ಯುವಕರು ನಮ್ಮ ಸ್ಥಳೀಯ ಇತಿಹಾಸ ಪರಂಪರೆಯನ್ನು ಹೊರ ರಾಜ್ಯಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರವಾಸ ಸುಖಕರವಾಗಿ ಯಶಸ್ಸು ಕಾಣಲಿ ಎಂದು ಸಿಪಿಐ ಹನುಮಂತರಾಯಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಯುವಕರು ನಮ್ಮ ಸ್ಥಳೀಯ ಇತಿಹಾಸ ಪರಂಪರೆಯನ್ನು ಹೊರ ರಾಜ್ಯಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರವಾಸ ಸುಖಕರವಾಗಿ ಯಶಸ್ಸು ಕಾಣಲಿ ಎಂದು ಸಿಪಿಐ ಹನುಮಂತರಾಯಪ್ಪ ತಿಳಿಸಿದರು.

ಇಲ್ಲಿನ ಶ್ರೀದಂಡಿನಮಾರಮ್ಮ ದೇವಸ್ಥಾನದ ಆವರಣದಲ್ಲಿ ತಾಲೂಕಿನ ಮಿಡಿಗೇಶಿ ಹೋಬಳಿ ವ್ಯಾಪ್ತಿಯ ಹೊಸಕೆರೆ ಗ್ರಾಮದ ಯುವಕರ ತಂಡವೂಂದು ಲೇಹ ಲಡಾಕ್ ಗೆ 15 ದಿನಗಳ ಪ್ರವಾಸ ಕೈಗೊಂಡಿದ್ದು, ಕನ್ನಡ ಭಾವುಟವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಧುಗಿರಿ ತಾಲೂಕಿನ ಏಕಶಿಲಾ ಬೆಟ್ಟ ಸೇರಿದಂತೆ ಸುಪ್ರಸಿದ್ಧ ಯಾತ್ರ ಸ್ಥಳಗಳ ಹಾಗೂ ಪ್ರವಾಸಿ ಕೇಂದ್ರಗಳ ಬಗ್ಗೆ ಹೊರ ರಾಜ್ಯಗಳಲ್ಲಿ ನಮ್ಮ ಮಧುಗಿರಿ ಇತಿಹಾಸವನ್ನು ಪರಿಚಯಿಸಲು ಕೈಗೊಂಡಿರುವ ಯುವಕರ ತಂಡದ ಕಾರ್ಯ ಶ್ಲಾಘನೀಯ ಇವರುಗಳ ಪ್ರವಾಸಕ್ಕೆ ದಂಡಿಮಾರಮ್ಮ ದೇವಿಯ ಆಶೀರ್ವಾದವಿರಲಿ ಎಂದು ಶುಭ ಹಾರೈಸಿದರು.

ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ ಮಾತನಾಡಿ, ಹೊಸಕೆರೆ ಯುವಕರ ತಂಡ ಸಮಾಜಮುಖಿಯಾಗಿ ಕಾರ್ಯಕ್ರಮ ಏರ್ಪಡಿಸಿ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಈ ಸಲ ಲೇಹ ಲಡಾಕ್‌ ಗೆ ಹೋಗಿ ಅಲ್ಲಿನ ಜನತೆಗೆ ಮಧುಗಿರಿ ಇತಿಹಾಸವನ್ನು ಸಾರಲು ಹೊರಟಿರುವುದು ಸಂತಸ ತಂದಿದೆ ಎಂದರು.

ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಇ .ರಾಮಕೃಷ್ಣ ಮಾತನಾಡಿ, ನಮ್ಮ ಹೊಸಕೆರೆ ಗ್ರಾಮದ ಎಚ್‌.ಜಿ.ಮಂಜುನಾಥ್, ಶಂಕರನಾಗ್,ಇರ್ಷಾದ್‌ ,ಅನುಷ್‌ ನಾಯಕ್ ಇವರ ತಂಡ ಲೇಹ ಲಡಾಕ್ ಗೆ ಹೊರ ಪ್ರಥಮ ತಂಡವಾಗಿದ್ದು, ನಮ್ಮ ನೆಲ,ಜಲ,ಸಂಸ್ಕೃತಿ,ಸಂಸ್ಕಾರ ಹಾಗೂ ಇತಿಹಾಸ ಸಾರುವ ಜೊತೆಗೆ ಇತರೆ ರಾಜ್ಯಗಳಲ್ಲಿನ ಜನರ ಆಚಾರ, ವಿಚಾರ ಸಂಸ್ಕೃತಿಗಳ ಬಗ್ಗೆ ಯುವಕರು ಅರ್ಥ ಮಾಡಿಕೊಳ್ಳುವ ಸಲುವಾಗಿ ಈ ಪ್ರವಾಸ ಕೈಗೊಂಡಿರುವುದು ಸ್ವಾಗತಾರ್ಹ ಎಂದರು.

ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕ ಗೋವಿಂದರಾಜು, ಬಾಲಾಜಿ ಪೆಟ್ರೋಲ್ ಬಂಕ್ ಮಾಲೀಕ ಶ್ರೀಧರ್,ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ದೊಡ್ಡೇರಿ ಕಣಿಮಯ್ಯ, ಪಿಡಿಒ ರಜನಿ, ಮ್ತತು ಹೊಸಕೆರೆ ಗ್ರಾಮಸ್ಥರು ಸೇರಿದಂತೆ ಇತರರಿದ್ದರು.