ಸಾರಾಂಶ
ಮೂರು ತಿಂಗಳ ಹಿಂದೆ ದಾಖಲಾಗಿದ್ದ ಈ ಪ್ರಕರಣದ ಬಗ್ಗೆ ಅಂದೇ ತನಿಖೆ ನಡೆಸಬಹುದಿತ್ತು. ಅದನ್ನು ಬಿಟ್ಟು ವೈಯುಕ್ತಿಕ ದ್ವೇಷಕ್ಕಾಗಿ ಈಗ ಯಡಿಯೂರಪ್ಪನವರನ್ನು ಬಂಧಿಸಲು ಸರ್ಕಾರ ಮುಂದಾಗಿರುವುದು ಹೇಡಿತನ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಸರ್ಕಾರ ಹಗೆತನದ ಮತ್ತು ಹೇಡಿತನದ ರಾಜಕಾರಣ ಆರಂಭಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆಕ್ರೋಶ ವ್ಯಕ್ತಪಡಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಮಾ.4ರಂದು ಯಡಿಯೂರಪ್ಪನವರ ಮೇಲೆ ಪೊಕ್ಸೋ ಪ್ರಕರಣ ದಾಖಲಾಗಿತ್ತು. ಅಂದೇ ಗೃಹ ಸಚಿವ ಡಾ.ಪರಮೇಶ್ವರ್ ದೂರುದಾರೆ ಮಾನಸಿಕ ಅಸ್ವಸ್ಥೆಯಾಗಿದ್ದಳು, ಈಕೆ ಐಎಎಸ್, ಐಪಿಎಸ್ ಅಧಿಕಾರಿಗಳ ಮೇಲೂ ಕೇಸು ದಾಖಲಿಸಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಸಂತ್ರಸ್ತೆಯ ಪರವಾಗಿ ದೂರು ನೀಡಿದ್ದ ಮಹಿಳೆ ಈಗಾಗಲೇ ತೀರಿಕೊಂಡಿದ್ದಾರೆ. ಆದರೂ ಯಡಿಯೂರಪ್ಪನವರನ್ನು ಮಣಿಸುವ ಸಲುವಾಗಿ ಸಂಬಂಧಗಳನ್ನು ಮುಂದಿಟ್ಟು ಬಂಧಿಸುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದರು.
ಲೋಕಸಭೆ ಚುನಾವಣೆಯಲ್ಲಿ ಡಬಲ್ ಡಿಜಿಟ್ ತಲುಪಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರಕ್ಕೆ ನಡೆದ ಭ್ರಷ್ಟಾಚಾರದಿಂದ ಸಚಿವರ ತಲೆದಂಡ ವಾಗಿದೆ. ಪೇಸಿಎಂ ಅಭಿಯಾನ ನಡೆಸಿದ್ದರಿಂದ ಬಿಜೆಪಿ ನೀಡಿದ ದೂರಿಗೆ ರಾಹುಲ್‌ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನ್ಯಾಯಾಲಯಕ್ಕೆ ಹೋಗಿ ಬಂದಿದ್ದಾರೆ. ಈ ಸೇಡು ತೀರಿಸಿಕೊಳ್ಳಲು ಸರ್ಕಾರ ಈಗ ಮುಂದಾಗಿದೆ ಎಂದರು.ಪೋಕ್ಸ್ ಪ್ರಕರಣ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಚುನಾವಣೆ ಸಂದರ್ಭದಲ್ಲಿ ಬಂಧಿಸಿದರೆ ಮತಗಳು ಬರುವುದಿಲ್ಲ ಎಂಬ ಮುಂದಾಲೋಚನೆಯಲ್ಲಿ ಸುಮ್ಮನಿದ್ದು, ಈಗ ಬಂಧಿಸಲು ವಾರೆಂಟ್ ತರಲಾಗಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ದತ್ತಾತ್ರಿ, ಹರಿಕೃಷ್ಣ, ಸಿ.ಎಚ್. ಮಾಲತೇಶ್, ಶಿವರಾಜ್, ವಿನ್ಸೆಂಟ್ ರೋಡ್ರಿಗಸ್, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಇದ್ದರು.