ಸಾರಾಂಶ
ನಗರಸಭೆಯ 2025- 26ನೇ ಸಾಲಿನ 1.30 ಕೋಟಿ ರು. ಉಳಿತಾಯ ಬಜೆಟನ್ನು ನಗರಸಭೆ ಆವರಣದಲ್ಲಿ ಬಜೆಟ್ ಸಭೆಯಲ್ಲಿ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ.ದೇವರಾಜ್ ಮಂಡಿಸಿದರು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ನಗರಸಭೆಯ 2025- 26ನೇ ಸಾಲಿನ 1.30 ಕೋಟಿ ರು. ಉಳಿತಾಯ ಬಜೆಟನ್ನು ನಗರಸಭೆ ಆವರಣದಲ್ಲಿ ಬಜೆಟ್ ಸಭೆಯಲ್ಲಿ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ.ದೇವರಾಜ್ ಮಂಡಿಸಿದರು.ಬಜೆಟ್‌ನಲ್ಲಿ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಉದ್ಯಾನವನಗಳ ಅಭಿವೃದ್ಧಿ, ಮಕ್ಕಳ ಆಟಿಕೆ ಹಾಗೂ ವ್ಯಾಯಾಮ ಪರಿಕರ ಅಳವಡಿಸಲು 30 ಲಕ್ಷ ರು., ಕಂದಾಯ ಶಾಖೆಯ ಹಳೆ ದಾಖಲೆ ಗಣಕೀಕರಣಗೊಳಿಸಲು 10 ಲಕ್ಷ ರು., ಜಿಲ್ಲಾ ಹಂತದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ೫ ಲಕ್ಷ ರು., ಬೀದಿ ನಾಯಿಗಳ ಸಂತಾನಹರಣಕ್ಕೆ 15 ಲಕ್ಷ ರು., ಪೌರಕಾರ್ಮಿಕರ ದಿನಾಚರಣೆಗೆ 5 ಲಕ್ಷ ರು., ಆರೋಗ್ಯ ಕಾರ್ಯಕ್ರಮಗಳ ಜಾಗೃತಿಗೆ ಎರಡು ಲಕ್ಷ ರು., ಎಸ್‌ಸಿ/ಎಸ್‌ಟಿ ಹಾಗೂ ವಿಕಲಚೇತನರ ಕಲ್ಯಾಣ ಯೋಜನೆಗಳ ವೆಚ್ಚ 87.81ಲಕ್ಷ ರು. ಮೀಸಲಿಡುವ ಮೂಲಕ ನಗರದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.
ನಿರೀಕ್ಷಿತ ಅಂದಾಜುವೆಚ್ಚ:ಆಸ್ತಿ ತೆರಿಗೆ, ಜಾಹೀರಾತು, ಉದ್ದಿಮೆ ತೆರಿಗೆ, ಇತರೆ ಶುಲ್ಕಗಳಿಂದ 15.44 ಕೋಟಿ ರು., ನೀರಿನ ತೆರಿಗೆಯ ಮೂಲಕ 50 ಲಕ್ಷ ರು., ಮಳಿಗೆಗಳ ಬಾಡಿಗೆಗಳಿಂದ 50 ಲಕ್ಷ ರು., ಕೇಂದ್ರ ಸರ್ಕಾರದಿಂದ 5.22 ಕೋಟಿ ರು., ರಾಜ್ಯ ಸರ್ಕಾರದಿಂದ 21.30 ಕೋಟಿ ರು., ಕಳೆದ ಸಾಲಿನ ಉಳಿಕೆ 7.73 ಕೋಟಿ ರು. ಒಳಗೊಂಡಂತೆ ಒಟ್ಟು 59.70 ಕೋಟಿ ರು.ಗಳ ಹಣಕಾಸಿನ ಲಭ್ಯತೆಯನ್ನು ಅಂದಾಜಿಸಲಾಗಿದೆ ಎಂದರುನಿರೀಕ್ಷಿತ ವೆಚ್ಚಗಳು:
ಕಚೇರಿಯ ಆಡಳಿತ ಮತ್ತು ನಿರ್ವಹಣೆ ಹಾಗೂ ಕೌನ್ಸಿಲ್ ಮಂಡಳಿಯ ವೆಚ್ಚ 2.07 ಕೋಟಿ ರರು., ಅಧಿಕಾರಿ ಮತ್ತು ನೌಕರರ ವೇತನ ಹಾಗೂ ಭತ್ಯೆಗಳಿಗೆ 5.95 ಕೋಟಿ ರು., ಕಲ್ಯಾಣ ಕಾರ್ಯಕ್ರಮಗಳಿಗೆ 87.81ಲಕ್ಷ ರು., ನೀರು ಸರಬರಾಜು ನಿರ್ವಹಣೆ ಮತ್ತು ಕಾಮಗಾರಿಗೆ 8.20 ಕೋಟಿ ರು., ಬೀದಿ ದೀಪ ನಿರ್ವಹಣೆಗೆ 3.86 ಕೋಟಿ ರು., ಘನ ತ್ಯಾಜ್ಯ ನಿರ್ವಹಣೆಗೆ 6.59 ಕೋಟಿ ರು., ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 5.05 ಕೋಟಿ ರು., ಚರಂಡಿ ಮತ್ತು ರಾಜಕಾಲುವೆ ಕಾಮಗಾರಿಗಳಿಗೆ 5.09 ಕೋಟಿ ರು., ಇತರೆ ನಾಗರಿಕ ಸೌಲಭ್ಯ ಕಾಮಗಾರಿಗಳಿಗೆ 5.91 ಕೋಟಿ ರು., ಅಸಾಧಾರಣ ಪಾವತಿಗೆ (ತೆರಿಗೆ ಮತ್ತು ಕರಗಳು) 5.45 ಕೋಟಿ ರು. ಸೇರಿದಂತೆ ಒಟ್ಟು 49.40 ಕೋಟಿ ರು. ವೆಚ್ಚಗಳನ್ನು ಅಂದಾಜಿಸಲಾಗಿದೆ ಎಂದರು.ಆಡಳಿತ ಪಕ್ಷದ ಸದಸ್ಯರಿಂದಲೇ ದೂರುಗಳ ಸುರಿಮಳೆ:
ನಮ್ಮ ವಾರ್ಡ್ ಗಳಲ್ಲಿ ನಮ್ಮ ಗಮನಕ್ಕೆ ಬಾರದೆ ಕೆಲಸಗಳನ್ನು ಮಾಡುವ ಅಧಿಕಾರಿಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ನಗರಸಭೆ ಸದಸ್ಯ ನಿತೀನ ಶ್ರೀನಿವಾಸ್ ಹಾಗೂ ಮಾಜಿ ಸ್ಥಾಯಿಸಮಿತಿ ಸದಸ್ಯ, ಹಾಲಿ ಸದಸ್ಯ ಸೋಮಶೇಖರ್ ಆರೋಪಿಸಿದರು.ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿ:
ಕಳೆದ ಎರಡು ಅವಧಿಯಿಂದ ಆಡಳಿತ ನಡೆಸುತ್ತಿರುವವರಿಂದ ಹೊಸಕೋಟೆ ನಗರಕ್ಕೆ ಏನು ಕೊಡುಗೆ ಎಂದು ವಿಪಕ್ಷ ನಾಯಕ ಕೇಶವ್ ಮೂರ್ತಿ ಪ್ರಶ್ನಿಸಿದರು, 12 ವರ್ಷಗಳಿಂದ ಒಳಚರಂಡಿ ಕಾಮಗಾರಿ ನಿಂತಿದೆ, ಕೆಲ ಭಾಗಗಳಲ್ಲಿ ಅನಧಿಕೃತವಾಗಿ ಸಾರ್ವಜನಿಕರು ಒಳಚರಂಡಿ ಸಂಪರ್ಕ ಪಡೆದಿದ್ದಾರೆ, ನಗರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಹಲವಾರು ಕೊಳವೆ ಬಾವಿಗಳಿದ್ದು , ಕೇವಲ ಕೇಬಲ್ ಕಟ್ ಆಗಿ ಕಾರ್ಯ ನಿರ್ವಹಣೆ ಬಂದ್ ಆಗಿದೆ, ಅಧಿಕಾರಿಗಳು ಕೆಲಸ ಮಾಡದೆ ಇರುವ ಸಂಪನ್ಮೂಲಗಳನ್ನು ಬಳಸದೆ ಕೇವಲ ಸಬೂಬು ಹೇಳಿ ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಅಧ್ಯಕ್ಷೆ ಆಶಾ ರಾಜಶೇಖರ್ ಮಾತನಾಡಿ, ಸಮಸ್ಯೆಗಳ ಬಗ್ಗೆ ಕೂಲಂಕುಶವಾಗಿ ವರದಿ ಪಡೆದು ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉಪಾದ್ಯಕ್ಷ ಸಿಪಿಎನ್ ನವೀನ್ ಕುಮಾರ್, ನಗರಸಭೆ ಆಯುಕ್ತ ನೀಲಾಲೋಚನ ಪ್ರಭು ಹಾಗೂ ಸದಸ್ಯರು ಹಾಜರಿದ್ದರು.