ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್ ಅವಘಡ: ತಪ್ಪಿದ ಅನಾಹುತ

| Published : Nov 08 2023, 01:02 AM IST

ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್ ಅವಘಡ: ತಪ್ಪಿದ ಅನಾಹುತ
Share this Article
  • FB
  • TW
  • Linkdin
  • Email

ಸಾರಾಂಶ

ಚಿಂತಾಮಣಿ ನಗರದ ಎನ್.ಆರ್.ಬಡಾವಣೆಯಲ್ಲಿರುವ ಪರಿಶಿಷ್ಟ ಪಂಗಡದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು ೨ ಗಂಟೆ ಸಮಯದಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ.

ಚಿಂತಾಮಣಿ: ಚಿಂತಾಮಣಿ ನಗರದ ಎನ್.ಆರ್.ಬಡಾವಣೆಯಲ್ಲಿರುವ ಪರಿಶಿಷ್ಟ ಪಂಗಡದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು ೨ ಗಂಟೆ ಸಮಯದಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ.

ಅವಘಡ ನಡೆದ ಸಮಯದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿದ್ಯುತ್ ಬೋರ್ಡ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ರೂಮಿನಲ್ಲಿದ್ದ ಹಾಸಿಗೆಗಳು, ವಿದ್ಯಾರ್ಥಿಗಳ ಬಟ್ಟೆಗಳು, ಪುಸ್ತಕಗಳು ಸುಟ್ಟುಹೋಗಿದೆ. ರೂಮಿನ ಗೋಡೆಗಳು ವಿದ್ಯುತ್ ಅವಘಡದಿಂದಾಗಿ ಕಪ್ಪುಬಣ್ಣಕ್ಕೆ ತಿರುಗಿವೆ. ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಿರುತ್ತಾರೆ.

ನಿಲಯದ ವಿದ್ಯಾರ್ಥಿಗಳು ಮಾತನಾಡಿ, ೧೦ ಕೊಠಡಿಗಳಲ್ಲಿ ೮೮ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಿದ್ದು, ನಿಲಯದಲ್ಲಿ ಗಾಳಿ ಬೆಳಕು ಸಮರ್ಪಕವಾಗಿರುವುದಿಲ್ಲ. ಒಂದು ಕೊಠಡಿಗೆ ೮-೯ ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಿಸಿರುವುದರಿಂದ ನಾವು ಓದಲು ತೊಂದರೆಯಾಗುತ್ತಿದೆ. ಬೇರೆ ಕಟ್ಟಡಕ್ಕೆ ವರ್ಗಾಯಿಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ನಾವೆಲ್ಲಾ ಬಡ ಕುಟುಂಬದಿಂದ ಬಂದವರಾಗಿದ್ದು, ಈ ಅವಘಡದಿಂದ ನಮ್ಮ ಬಟ್ಟೆಗಳು, ಪುಸ್ತಕಗಳು ಸುಟ್ಟು ಹಾಳಾಗಿರುತ್ತವೆಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕುಮಾರಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ. ನಿಲಯಗಳ ವಾರ್ಡನ್‌ಗಳು ನಮ್ಮ ಮಾತು ಕೇಳುವುದಿಲ್ಲ. ವಿದ್ಯಾರ್ಥಿಗಳು ನಮ್ಮ ಮಾತು ಕೇಳುವುದಿಲ್ಲ, ಮದ್ಯಪಾನ ಮಾಡಿಕೊಂಡು ಬರುವುದಲ್ಲದೆ, ಕೊಠಡಿಗಳಲ್ಲಿಯೇ ಮದ್ಯಪಾನದ ಬಾಟಲ್‌ಗಳನ್ನು ಇಟ್ಟುಕೊಂಡಿರುತ್ತಾರೆ. ವಾರ್ಡನ್‌ಗಳಿಗೆ ಏನಾದರು ಹೇಳಿದರೆ ಶಾಸಕರು, ಸಂಸದರು, ಮಂತ್ರಿಗಳ ಹತ್ತಿರ ಹೋಗುತ್ತಾರೆ. ನಿಲಯಗಳ ವಾರ್ಡನ್‌ಗಳು ಸರಿಯಾಗಿ ಕೆಲಸ ನಿರ್ವಹಿಸಿದ್ದರೆ ಇಂತಹ ಅವಘಡಗಳನ್ನು ತಪ್ಪಿಸುವುದರ ಜೊತೆಗೆ ವಿದ್ಯಾರ್ಥಿಗಳು ತಪ್ಪು ದಾರಿಗೆ ಹೋಗುವುದನ್ನು ತಪ್ಪಿಸಬಹುದೆಂದರು.