ಇಂದಿನಿಂದ ತೋವಿವಿ ಉದ್ಯಾನಗಿರಿಯಲ್ಲಿ ತೋಟಗಾರಿಕೆ ಮೇಳ

| Published : Feb 10 2024, 01:48 AM IST

ಸಾರಾಂಶ

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉದ್ಯಾನಗಿರಿಯಲ್ಲಿ ಫೆ.10 ರಿಂದ 12 ವರೆಗೆ ಮೂರು ದಿನಗಳ ಕಾಲ ತೋಟಗಾರಿಕೆ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಫೆ.10ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಿ ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉದ್ಯಾನಗಿರಿಯಲ್ಲಿ ಫೆ.10 ರಿಂದ 12 ವರೆಗೆ ಮೂರು ದಿನಗಳ ಕಾಲ ತೋಟಗಾರಿಕೆ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ.

ಫೆ.10ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಿ ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಎಚ್.ವೈ. ಮೇಟಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ, ನವದೆಹಲಿಯ ವಿಶೇಷ ಪ್ರತಿನಿಧಿ-2 ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಜೆ.ಟಿ. ಪಾಟೀಲ, ಶಾಸಕ, ರಾಜ್ಯ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸಂಸದ ಪಿ.ಸಿ. ಗದ್ದಿಗೌಡರ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಗಣ್ಯರು ಆಗಮಿಸಲಿದ್ದಾರೆ.

ಫೆ.11 ರಂದು ಬೆಳಗ್ಗೆ 11 ಗಂಟೆಗೆ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ಎಚ್.ವೈ. ಮೇಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪಾಲ್ಗೊಳ್ಳಲಿದ್ದಾರೆ. ಫೆ.12ರಂದು ಬೆಳಗ್ಗೆ 11ಕ್ಕೆ ಜರುಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆ ಶಾಸಕ ಎಚ್.ವೈ.ಮೇಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಬರ ಸಹಿಷ್ಣುತೆಗಾಗಿ ಫೆ.10ರಂದು ಮಧ್ಯಾಹ್ನ 2.30 ರಿಂದ 3.30ರವರೆಗೆ ತೋಟಗಾರಿಕೆಯಲ್ಲಿ ಬರ ನಿರ್ವಹಣಾ ಕ್ರಮಗಳು, 3.30ರಿಂದ ಸಂಜೆ 4.30ರವರೆಗೆ ಕಿರು ಸಂಸ್ಕರಣಾ ಘಟಕಗಳಾಗಿ ರೈತರ ತೋಟಗಳು, ಫೆ.11ರಂದು ಮಧ್ಯಾಹ್ನ 2.30 ರಿಂದ 3.30ರವರೆಗೆ ಸಮಗ್ರ ತೋಟಗಾರಿಕಾ ನಿರ್ವಹಣೆ:ಸಾಧ್ಯತೆಗಳು ಮತ್ತು ಸವಾಲುಗಳು, 3.30ರಿಂದ ಸಂಜೆ 4.30ರವರೆಗೆ ಭೌಗೋಳಿಕ ಮಾನ್ಯತೆ ಪಡೆದ ತೋಟಗಾರಿಕಾ ಬೆಳೆಗಳ ಮಹತ್ವ ಕುರಿತು ತಾಂತ್ರಿಕ ಗೋಷ್ಠಿಗಳು ನಡೆಯಲಿವೆ.