ಹಾಸ್ಟೆಲ್‌ಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರಲಿ: ಕೆ.ಎನ್. ರಾಜಣ್ಣ

| Published : Feb 02 2024, 01:00 AM IST

ಹಾಸ್ಟೆಲ್‌ಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರಲಿ: ಕೆ.ಎನ್. ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮಧುಗಿರಿ ಪಟ್ಟಣದ ಬಸವಣ್ಣನ ಗುಟ್ಟೆ ಪಕ್ಕದಲ್ಲಿರುವ ಸಾರ್ವಜನಿಕ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಕೆ.ಎನ್. ರಾಜಣ್ಣ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಮಧುಗಿರಿ

ತಾಲೂಕಿನ ಎಲ್ಲ ಹಾಸ್ಟೆಲ್‌ಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರಬೇಕು. ಮೂಲ ಸೌಲಭ್ಯದ ಕೊರತೆ ಇದ್ದರೆ ಏನೇನೂ ಬೇಕು ಎಂಬುದರ ಬಗ್ಗೆ ಪಟ್ಟಿ ಮಾಡಿ ಕೊಡಿ, ಸರ್ಕಾರದಿಂದ ಅನುದಾನ ಮುಂಜೂರು ಮಾಡಿಸುವುದಾಗಿ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಸಮಾಜ ಕಲ್ಯಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಬಸವಣ್ಣನ ಗುಟ್ಟೆ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಸಾರ್ವಜನಿಕ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ತಾಲೂಕಿನ ಯಾವ ಯಾವ ಹಾಸ್ಟೆಲ್‌ಗಳಲ್ಲಿ ಕಟ್ಟಡ, ಕೊಠಡಿ ದುರಸ್ತಿ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಪಟ್ಟಿ ಮಾಡಿ ಕೊಡಿ, ಮುಂಬರುವ ಶೈಕ್ಷಣಿಕ ವರ್ಷದೊಳಗೆ ಎಲ್ಲ ಹಾಸ್ಟೆಲ್‌ಗಳು ಸುಸಜ್ಜಿತವಾಗಿ ಮಾಡಲು ಅನುದಾನ ಬಿಡುಗಡೆ ಮಾಡಿಸುತ್ತೇನೆ. ಹಾಸ್ಟೆಲ್‌ಗಳಲ್ಲಿ ಸುತ್ತಮುತ್ತಲ ಪರಿಸರ ಶುಚಿತ್ವ ಕಾಪಾಡಬೇಕು. ಮಕ್ಕಳಿಗೆ ಸರ್ಕಾರದಿಂದ ಬರುವ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಎಲ್ಲ ಹಾಸ್ಟೆಲ್‌ಗಳಲ್ಲೂ ಮೆನು ಪ್ರಕಾರ ಊಟ, ತಿಂಡಿ ನೀಡಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಯಾವುದಾದರೂ ಹಾಸ್ಟೆಲ್‌ಗೆ ಭೇಟಿ ನೀಡುತ್ತೇನೆ. ಅಲ್ಲಿ ಸಮಸ್ಯೆಗಳು ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇನೆ ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ಸೂಚಿಸಿದರು.

ಹಾಸ್ಟೆಲ್‌ ಮುಂಭಾಗದಲ್ಲಿನ ರಾಯಗಾಲುವೆ ಚರಂಡಿಯಲ್ಲಿ ಕೊಳಕು ನೀರು ಕಟ್ಟಿಕೊಂಡು ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚುವ ಜೊತೆಗೆ ದುರ್ವಾಸನೆ ಬೀರುವುದನ್ನು ಕಣ್ಣಾರೆ ಕಂಡ ಸಚಿವರು, ಸ್ಥಳಕ್ಕೆ ಪುರಸಭೆ ಆರೋಗ್ಯ ನಿರೀಕ್ಷಕರನ್ನು ಕರೆಸಿ ತಕ್ಷಣ ಸ್ವಚ್ಛಗೊಳಿಸಿ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವಂತೆ ತಾಕೀತು ಮಾಡಿದರು.

ಹಾಸ್ಟೆಲ್‌ನಲ್ಲಿದ್ದ ಮಕ್ಕಳ ಎಲ್ಲ ರೂಮ್‌ಗಳನ್ನು ಪರಿಶೀಲಿಸಿದ ಸಚಿವರು, ಕಿಟಕಿಗಳಿಗೆ ಮೆಷ್‌ ಹಾಕಿ ಯಾವುದೇ ವಿಷ ಜಂತುಗಳು ಒಳಗೆ ಬಾರದಂತೆ ಕ್ರಮ ಕೈಗೊಳ್ಳಿ, ಉತ್ತಮ ಗಾಳಿ ಬೆಳಕು ಬರಲಿ ಮಕ್ಕಳು ಶ್ರದ್ಧಾ ಭಕ್ತಿಯಿಂದ ಓದುವ ವಾತವರಣ ನಿರ್ಮಿಸಿ ಕೊಠಡಿಗಳಿಗೆ ಸುಣ್ಣ ಬಣ್ಣ ಬಳಿಸಿ ಶುಚಿತ್ವ ಕಾಪಾಡುವಂತೆ ವಾರ್ಡನ್‌ ಚಿಕ್ಕರಂಗಯ್ಯಗೆ ಸೂಚಿಸಿದರು.

ಹಾಸ್ಟೆಲ್‌ನಲ್ಲಿ ಏನಾದರೂ ತೊಂದರೆ ಇದೆಯೇ ಎಂದು ವಿದ್ಯಾರ್ಥಿಗಳನ್ನು ಸಚಿವರು ಪ್ರಶ್ನಿಸಿದಾಗ ಮಕ್ಕಳು ಇಲ್ಲಿ ನಮಗೆ ಏನೂ ತೊಂದರೆ ಇಲ್ಲ , ಸರ್ಕಾರದ ಮೆನು ಪ್ರಕಾರವೇ ಊಟ ತಿಂಡಿ ನೀಡುತ್ತಿದ್ದಾರೆ ಎಂದು ಉತ್ತರಿಸಿದರು. ಈ ವೇಳೆ ವಿದ್ಯಾರ್ಥಿಯೊಬ್ಬನಿಗೆ ಕೈಯಲ್ಲಿ ಫಂಗಸ್‌ ಗುಳ್ಳೆಗಳಾಗಿದ್ದನ್ನು ಗಮನಿಸಿದ ಸಚಿವರು, ತಕ್ಷಣ ಸ್ಥಳಕ್ಕೆ ಟಿಎಚ್‌ಓ ಶ್ರೀನೀವಾಸ್‌ ಅವರನ್ನು ಕರೆಸಿ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮಾಡಿಸಿ ಅವರ ಎತ್ತರ, ತೂಕ ಅಳೆಯುವ ಜೊತೆಗೆ ಫಂಗಸ್‌ ಆಗಿರುವ ವಿದ್ಯಾರ್ಥಿಗೆ ತಕ್ಷಣ ಚರ್ಮರೋಗ ತಜ್ಞರ ಬಳಿ ಚಿಕಿತ್ಸೆ ಕೊಡಿಸಿ ಈಗಿನ ಮಕ್ಕಳೇ ಮುಂದಿನ ಪ್ರಜೆಗಳು ಅವರ ಆರೋಗ್ಯ ಕಾಪಾಡುವುದು ಎಲ್ಲರ ಕರ್ತವ್ಯ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಶಿವಣ್ಣ, ತಾಪಂ ಇಒ ಲಕ್ಷ್ಮಣ್‌, ಎಡಿಒ ಮಧುಸೂದನ್‌, ಪುರಸಭೆ ಮಾಜಿ ಅಧ್ಯಕ್ಷ ಎನ್‌. ಗಂಗಣ್ಣ, ಎಂ.ಕೆ. ನಂಜುಂಡಯ್ಯ, ಪಿಡಬ್ಲ್ಯುಡಿ ಇಇ ಸುರೇಶ್‌ರೆಡ್ಡಿ, ಎಇಇ ರಾಜ್‌ಗೋಪಾಲ್‌, ದಸಾಪ ಅಧ್ಯಕ್ಷ ಮಹಾರಾಜು ಸೇರಿದಂತೆ ಅನೇಕರಿದ್ದರು.