ಕೆಸಿಸಿ ಬ್ಯಾಂಕ್‌ನಿಂದ ಹೊಸಬೆಳಕು ಕಾರ್ಯಕ್ರಮ

| Published : Jan 02 2024, 02:15 AM IST

ಸಾರಾಂಶ

ಬ್ಯಾಂಕಿನ ಗ್ರಾಹಕರಿಗೆ ಹೆಚ್ಚಿನ ಸಾಲ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಠೇವಣಿಗಳ ಬಗ್ಗೆ ಅಗತ್ಯ ಸಮಗ್ರ ಮಾಹಿತಿ ಒದಗಿಸುವುದು ನೂತನ ಯೋಜನೆಯ ಉದ್ದೇಶ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಸಪೂರಿ ತಿಳಿಸಿದ್ದಾರೆ.

- ಗ್ರಾಹಕರಿಗೆ ಠೇವಣಿ ಪ್ರಮಾಣ ಪತ್ರಗಳನ್ನು ವಿತರಿಸಿದ ಸಿದ್ದಪ್ಪ ಸಪೂರಿ

ಕನ್ನಡಪ್ರಭ ವಾರ್ತೆ ಧಾರವಾಡ

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯಗಳನ್ನು ನೀಡಲು ಆಡಳಿತ ಮಂಡಳಿ ತೀರ್ಮಾನಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಸಪೂರಿ ಹೇಳಿದರು.

ಸುಭಾಸ ರಸ್ತೆಯಲ್ಲಿರುವ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಠೇವಣಾತಿ ಸಂಗ್ರಹ ಮತ್ತು ಸಾಲ‌ ವಿತರಿಸುವ ವಿನೂತನ ಹೊಸಬೆಳಕು ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಠೇವಣಿ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಬ್ಯಾಂಕಿನ ಗ್ರಾಹಕರಿಗೆ ಹೆಚ್ಚಿನ ಸಾಲ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಠೇವಣಿಗಳ ಬಗ್ಗೆ ಅಗತ್ಯ ಸಮಗ್ರ ಮಾಹಿತಿ ಒದಗಿಸುವುದು ನೂತನ ಯೋಜನೆಯ ಉದ್ದೇಶ. ಇದಕ್ಕಾಗಿ ಪ್ರತಿ ತಿಂಗಳು ಒಂದನೇ ತಾರೀಖಿನಂದು ಗ್ರಾಹಕರನ್ನು ಬ್ಯಾಂಕಿಗೆ ಆಮಂತ್ರಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ಬ್ಯಾಂಕಿನ ‌ಆರ್ಥಿಕ‌ ವಹಿವಾಟನ್ನು‌ ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಹೊಸ‌ ವರ್ಷದಿಂದ ಬ್ಯಾಂಕಿನ 48 ಶಾಖೆಗಳಲ್ಲಿ ಈ ಕಾರ್ಯಕ್ರಮಗಳಿಗೆ‌ ಚಾಲನೆ ನೀಡಲಾಗುತ್ತಿದೆ. ಆದ್ದರಿಂದ ಗ್ರಾಹಕರು ಹೊಸಬೆಳಕು ಯೋಜನೆಯ ಸದುಪಯೋಗ ಮಾಡಿಕೊಳ್ಳುವ ‌ಮುಖಾಂತರ ಅರ್ಥಿಕ ಸದೃಢತೆ ಹೊಂದಬೇಕು ಎಂದರು.

ಇದೇ‌ ಸಂದರ್ಭದಲ್ಲಿ ಹೊಸ ವರ್ಷದ ದಿನದರ್ಶಿಕೆಯನ್ನು ಸಿದ್ದಪ್ಪ ಸಪೂರಿ ಬಿಡುಗಡೆ ಮಾಡಿದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಮುನಿಯಪ್ಪ, ಗ್ರಾಹಕರಾದ ಪ್ರಕಾಶ ಭಾವಿಕಟ್ಟಿ, ಪರಮೇಶ್ವರ ಗರಗ, ಅಧಿಕಾರಿಗಳಾದ ಸಿ.ಎಂ. ಭಾವಿಕಟ್ಟಿ, ಎಂ.ವೈ. ಹೂಗಾರ ಇದ್ದರು.

ಪ್ರಧಾನ ವ್ಯವಸ್ಥಾಪಕ ಎಸ್.ವಿ. ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಲಾ‌ ಬಡಿಗೇರ ಪ್ರಾರ್ಥಿಸಿದರು. ಶ್ರೀದೇವಿ ಹುಕ್ಕೇರಿ ನಿರೂಪಿಸಿದರು. ಕೃಷ್ಣಾ ಕಡಕೋಳ ವಂದಿಸಿದರು.