ರೋಣದಲ್ಲಿ ಸೌಕರ್ಯಕ್ಕಾಗಿ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ

| Published : Nov 04 2025, 12:45 AM IST

ಸಾರಾಂಶ

ಪ್ರತಿಭಟನೆಯಲ್ಲಿ ಎಸ್‌ಎಫ್ಐ ರೋಣ ಮತ್ತು ಗಜೇಂದ್ರಗಡ ತಾಲೂಕು ಘಟಕ ಮುಖಂಡರು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು‌.

ರೋಣ: ನಿತ್ಯ ಬಳಕೆಗೆ ಸ್ವಚ್ಛ ಮತ್ತು ಸಮರ್ಪಕ ನೀರು ಪೂರೈಕೆ, ಸೋಪ್, ಹಾಸಿಗೆ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸುವಂತೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ಸೋಮವಾರ ಹಾಸ್ಟೆಲ್ ಎದುರು ಪ್ರತಿಭಟನೆ ನಡೆಸಿದರು.

ಒಂದು ತಿಂಗಳು ಗತಿಸುತ್ತಾ ಬಂದರೂ ಈವರೆಗೂ ಸ್ನಾನದ ಸೋಪ್ ವಿತರಿಸಿಲ್ಲ. ನಿತ್ಯ ಬಳಕೆಗೆ ಪೂರೈಕೆಯಾಗುವ ನೀರಿನ ಟ್ಯಾಂಕ್ ಸ್ವಚ್ಛವಿಲ್ಲದ್ದರಿಂದಾಗಿ ನಲ್ಲಿಗಳಲ್ಲಿ ಗಲೀಜು ಮತ್ತು ದುರ್ವಾಸನೆಯಿಂದ ಕೂಡಿದ ನೀರು ಬರುತ್ತಿದೆ. ಬಳಕೆಗೆ ಯೋಗ್ಯವಾಗಿಲ್ಲ. ಕೆಲ ವಿದ್ಯಾರ್ಥಿಗಳಿಗೆ ಹಾಸಿಗೆ ಕೊಟ್ಟಿಲ್ಲ. ಶುದ್ಧ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಗ್ರಂಥಾಲಯವು ಕಾಟಾಚಾರಕ್ಕೆ ಎಂಬತ್ತಿದ್ದು, ವಿದ್ಯಾರ್ಥಿಗಳ ಓದಿಗೆ ಪೂರಕವಾಗುವ ಪುಸ್ತಕಗಳಿಲ್ಲ. ಹೀಗೆ ಅನೇಕ ಸಮಸ್ಯೆಗಳಿವೆ ಎಂದರು.

ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಮತ್ತು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಬರುವಂತೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪಟ್ಟು ಹಿಡಿದು ಕುಳಿತರು.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಮಾಜಕ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ ಗೀತಾ ಆಲೂರ, ಹಾಸ್ಟೆಲ್ ಮೇಲ್ವಿಚಾರಕ ನದಾಫ ಅವರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಇನ್ನು ಮುಂದೆ ಯಾವುದೇ ಸೌಕರ್ಯಗಳ ತೊಂದರೆಯಾಗದಂತೆ, ನೀರಿನ ಟ್ಯಾಂಕ್ ಕೂಡಲೇ ಸ್ವಚ್ಛ ಮಾಡಿಸುವಂತೆ, ಹಾಸಿಗೆ ಇಲ್ಲದವರಿಗೆ ಹಾಸಿಗೆ ವಿತರಿಸಲಾಗುವುದು‌. ಸ್ನಾನದ ಸೋಪ್ ಬೆಂಗಳೂರಿನಿಂದ ಸರಬರಾಜು ಆಗುವಲ್ಲಿಯೇ ವಿಳಂಬವಾಗಿದ್ದು, ಇದರಿಂದ ಸೋಪ್ ವಿತರಣೆ ವಿಳಂಬವಾಗಿದ್ದು, ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ತಾಲೂಕಿನಲ್ಲಿ ಹೆಚ್ಚುವರಿಯಾಗಿ ಯಾವುದಾದರೂ ಹಾಸ್ಟೆಲನಲ್ಲಿ ಸ್ನಾನದ ಸೋಪ್ ಇದ್ದರೆ ಅವುಗಳನ್ನು ಕೂಡಲೇ ತಂದು ವಿತರಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು‌.

ಲಿಖಿತವಾಗಿ ಬರೆದುಕೊಡುವಂತೆ ಎಸ್ಎಫ್ಐ ಮುಖಂಡ ವಿದ್ಯಾರ್ಥಿಗಳು ಒತ್ತಾಯಿಸಿದರು. ಮಂಗಳವಾರ ಮಧ್ಯಾಹ್ನನದೊಳಗೆ ಹಾಸ್ಟೆಲನ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ ಗೀತಾ ಆಲೂರ, ಹಾಸ್ಟೆಲ್ ಮೇಲ್ವಿಚಾರಕ ನದಾಫ ಅವರು ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಎಸ್‌ಎಫ್ಐ ರೋಣ ಮತ್ತು ಗಜೇಂದ್ರಗಡ ತಾಲೂಕು ಘಟಕ ಮುಖಂಡರು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು‌.