸ್ಪತ್ರೆಗೆ ಕಳಿಸಲಾಗಿದ್ದು, ಈ ಕುರಿತು ಕುಷ್ಟಗಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.