ಸಾರಾಂಶ
ಮುನಿರಾಬಾದ್: ಹೊಸ್ತಿಲ ಹುಣ್ಣಿಮೆ ನಿಮಿತ್ತ ಮಂಗಳವಾರ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ತುಂಗಭದ್ರಾ ದಂಡೆಯಲ್ಲಿರುವ ಶ್ರೀಹುಲಿಗೆಮ್ಮದೇವಿ ದರ್ಶನಕ್ಕೆ ಐದು ಲಕ್ಷ ಭಕ್ತರು ಆಗಮಿಸಿ ದರ್ಶನ ಪಡೆದರು.ಕೋವಿಡ್ ಆತಂಕದ ನಡುವೆಯೂ ಭಕ್ತರು ಪ್ರತಿ ಹುಣ್ಣಿಮೆಗಿಂತಲೂ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಹರಿದು ಬಂದಿದ್ದಾರೆ. ಹೀಗಾಗಿ, ಇಡೀ ಹುಲಿಗೆಮ್ಮ ದೇವಸ್ಥಾನ ಮತ್ತು ತುಂಗಭದ್ರಾ ನದಿ ಪಾತ್ರದಲ್ಲಿ ಭಕ್ತ ಸಾಗರವೇ ನೆರದಿತ್ತು. ಮಂಗಳವಾರ ಹಾಗೂ ಶುಕ್ರವಾರ ದೇವಿಯ ವಾರವಾಗಿದ್ದು 50-60 ಸಾವಿರ ಭಕ್ತರು ಆಗಮಿಸುತ್ತಾರೆ. ಆದರೆ ಮಂಗಳವಾರ ಹೊಸ್ತಿಲ ಹುಣ್ಣಿಮೆಯಾಗಿದ್ದರಿಂದ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಪ್ರತಿ ಹುಣ್ಣಿಮೆಗೆ 2 ಲಕ್ಷ ಭಕ್ತರು ಆಗಮಿಸುತ್ತಾರೆ. ಆದರೆ ಇಂದು ಈ ಸಂಖ್ಯೆ ಐದು ಲಕ್ಷ ದಾಟಿತ್ತೆಂದು ದೇವಾಲಯದ ಮೂಲಗಳು ತಿಳಿಸಿವೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲದೇ, ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮೀಳುನಾಡಿನಿಂದಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಸತತ ರಜೆ ಇರುವುದರಿಂದ ಹಾಗೂ ವರ್ಷಾಂತ್ಯವಾಗಿರುವುದರಿಂದಲೂ ಭಕ್ತರ ದಂಡು ಹರಿದು ಬಂದಿತ್ತು.ಅಯ್ಯಪ್ಪ ಸ್ವಾಮಿಗೆ ತೆರಳುವ ಭಕ್ತರು, ಹನುಮ ಭಕ್ತರು, ದತ್ತ ಭಕ್ತರು ಸಹ ದೇವಾಲಯಗಳಿಗೆ ಭೇಟಿ ನೀಡುವುದು ವಾಡಿಕೆ. ಅವರೂ ಸಹ ಹುಲಿಗೆಮ್ಮ ದೇಗುಲದತ್ತ ಧಾವಿಸಿದ್ದರಿಂದ ಭಾರೀ ಜನದಟ್ಟಣೆ ಉಂಟಾಗಿತ್ತು. ಖಾಸಗಿ ವಾಹನ, ಸ್ವಂತ ವಾಹನ, ದ್ವಿಚಕ್ರ ವಾಹನದಲ್ಲಿ ಜನರು ಆಗಮಿಸಿದ್ದರಲ್ಲದೇ, , ಹುಣ್ಣಿಮೆ ನಿಮಿತ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಕೊಪ್ಪಳ ಗಂಗಾವತಿ ಹಾಗೂ ಹೊಸಪೇಟೆಯಿಂದ ಹುಲಿಗೆ ಗ್ರಾಮಕ್ಕೆ ವಿಶೇಷ ಬಸ್ ಸೌಲಭ್ಯ ಏರ್ಪಡಿಸಿದ್ದರು.
ಮುಂಜಾನೆಯಿಂದಲೇ ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ಎಲ್ಲಿ ನೋಡಿದರೂ ವಾಹನ, ಜನರ ಸಾಲು ಕಂಡು ಬರುತ್ತಿತ್ತು. ಪೊಲೀಸರು, ದೇವಾಲಯದ ಆಡಳಿತ ವ್ಯವಸ್ಥೆ, ಸ್ವಯಂಸೇವಕರು ಜನರು, ವಾಹನ ನಿಯಂತ್ರಿಸಲು ಪರದಾಡಿದರು. 2-3 ಕಿಮೀ ಟ್ರಾಫಿಕ್ ಜಾಮ್ ಆಗುತ್ತಿತ್ತು. ಅದರಲ್ಲೂ ರೈಲ್ವೆ ಗೇಟ್ ಪದೇ ಪದೇ ಹಾಕುವುದರಿಂದ ಭಕ್ತರು ತೊಂದರೆ ಅನುಭವಿಸಿದರು.ಸೋಮವಾರ ರಾತ್ರಿಯಿಂದಲೇ ಜನರು ಬರಲಾರಂಭಿಸಿದ್ದು, ಚಳಿಯಲ್ಲೇ ತುಂಗಭದ್ರಾ ತಟದಲ್ಲಿ ವಸತಿ ಮಾಡಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಗೆ ಶ್ರೀಹುಲಿಗೆಮ್ಮದೇವಿಯ ದರ್ಶನ ಪಡೆಯಲು ಭಕ್ತರು ಮುಂದಾದರು. ಬೆಳಗ್ಗೆ ಎಂಟು ಗಂಟೆ ಸುಮಾರಿಗೆ 75,000 ಜನ ಭಕ್ತಾದಿಗಳು ದೇವಿ ದರ್ಶನ ಪಡೆದರು, 12 ಗಂಟೆಗೆ 2 ಲಕ್ಷ ದಾಟಿತ್ತು. ಮಧ್ಯಾಹ್ನ 2 ಗಂಟೆಗೆ ಮೂರು ಲಕ್ಷ ಜನ ಭಕ್ತಾದಿಗಳು ಹಾಗೂ ಸಂಜೆ 5 ಗಂಟೆಗೆ 5 ಲಕ್ಷ ಜನರು ಅಮ್ಮನವರ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತ್ತುಗೊಂಡಿ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))