ಕೆಎಂಸಿಆರ್‌ಐಗೆ ಹೊಸಮನಿ ನೂತನ ನಿರ್ದೇಶಕ

| Published : Jul 03 2025, 11:51 PM IST

ಕೆಎಂಸಿಆರ್‌ಐಗೆ ಹೊಸಮನಿ ನೂತನ ನಿರ್ದೇಶಕ
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಂಸಿಆರ್‌ಐನ ಸರ್ಜರಿ ವಿಭಾಗದ ಮುಖ್ಯಸ್ಥರೂ ಆಗಿರುವ ಹೊಸಮನಿ, ಮೂಲತಃ ಬಾಗಲಕೋಟೆ ಜಿಲ್ಲೆಯ ಬದಾಮಿಯವರು. ಹುಬ್ಬಳ್ಳಿಯ ಕೆಎಂಸಿಯಲ್ಲೇ ಎಂಬಿಬಿಎಸ್‌, ಎಂಎಸ್ ಪದವಿ ಮುಗಿಸಿದವರು. ಈ ಸಂಸ್ಥೆಯಲ್ಲಿ ಜನರಲ್‌ ಸರ್ಜರಿ ಎಚ್‌ಓಡಿ ಹಾಗೂ ಕೆಎಂಸಿಆರ್‌ಐ ಪ್ರಿನ್ಸಿಪಾಲ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಹುಬ್ಬಳ್ಳಿ: ಮಹತ್ತರ ಹಾಗೂ ಅಚ್ಚರಿಯ ಬೆಳವಣಿಗೆಯಲ್ಲಿ ಇಲ್ಲಿನ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಕೆಎಂಸಿ ಆರ್‌ಐ)ಯ ಪ್ರಭಾರ ನಿರ್ದೇಶಕ ಡಾ. ಎಸ್.ಎಫ್‌. ಕಮ್ಮಾರ ಅವರನ್ನು ಬದಲಿಸಿರುವ ಸರ್ಕಾರ, ಹಿರಿಯ ಪ್ರಾಧ್ಯಾಪಕ ಡಾ. ಈಶ್ವರ ಹೊಸಮನಿ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ಮಾಡಿ ಗುರುವಾರ ಆದೇಶಿಸಿದೆ. ಈ ನಡುವೆ ಹೊಸಮನಿ ಅವರು ಗುರುವಾರ ಸಂಜೆಯೇ ಅಧಿಕಾರ ಸ್ವೀಕರಿಸಿದರು.

ಕೆಎಂಸಿಆರ್‌ಐನ ಸರ್ಜರಿ ವಿಭಾಗದ ಮುಖ್ಯಸ್ಥರೂ ಆಗಿರುವ ಹೊಸಮನಿ, ಮೂಲತಃ ಬಾಗಲಕೋಟೆ ಜಿಲ್ಲೆಯ ಬದಾಮಿಯವರು. ಹುಬ್ಬಳ್ಳಿಯ ಕೆಎಂಸಿಯಲ್ಲೇ ಎಂಬಿಬಿಎಸ್‌, ಎಂಎಸ್ ಪದವಿ ಮುಗಿಸಿದವರು. ಈ ಸಂಸ್ಥೆಯಲ್ಲಿ ಜನರಲ್‌ ಸರ್ಜರಿ ಎಚ್‌ಓಡಿ ಹಾಗೂ ಕೆಎಂಸಿಆರ್‌ಐ ಪ್ರಿನ್ಸಿಪಾಲ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. 1983ನೇ ಬ್ಯಾಚಿನ ಡಾ. ಈಶ್ವರ ಹೊಸಮನಿ ಮುಂಬರುವ ಮೇ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ.

ಕೆಎಂಸಿಆರ್‌ಐನ ಮುಖ್ಯ ಆಡಳಿತಾಧಿಕಾರಿ ರಮೇಶ ಕಳಸದ ಅವರು ಡಾ. ಹೊಸಮನಿ ಅವರಿಗೆ ಆದೇಶ ಪತ್ರ ನೀಡಿದ ಬಳಿಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಹಿಂದಿನ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಬೆಂಗಳೂರಿನಲ್ಲಿದ್ದು, ಶುಕ್ರವಾರ ಬೆಳಗ್ಗೆ 9 ಗಂಟೆ ವೇಳೆಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಡಾ. ಹೊಸಮನಿ ಅವರಿಗೂ ಸರ್ಕಾರ ಪೂರ್ಣಾವಧಿ ಅಧಿಕಾರ ನೀಡದೇ ಮುಂದಿನ ಪರ್ಮನೆಂಟ್ ನಿರ್ದೇಶಕರ ನೇಮಕವಾಗುವ ವರೆಗೆ ಅಥವಾ ಮುಂದಿನ ಆದೇಶದ ವರೆಗೆ ಎಂದು ತಿಳಿಸಿದೆ. ಕೆಎಂಸಿಆರ್‌ಐ ಸಿನಿಯಾರಿಟಿ ಲಿಸ್ಟ್‌ದಲ್ಲಿ ಮೊದಲ ಐವರ ಸಾಲಿನಲ್ಲಿದ್ದಾರೆ ಡಾ. ಹೊಸಮನಿ.

ಪ್ರಾಚಾರ್ಯರಾಗಿ ಆಡಳಿತಾತ್ಮಕ ಅನುಭವ ಹೊಂದಿರುವ ಡಾ. ಹೊಸಮನಿ ಅವರು ಇತ್ತೀಚೆಗಷ್ಟೇ ಸರ್ಜರಿ ವಿಭಾಗದ ಮುಖ್ಯಸ್ಥರಾಗಿದ್ದರು. ಸರ್ಕಾರದ ಆದೇಶ ಹೊರಬರುತ್ತಿದ್ದಂತೆ ಕೆಎಂಸಿ ವೈದ್ಯರ ದಂಡು ಹೊಸಮನಿಯವರಿಗೆ ಶುಭಾಶಯ ಕೋರಿದರು.

ಡಾ. ರಾಮಲಿಂಗಪ್ಪ ಅಂಟರತಾನಿ ನಿರ್ಗಮನದ ನಂತರ ಕೆಎಂಸಿಆರ್‌ಐ ನಿರ್ದೇಶಕ ಸ್ಥಾನಕ್ಕೆ ಡಾ. ಹೊಸಮನಿ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಆಸೆ ಕೈಗೂಡಿರಲಿಲ್ಲ. ಒಂದೂವರೆ ವರ್ಷದಲ್ಲಿ ಬದಲಾದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಹೊಸಮನಿ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ಮಾಡಿ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.