ಸಾರಾಂಶ
ರಾಣಿಬೆನ್ನೂರು: ಹಾಸ್ಟೆಲ್ ಪ್ರವೇಶ ಅರ್ಜಿ ಆಹ್ವಾನ ವಿಳಂಬವಾಗಿದ್ದು ಕೂಡಲೇ ಪಟ್ಟಿ ಬಿಡುಗಡೆಗೆ ಆಗ್ರಹಿಸಿ ಮಂಗಳವಾರ ತಾಲೂಕು ಎಸ್‌ಎಫ್‌ಐ ಘಟಕದ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಮುನಿಸಿಪಲ್ ಮೈದಾನದಿಂದ ಹೊರಟ ವಿದ್ಯಾರ್ಥಿಗಳು ಬಸ್ ನಿಲ್ದಾಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗಿರೀಶ್ ಹೊಸಮನಿ ಹಾಗೂ ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ಪ್ರಸಾದ್ ಆಲದಕಟ್ಟಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ಸಮಯದಲ್ಲಿ ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ರಾಜ್ಯದಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗಿ ಸುಮಾರು 20 ದಿನಗಳಾದರೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿಸಿಎಂ), ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಮೂಲಕ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಸತಿ ನಿಲಯಗಳಲ್ಲಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿಲ್ಲ. ಸಾವಿರಾರು ಸೀಟುಗಳು ಖಾಲಿ ಇದ್ದರೂ ಅರ್ಜಿ ಕರೆಯದೆ ನಿರ್ಲಕ್ಷ್ಯ ಮಾಡಿರುವ ಸಂಬಂಧಿಸಿದ ಇಲಾಖೆಗಳ ಧೋರಣೆ ಸರಿಯಲ್ಲ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿಸಿಕೊಂಡು ಈಗಾಗಲೇ ಮುಂದಿನ ಶಿಕ್ಷಣಕ್ಕೆ ಹೋಗಿರುತ್ತಾರೆ. ಹೊಸ ವಿದ್ಯಾರ್ಥಿಗಳು ಈಗಾಗಲೇ 5,6,7,8,9 ನೇ ಹಾಗೂ ಪಿಯುಸಿ ತರಗತಿಗಳಿಗೆ ದಾಖಲಾತಿ ಮಾಡಿಸಿದ್ದಾರೆ. ರಾಜ್ಯದ ಮತ್ತು ಜಿಲ್ಲೆಯಲ್ಲಿ ಬಹುತೇಕ ಶಾಲಾ-ಕಾಲೇಜ್‌ಗಳಲ್ಲಿ ತರಗತಿಗಳು ಪ್ರಾರಂಭಂವಾಗಿವೆ. ಹಲವಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣದ ವಸತಿಗಾಗಿ ಹಾಸ್ಟೆಲ್ ಮೇಲೆ ಅವಲಂಬಿತರಾಗಿದ್ದಾರೆ. ಕಳೆದ ವರ್ಷ ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಮೇ ತಿಂಗಳಲ್ಲಿ ಅರ್ಜಿ ಆಹ್ವಾನ ಮಾಡಿ ಜೂನ್ ತಿಂಗಳ 10ನೇ ದಿನಾಂಕ ಒಳಗಡೆ ಅರ್ಜಿ ತೆಗೆದುಕೊಂಡು ಅರ್ಜಿ ಪ್ರಕ್ರಿಯೆ ಮುಗಿಸಿದ್ದರು. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇಂದಿನವರೆಗೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹೊಸ ಪ್ರವೇಶಕ್ಕೆ ಅರ್ಜಿ ಕರೆಯದೇ ನಿರ್ಲಕ್ಷ್ಯ ಮಾಡುತ್ತಿರುವುದನ್ನು ಗಮನಿಸಿದರೆ ಸರ್ಕಾರ ಗ್ರಾಮೀಣ ಪ್ರದೇಶದ ಬಡ, ದಲಿತ,ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ ಎಂಬ ಅನುಮಾನ ಉಂಟಾಗುತ್ತದೆ. ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ ಸಚಿವರು ಈ ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕು ಇಲ್ಲದಿದ್ದಲ್ಲಿ ರಾಜ್ಯಾದಂತ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಶ್ರೀಧರ ಛಲವಾದಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಕಾಲೇಜಿನ ತರಗತಿಗೆ ಹಾಜರಾಗಬೇಕೆಂದರೆ ಜಿಲ್ಲೆಯಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯಗಳು ಇಲ್ಲ. ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಅರ್ಜಿ ಸಲ್ಲಿಸಲು ದಿನ್ಯನಿತ್ಯ ಕಂಪ್ಯೂಟರ್ ಸೆಂಟರ್‌ಗಳಿಗೆ ಅಲೆದಾಡುತ್ತಿದ್ದಾರೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ ಮಾಡಬೇಕು ಎಂದರು. ಎಸ್‌ಎಫ್‌ಐ ತಾಲೂಕು ಉಪಾಧ್ಯಕ್ಷ ನೇಹಾಲ್‌ಖಾನ್ ಗಂಗಾವತಿ, ಮುಖಂಡರಾದ ಗೌತಮ್ ಸಾವಕ್ಕನವರ, ಅಭಿಷೇಕ ಕುಸಗೂರ, ಪವಿತ್ರ ಎಚ್.ಕೆ., ನಾಗರತ್ನ ಬಿ.ಎಸ್., ಭವ್ಯ ಆರ್.ಕೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.