ಬಿಸಿ ಗಾಳಿ, ಶೆಕೆಗೆ ಜನ, ಜಾನುವಾರು ತತ್ತರ

| Published : Mar 17 2025, 12:30 AM IST

ಸಾರಾಂಶ

ಫೆಬ್ರವರಿ ಮುಗಿದು ಮಾರ್ಚ್ ಇನ್ನು ಎರಡನೇ ವಾರದಲ್ಲೇ ತರೀಕೆರೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ, ಬೇಸಿಗೆಯ ಧಗೆ ಹೆಚ್ಚಾಗುತ್ತಲೇ ಇದೆ. ಬೆಳಿಗ್ಗೆ 7 ಗಂಟೆಗೆ ಬಿಸಿಲು ಶುರುವಾಗಿ, ನೆತ್ತಿಯ ಮೇಲೆ ಸೂರ್ಯ ಬರುವ ಹೊತ್ತು ಮಧ್ಯಾಹ್ನದ ವೇಳೆಗೆ ಬೆಂಕಿಯಂತೆ ಬಿಸಿಲು ಸುಡಲಾರಂಭಿಸುತ್ತದೆ.

ಅನಂತ ನಾಡಿಗ್

ಕನ್ನಡಪ್ರಭ ವಾರ್ತೆ ತರೀಕೆರೆ

ಫೆಬ್ರವರಿ ಮುಗಿದು ಮಾರ್ಚ್ ಇನ್ನು ಎರಡನೇ ವಾರದಲ್ಲೇ ತರೀಕೆರೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ, ಬೇಸಿಗೆಯ ಧಗೆ ಹೆಚ್ಚಾಗುತ್ತಲೇ ಇದೆ. ಬೆಳಿಗ್ಗೆ 7 ಗಂಟೆಗೆ ಬಿಸಿಲು ಶುರುವಾಗಿ, ನೆತ್ತಿಯ ಮೇಲೆ ಸೂರ್ಯ ಬರುವ ಹೊತ್ತು ಮಧ್ಯಾಹ್ನದ ವೇಳೆಗೆ ಬೆಂಕಿಯಂತೆ ಬಿಸಿಲು ಸುಡಲಾರಂಭಿಸುತ್ತದೆ.

ಪಟ್ಟಣದ ಸಿಮೆಂಟ್, ಟಾರ್ ಹಾಗೂ ಮಣ್ಣಿನ ರಸ್ತೆಗಳು, ಹಂಚಿನ ಮನೆ, ಆರ್.ಸಿ.ಸಿ. ಕಟ್ಟಡಗಳು ಬಿಸಿಲಿನಿಂದ ಕಾದ ಕಬ್ಬಿಣವಾಗುತ್ತಿವೆ. ಹೆಚ್ಚುತ್ತಿರುವ ಬಿಸಿಲಿನಿಂದಾಗಿ ಗಾಳಿಯೂ ಬಿಸಿಯಾಗಿಯೇ ಇರುತ್ತದೆ.

ಬಿಸಿಲಿನ ತಾಪ ತಡೆಯಲು ಕೊಡೆ ಉಪಯೋಗಿಸಿದರೂ ಕೊಡೆಗೂ ಜಗ್ಗದಂತೆ ರಣ ಬಿಸಿಲಿನ ತಾಪ ತಟ್ಟದೇ ಇರುವುದಿಲ್ಲ. ಮನೆ, ಹೋಟೆಲ್ ಅಂಗಡಿ ಕಚೇರಿ ಸೇರಿದಂತೆ ಎಲ್ಲೆಡೆ ದಿನಪೂರ್ತಿ ಫ್ಯಾನ್ ತಿರುಗುತ್ತಿದ್ದರೂ, ಪ್ರಯೋಜನವಿಲ್ಲದಂತಾಗಿದೆ.

ಬೆಳಿಗ್ಗೆ 8 ಗಂಟೆ ನಂತರ ರಸ್ತೆಯಲ್ಲಿ ಸಂಚರಿಸುವ ಹಾಗಿಲ್ಲ. ರಸ್ತೆಯುದ್ದಕ್ಕೂ ಬಿಸಿಲಿ ಝಳವನ್ನು ಸಹಿಸಿಕೊಂಡೆ ಓಡಾಡುವಾಗ ಮಾ ರ್ಗ ಮದ್ಯೆ ಎಲ್ಲಾದರೂ ಮರದ ನೆರಳು ಕಂಡರೆ ಮರದ ನೆರಳು ಮುಗಿಯುವ ತನಕ ನಿಧಾನಕ್ಕೆ ಹೆಜ್ಜೆ ಹಾಕುತ್ತಾ ಈ ನೆರಳು ಮುಗಿಯದಿರಲಿ ಎನಿಸುವಷ್ಟು ಬಿಸಿಲು ಅಸಹನೀಯವಾಗಿದೆ.

ಬಿಸಿಲಿನಲ್ಲಿ ಹೊರ ಹೋಗುವುದನ್ನು ತಪ್ಪಿಸಿಹೆಚ್ಚಿದ ಬಿಸಿಲಿನಿಂದಾಗಿ ಜನ ಮತ್ತು ವಾಹನ ಸಂಚಾರಗಳ ಮೇಲೆ ಬಾರೀ ಪರಿಣಾಮ ಬೀರಿದೆ. ಬೆಳಿಗ್ಗೆ 11 ಗಂಟೆಯಿಂದಲೇ ಜನ ಮತ್ತು ವಾಹನ ಸಂಚಾರ ಕಡಿಮೆಯಾಗುತ್ತದೆ. ರಸ್ತೆಗಳೆಲ್ಲಾ ಜನಸಂಚರವಿಲ್ಲದೆ ಬಿಕೋ ಎನಿಸುತ್ತದೆ. ಜನ ಬೇಸಿಗೆ ಈ ತಾಪದಿಂದ ದಣಿದು ತಂಪಾದ ಪಾನಿಯಗಳ ಮೊರೆ ಹೋಗುವುದು ಹೆಚ್ಚುತ್ತಿದೆ. ತಂಪಿಗಾಗಿ ನೀರು, ಎಳನೀರು, ದ್ರಾಕ್ಷಿ, ಕಿತ್ತಲೆ ಹಣ್ಣು ಮೋಸಂಬಿ, ಬಾಳೆಹಣ್ಣು, ಕರಬೂಜ, ಕಲ್ಲಂಗಡಿ, ಅನಾನಸ್‌ ಶರಬತ್ತು, ಕಬ್ಬಿನ ಹಾಲು, ರಾಗಿ ಅಂಬಲಿ, ತಿಳಿ ಮಜ್ಜಿಗೆಗೆ ಮೊರೆ ಹೋಗುತ್ತಿದ್ದಾರೆ. ಸದಾ ಜನ ಮತ್ತು ವಾಹನ ಸಂಚಾರದಿಂದ ತುಂಬಿರುತ್ತಿದ್ದ ಪಟ್ಟಣದ ಪ್ರಮುಖ ರಸ್ತೆಗಳು ದಿನವಿಡೀ ಬಿರು ಬಿಸಿಲಿನಿಂದ ಖಾಲಿ ಖಾಲಿ ಯಾಗಿ ಕಾಣುತ್ತಿವೆ.

ಸಾರ್ವಜನಿಕ ಆಸ್ಪತ್ರೆ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜೆ.ಚಂದ್ರಶೇಖರ್‌ ಮಾತನಾಡಿ, ಬಿಸಿಲಿನಲ್ಲಿ ಹೊರಗಡೆ ಹೋಗುವುದು ಅನಿವಾರ್ಯವಾದರೆ ಟೋಪಿ, ಕೊಡೆಯಂತಹ ರಕ್ಷಣೆ ಪಡೆಯುವುದು, ಅದಷ್ಟು ಹಣ್ಣು ಹಂಪಲು ಸೇವನೆ ಮಾಡಬೇಕು. ಬಿಸಿಲಿನ ಸಂಚಾರ ತಡಗಟ್ಟಲು ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಬಿಸಿಲಿನಲ್ಲಿ ಹೊರ ಹೋಗುವುದನ್ನು ತಪ್ಪಿಸಿ. ಮಧ್ಯಾಹ್ನದ ಅವಧಿಯಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆ ಕೈಗೊಳ್ಳಬಾರದು. ಹೆಚ್ಚು ಸಕ್ಕರೆ ಅಂಶಗಳಿರುವ ಪಾನೀಯಗಳಿಂದ ದೂರವಿರಬೇಕು.

ದಿನನಿತ್ಯದ ಚಟುವಟಿಕೆಗಳನ್ನು ಅದಷ್ಟು ಬೆಳಿಗ್ಗೆ ಅಥವಾ ಸಂಜೆಗೆ ಸೀಮೀತಗೊಳಿಸಬೇಕು. ನವಜಾತ ಶಿಶುಗಳು, ಮಕ್ಕಳು ಗರ್ಭಿಣಿಯರು ಮಾನಸಿಕ ಆನಾರೋಗ್ಯ ಸಮಸ್ಸೆ ಇರುವವರು, ಹೃದೃೋಗ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಎಷ್ಟು ಬೇಗ ಮೋಡ ಕವಿದು ಮಳೆ ಬಂದು ಇಳೆ ತಂಪಾಗಿ ಒಟ್ಟಾರೆ ವಾತಾವರಣ ತಣ್ಣಗಾಗುವುದೋ ಎಂದು ಜನರು ಎದರುನೋಡುವಂತಾಗಿದೆ. ಅದಷ್ಟು ಬೇಗ ಮಳೆ ಬರಲಿ, ವಾತಾವರಣ ತಂಪಾಗಲಿ ಎಂದರು.ಕಳೆದ ವರ್ಷಕ್ಕಿಂತ ಹೆಚ್ಚಿನ ಬಿಸಿಲಿನ ತಾಪ: ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ ಕಳೆದ ವರ್ಷಕ್ಕಿಂತ ತಾಪಮಾನ ಹೆಚ್ಚಿದೆ ಎಂದು ಖಚಿತವಾಗಿ ಹೇಳಲಾಗದಿದ್ದರೂ ಇತ್ತೀಚಿನ ವರದಿಗಳು ಈ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಅಂದರೆ ಬಿಸಿಲಿನ ತಾಪ 1.5 ಡಿಗ್ರಿ ಹೆಚ್ಚಾಗಿದೆ. ಹೋದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 1.5 ಡಿಗ್ರಿಯಷ್ಟು ಬಿಸಿಲಿನ ತಾಪ ಹೆಚ್ಚಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು ಮಾಹಿತಿ ನೀಡಿದ್ದಾರೆ.ಹೆಚ್ಚು ನೀರು, ಲಘು ಆಹಾರ ಸೇವಿಸಿ: ವೃದ್ದರು, ಮಕ್ಕಳು, ಬಸಿರಿ, ಬಾಣಂತಿಯರು ಕೆಲಸ ಕಾರ್ಯಗಳನ್ನು ಬಿಸಿಲೇರುವ ಮುನ್ನ, ಬೆಳಿಗ್ಗೆ ಬಹಳ ಬೇಗ ಮುಗಿಸಿಕೊಳ್ಳಬೇಕು. ಜನರು ಲಘು ಆಹಾರಗಳನ್ನು ಸೇವಿಸಬೇಕು. ಹೆಚ್ಚು ನೀರು ಕುಡಿಯುವುದು, ಒಆರ್.ಎಸ್., ನಿಂಬೆ ಜ್ಯೂಸ್, ಮಜ್ಜಿಗೆಯಂತಹ ಪಾನೀಯ ಹಾಗೂ ಹೆಚ್ಚು ನೀರಿನ ಅಂಶವಿರುವ ಹಣ್ಣು ತರಕಾರಿಗಳನ್ನು ಸೇವಿಸಬೇಕು. ಹಗುರ ಮತ್ತು ಸಡಿಲವಾದ ಹತ್ತಿ ಬಟ್ಟೆ ಧರಿಸಿದರೆ ಹೆಚ್ಚು ಒಳ್ಳೆಯದು ಎಂದು ಸಾರ್ವಜನಿಕ ಆಸ್ಪತ್ರೆ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜೆ.ಚಂದ್ರಶೇಖರ್‌ ತಿಳಿಸಿದ್ದಾರೆ.