ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಇಲ್ಲಿನ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟವಾಗಿದ್ದು, ಈ ಚುನಾವಣೆ ಮಾಜಿ ಸಚಿವ ಆನಂದ ಸಿಂಗ್, ಶಾಸಕ ಎಚ್.ಆರ್. ಗವಿಯಪ್ಪ ಅವರ ರಾಜಕೀಯ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗುವ ಸಾಧ್ಯತೆ ಗೋಚರಿಸುತ್ತಿದೆ.ನಗರಸಭೆ ಅತಂತ್ರ ಫಲಿತಾಂಶ ಪಡೆದಿದ್ದು, ಈ ಹಿಂದೆ ಬಿಜೆಪಿ ಆಡಳಿತ ನಡೆಸಿದ್ದು, ಈಗ ಕಾಂಗ್ರೆಸ್ ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ.
ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಕೆಟಗರಿಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಈ ಬಾರಿ ಚುನಾವಣೆ ಮಾಜಿ ಸಚಿವ ಆನಂದ ಸಿಂಗ್ ಅವರ ಆಪ್ತ ಬಳಗದವರು ಹಾಗೂ ಶಾಸಕ ಎಚ್.ಆರ್. ಗವಿಯಪ್ಪ ಅವರ ಆಪ್ತ ವಲಯದವರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಮೀಸಲು ಪ್ರಕಟವಾಗುತ್ತಲೇ ಅಖಾಡಕ್ಕೆ ಇಳಿದ ಉಭಯ ಕಡೆಯವರು ಪಕ್ಷೇತರ ಸದಸ್ಯರ ದುಂಬಾಲು ಬಿದ್ದಿದ್ದಾರೆ. ನಗರಸಭೆಯಲ್ಲಿ ಪಕ್ಷೇತರರೇ ನಿರ್ಣಾಯಕರಾಗಿದ್ದು, ಈಗಾಗಲೇ ಆಪ್ ಸದಸ್ಯ ಸೇರಿ 10 ಪಕ್ಷೇತರರು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಇನ್ನು ಮೂವರು ಗುಟ್ಟು ಬಿಟ್ಟುಕೊಟ್ಟಿಲ್ಲ.ಪಕ್ಷೇತರರೇ ನಿರ್ಣಾಯಕ: ನಗರಸಭೆಯ 35 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ನಿಂದ 12 ಸದಸ್ಯರು, ಬಿಜೆಪಿಯಿಂದ 10 ಸದಸ್ಯರು, ಆಮ್ ಆದ್ಮಿ ಪಕ್ಷದಿಂದ ಒಬ್ಬರು, 12 ಸದಸ್ಯರು ಪಕ್ಷೇತರರು ಗೆಲುವು ಸಾಧಿಸಿದ್ದರು. ಈಗಾಗಲೇ ಆಮ್ ಆದ್ಮಿ ಪಾರ್ಟಿ ತೊರೆದು ಶೇಕ್ಷಾವಲಿ ಬಿಜೆಪಿ ಸೇರಿ ಉಪಾಧ್ಯಕ್ಷರಾಗಿಯೂ ಆಡಳಿತ ನಡೆಸಿದ್ದಾರೆ. ಇನ್ನು 9 ಪಕ್ಷೇತರರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಬಳಿ 20 ಸದಸ್ಯರ ಬಲ ಇದೆ. ಆದರೆ, ಪಕ್ಷೇತರರನ್ನು ಸಾರಾಸಗಟಾಗಿ ತನ್ನತ್ತ ಸೆಳೆಯಲು ಕಾಂಗ್ರೆಸ್ ರಣತಂತ್ರ ರೂಪಿಸತೊಡಗಿದೆ. ನಗರಸಭೆ ಆಡಳಿತದ ಚುಕ್ಕಾಣಿ ಯಾರು ಹಿಡಿದುಕೊಳ್ಳುತ್ತಾರೆ ಎಂಬುದು ಕುತೂಹಲಕ್ಕೆಡೆ ಮಾಡಿದೆ.
ಆಕಾಂಕ್ಷಿಗಳ ಕಾರ್ಯಾಚರಣೆ: ನಗರಸಭೆ ಅಧ್ಯಕ್ಷ ಗಾದಿ ಮೇಲೆ ಮಾಜಿ ಸಚಿವ ಆನಂದ ಸಿಂಗ್ ಆಪ್ತ ಬಳಗದ ಸದಸ್ಯರಾದ ರೂಪೇಶ್‌ಕುಮಾರ, ಶೇಕ್ಷಾವಲಿ, ಎಲ್.ಎಸ್. ಆನಂದ, ಉಮಾದೇವಿ ಆಕಾಂಕ್ಷಿಯಾಗಿದ್ದಾರೆ.ಇನ್ನು ಶಾಸಕ ಎಚ್.ಆರ್. ಗವಿಯಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಸದಸ್ಯರಾದ ಅಸ್ಲಂ ಮಾಳಗಿ, ಕಾರದಪುಡಿ ಮಹೇಶ್, ಮುಮ್ತಾಜ್ ಬೇಗಂ, ಮುನ್ನಿ ಕಾಸಿಂ ಆಕಾಂಕ್ಷಿಗಳು. ಈ ಬಾರಿ ಚುನಾವಣೆಯಲ್ಲಿ ಪಕ್ಷೇತರರೇ ನಿರ್ಣಾಯಕರಾಗಿರುವ ಹಿನ್ನೆಲೆಯಲ್ಲಿ 10 ಪಕ್ಷೇತರರನ್ನು ಸೆಳೆದರೂ ನಗರಸಭೆ ಮೇಲೆ ಕಾಂಗ್ರೆಸ್ ಬಾವುಟ ಹಾರಿಸೋಣ ಎಂದು ಶಾಸಕ ಗವಿಯಪ್ಪ ಬಳಿ ಅವರ ಆಪ್ತ ವಲಯದ ಸದಸ್ಯರು ಚರ್ಚಿಸಿದ್ದಾರೆ. ಆದರೆ, ಮಾಜಿ ಸಚಿವ ಆನಂದ ಸಿಂಗ್ ನಗರಸಭೆ ಮೇಲಿನ ತಮ್ಮ ಹಿಡಿತ ಬಿಟ್ಟು ಕೊಡುವುದಿಲ್ಲ ಎಂದು ಎಣಿಕೆ ಹಾಕಿದ ಶಾಸಕ ಗವಿಯಪ್ಪ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಆದರೆ, ಕಾಂಗ್ರೆಸ್‌ನ ಆಕಾಂಕ್ಷಿಗಳು ಪಕ್ಷೇತರರ ಜತೆ ಸಂಪರ್ಕ ಸಾಧಿಸುತ್ತಿದ್ದಾರೆ. ಇದು ಫಲಪ್ರದವಾದರೆ ಕಾಂಗ್ರೆಸ್ ಗಟ್ಟಿಯಾಗಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಗೆಲ್ಲುವ ಮಾನದಂಡದೊಂದಿಗೆ ಕಣಕ್ಕಿಳಿಯಲಿದೆ ಎಂದು ನಗರಸಭೆಯ ಸದಸ್ಯರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.ಕಮಲಾಪುರ ಪಪಂ: ಇನ್ನು ಕಮಲಾಪುರ ಪಪಂ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 20 ಸದಸ್ಯ ಬಲದ ಪಪಂನಲ್ಲಿ ಕಾಂಗ್ರೆಸ್‌ನ 14 ಸದಸ್ಯರಿದ್ದಾರೆ. ಇನ್ನು ಐವರು ಪಕ್ಷೇತರರಿದ್ದಾರೆ. ಒಬ್ಬರು ಮಾತ್ರ ಬಿಜೆಪಿಯಿಂದ ಗೆದ್ದಿದ್ದಾರೆ. ಈ ಬಾರಿ ಅಳೆದು ತೂಗಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ. ಉಪಾಧ್ಯಕ್ಷ ಸ್ಥಾನದಲ್ಲೂ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ.
ಮರಿಯಮ್ಮನಹಳ್ಳಿ ಪಪಂ: ಹೊಸಪೇಟೆಯ ಮರಿಯಮ್ಮನಹಳ್ಳಿ ಪಪಂಗೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಟಿಗೆ ಮೀಸಲಾಗಿದ್ದು, ಇಲ್ಲೂ ಆಕಾಂಕ್ಷಿಗಳ ನಡುವೆ ಪೈಪೋಟಿ ಇದೆ.