ಹಾವೇರಿ ಜಿಲ್ಲೆಯಲ್ಲಿ ಬರಗಾಲ, ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಬಿಸಿಯೂಟ

| Published : Apr 09 2024, 12:46 AM IST

ಹಾವೇರಿ ಜಿಲ್ಲೆಯಲ್ಲಿ ಬರಗಾಲ, ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಬಿಸಿಯೂಟ
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಏ.೧೧ರಿಂದ ಮೇ ೨೮ರ ವರೆಗೆ ೪೧ ದಿನಗಳ ಕಾಲ ಮಧ್ಯಾಹ್ನ ಬಿಸಿಯೂಟವನ್ನು ಪೂರೈಸಲಾಗುವುದು. ಶಾಲಾ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.

ಹಾವೇರಿ: ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಏ.೧೧ರಿಂದ ಮೇ ೨೮ರ ವರೆಗೆ ೪೧ ದಿನಗಳ ಕಾಲ ಮಧ್ಯಾಹ್ನ ಬಿಸಿಯೂಟವನ್ನು ಪೂರೈಸಲಾಗುವುದು. ಶಾಲಾ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಿಸಲಾದ ಪ್ರಯುಕ್ತ ಜಿಲ್ಲೆಯ ೯೧೦ ಶಾಲೆಗಳ ೧ರಿಂದ ೧೦ನೇ ತರಗತಿಯ ೯೮,೫೬೧ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸ್ವೀಕರಿಸಲು ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಕ್ಕಳಿಗೆ ಬಿಸಿಯೂಟ ವಿತರಣೆಯ ಮೇಲುಸ್ತುವಾರಿಗಾಗಿ ೯೧೦ ಮುಖ್ಯೋಪಾಧ್ಯಾಯರನ್ನು ಹಾಗೂ ೩೫ ಹಿರಿಯ ಶಿಕ್ಷಕರನ್ನು ಉಸ್ತುವಾರಿಗೆ ನೇಮಕ ಮಾಡಲಾಗಿದೆ. ಪ್ರತಿ ೧.೫ ಕಿ.ಮೀ. ವ್ಯಾಪ್ತಿಯೊಳಗೆ ಬರುವ ಶಾಲೆಗಳನ್ನು ಸಂಯೋಜಿಸಿ ೯೧೦ ಕೇಂದ್ರಗಳನ್ನಾಗಿ ರಚಿಸಿ ಮಕ್ಕಳಿಗೆ ವ್ಯವಸ್ಥಿತವಾಗಿ ಬಿಸಿಯೂಟ ವಿತರಣೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.ಎಲ್ಲಾ ಶಾಲೆಗಳಿಗೆ ಸಮರ್ಪಕವಾಗಿ ಆಹಾರಧಾನ್ಯಗಳನ್ನು ವಿತರಿಸಲಾಗಿದೆ. ಕುಡಿಯುವ ನೀರು, ಸ್ವಚ್ಛತೆ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಗಮನನೀಡಲು ಸೂಚನೆ ನೀಡಲಾಗಿದೆ. ಶಾಲಾ ಹಂತದಲ್ಲಿ ಮುಖ್ಯೋಪಾಧ್ಯಾಯರಿಗೆ, ತಾಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಪಿ, ಬಿಆರ್‌ಪಿಗಳು, ಶಿಕ್ಷಣ ಸಂಯೋಜಕರು ಹಾಗೂ ಸಹಾಯಕ ನಿರ್ದೇಶಕರಿಗೆ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರಿಗೆ ಹಾಗೂ ಡಯಟ್ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಿ, ವ್ಯವಸ್ಥಿತವಾಗಿ ಬಿಸಿಯೂಟ ವಿತರಣೆಗೆ ಸಿದ್ಧತೆಕೈಗೊಳ್ಳುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಾಲೂಕಾವಾರು ವಿವರ: ಬ್ಯಾಡಗಿ ತಾಲೂಕಿನಲ್ಲಿ ೭೭ ಕೇಂದ್ರಗಳಲ್ಲಿ ೮,೨೯೨ ಮಕ್ಕಳು, ಹಾನಗಲ್ ತಾಲೂಕಿನಲ್ಲಿ ೧೮೦ ಕೇಂದ್ರಗಳಲ್ಲಿ ೧೮,೫೩೨ ಮಕ್ಕಳು, ಹಾವೇರಿ ತಾಲೂಕಿನಲ್ಲಿ ೧೪೯ ಕೇಂದ್ರಗಳಲ್ಲಿ ೧೫,೪೦೪ ಮಕ್ಕಳು, ಹಿರೇಕೆರೂರು ತಾಲೂಕಿನಲ್ಲಿ ೧೪೮ ಕೇಂದ್ರಗಳಲ್ಲಿ ೧೩,೨೬೨ ಮಕ್ಕಳು, ರಾಣಿಬೆನ್ನೂರು ತಾಲೂಕಿನಲ್ಲಿ ೧೫೮ ಕೇಂದ್ರಗಳಲ್ಲಿ ೧೪,೨೮೦ ಮಕ್ಕಳು, ಸವಣೂರ ತಾಲೂಕಿನಲ್ಲಿ ೭೭ ಕೇಂದ್ರಗಳಲ್ಲಿ ೧೫,೦೫೭ ಮಕ್ಕಳು ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ೧೨೧ ಕೇಂದ್ರಗಳಲ್ಲಿ ೧೩,೭೩೪ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸ್ವೀಕರಿಸಲು ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡುವಂತೆ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.