ಗ್ಯಾಸ್‌ ಸಿಲಿಂಡರ್‌ ಅಭಾವದಿಂದ ಹಾನಗಲ್ಲ ತಾಲೂಕಿನಲ್ಲಿ ಕೆಲವು ಹೋಟೆಲ್‌ಗಳಲ್ಲಿ ಕಟ್ಟಿಗೆ ಒಲೆ ಬಳಸಲು ಚಿಂತನೆ ನಡೆಸಲಾಗುತ್ತಿದೆ. ಕೆಲವು ಹೋಟೆಲ್ ಮಾಲೀಕರು ದೋಸೆ, ಪುರಿ ಬಂದ್‌ ಮಾಡಿ, ಅನ್ನ ಸಾಂಬಾರ್‌ ಮಾತ್ರ ನೀಡುತ್ತಿದ್ದಾರೆ.

ಹಾನಗಲ್ಲ: ಗ್ಯಾಸ್ ಅನಿಶ್ಚಿತತೆಯಿಂದಾಗಿ ಹೊಟೆಲ್ ಉದ್ಯಮಕ್ಕೆ ಸಂಕಷ್ಟದ ಆತಂಕ ಸೃಷ್ಟಿಯಾಗಿದ್ದು, ಹೊಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಸಭೆ ನಡೆಸಿ, ಪರ್ಯಾಯಕ್ಕೆ ಚಿಂತನೆ ನಡೆಸಿದ್ದಾರೆ.

ಕೆಲವರು ಕಟ್ಟಿಗೆ ಒಲೆ ಬಳಸುವ ಕುರಿತು ಚಿಂತನೆ ನಡೆಸಿದ್ದರೂ ಅದು ಫಲಪ್ರದವಾಗುವ ಸಾಧ್ಯತೆ ಕಡಿಮೆ. ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿದರೆ ಮತ್ತೆ ಸಿಗುವುದು ಕಷ್ಟ. ಹೀಗೆ ಹಲವು ಬಗೆಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಹಾನಗಲ್ಲ ತಾಲೂಕಿನಲ್ಲಿ 50ಕ್ಕೂ ಅಧಿಕ ಹೋಟೆಲ್‌, 50ಕ್ಕೂ ಅಧಿಕ ದಾಬಾಗಳಿವೆ. ಪ್ರತಿ ಹೋಟೆಲ್‌ಗೆ ದಿನಕ್ಕೆ ಕನಿಷ್ಠ 1 ಅಥವಾ 2 ಸಿಲಿಂಡರ್‌ ಬೇಕು. ಮಾ. 5ರಿಂದ ಸಿಲಿಂಡರ್‌ ವಿತರಣೆ ಸ್ಥಗಿತವಾಗಿದೆ. ಕೆಲವರು 5 ಕೆಜಿ ಸಿಲಿಂಡರ್‌ ಬಳಸುತ್ತಿದ್ದಾರೆ. ಕೆಲವರು ಹೋಟೆಲ್‌ ಅವಧಿ ಕಡಿಮೆ ಮಾಡಿದ್ದರೆ, ಇನ್ನೂ ಕೆಲವರು ತಾತ್ಕಾಲಿಕವಾಗಿ ಮುಚ್ಚುವ ಚಿಂತನೆಯಲ್ಲಿದ್ದಾರೆ. ಕೆಲವರು ದೋಸೆ, ಪುರಿ, ಬಜಿ ಬಂದ್‌ ಮಾಡಿ ಅನ್ನ, ಸಾಂಬಾರ ಮಾತ್ರ ಕೊಡುತ್ತಿದ್ದಾರೆ.

ಕಟ್ಟಿಗೆ ಒಲೆ ಬಳಸಲು ಎಲ್ಲ ಹೋಟೆಲ್‌ಗಳಲ್ಲಿ ಸಾಧ್ಯವಾಗುವುದಿಲ್ಲ. ಕಟ್ಟಿಗೆ ಲಭ್ಯತೆ, ಸಂಗ್ರಹವೂ ಕಷ್ಟ. ಅಡುಗೆ ಸಿಬ್ಬಂದಿ ಕಟ್ಟಿಗೆ ಒಲೆ ಬಳಸಲು ಹಿಂದೇಟು ಹಾಕುತ್ತಾರೆ. ಇನ್ನು ಬಾಯ್ಲರ್‌ ನಿರ್ಮಿಸಿಕೊಳ್ಳಲು ಕಾಲವಕಾಶ ಬೇಕು, ಅಲ್ಲದೆ ಹೆಚ್ಚಿನ ಹಣ ತೊಡಗಿಸಬೇಕಾಗುತ್ತದೆ. ಹೋಟೆಲ್ ಬಂದ ಮಾಡಿದರೆ ಕಾರ್ಮಿಕರು ಅತಂತ್ರರಾಗುತ್ತಾರೆ. ತರಕಾರಿ, ಕಿರಾಣಿ, ಹಾಲು ಮಾರುವವರು ಕೂಡ ಆತಂಕಕ್ಕೆ ಸಿಲುಕುತ್ತಾರೆ.

ಇನ್ನೊಂದೆಡೆ ಗ್ಯಾಸ್ ಅಭಾವ ಎಂಬ ಸುದ್ದಿ ಕೇಳಿ, ಹೆಚ್ಚಿನ ಗ್ರಾಹಕರು ಗ್ಯಾಸ್ ಏಜೆನ್ಸಿ ಕಚೇರಿಗೆ ಲಗ್ಗೆ ಇಡುತ್ತಿದ್ದಾರೆ. ಗ್ಯಾಸ್ ವಿತರಕರು ಮನೆ ಬಳಕೆಯ ಸಿಲಿಂಡರ್‌ಗಳ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರೂ ಗ್ರಾಹಕರು ನಂಬುತ್ತಿಲ್ಲ.

ಹಾನಗಲ್ಲ ತಾಲೂಕಿನಲ್ಲಿ ಗೃಹ ಬಳಕೆಗೆ ತಿಂಗಳಿಗೆ 41 ಸಾವಿರ ಸಿಲಿಂಡರ್‌ ಬೇಕು. 65 ಸಾವಿರ ಗ್ರಾಹಕರಿದ್ದಾರೆ. ಶಾಲೆಗಳು, ವಸತಿ ನಿಯಲಯಗಳಿಗೆ ಆದ್ಯತೆಯ ಮೇಲೆ ಸಿಲಿಂಡರ್ ವಿತರಿಸಲಾಗುತ್ತಿದೆ. ವಾಣಿಜ್ಯ ಬಳಕೆಗೆ ತಿಂಗಳಿಗೆ 850 ವಾಣಿಜ್ಯ ಸಿಲಿಂಡರ್‌ಗಳು ಬೇಕು. ಆದರೆ ಈಗ ಯುದ್ಧದ ಪರಿಣಾಮವಾಗಿ ವಾಣಿಜ್ಯ ಸಿಲಿಂಡರ್ ಕೊರತೆ ಇದೆ ಎಂಬ ಮಾಹಿತಿ ದೊರೆತಿದೆ.

ಕೊರತೆ ಇಲ್ಲ: ಗೃಹ ಬಳಕೆ ಸಿಲಿಂಡರ್‌ಗಳ ಕೊರತೆ ಇಲ್ಲ. ವಿತರಣೆಯಲ್ಲಿಯೂ ವ್ಯತ್ಯಯವಾಗಿಲ್ಲ. ದುರ್ಬಳಕೆಗೂ ಅವಕಾಶವಾಗಿಲ್ಲ. ಇನ್ನೂ 35ರಿಂದ 40 ದಿನಕ್ಕೆ ಆಗುವಷ್ಟು ಗೃಹ ಬಳಕೆ ಸಿಲಿಂಡರ್ ದಾಸ್ತಾನು ಇದೆ. ಆದರೆ ಗ್ರಾಹಕರು ಆತಂಕದಿಂದ ಕಚೇರಿಗೆ ಬಂದು ಮಾಹಿತಿ ಪಡೆಯುತ್ತಿದ್ದು, ವಾಸ್ತವ ತಿಳಿಸಿ ಹೇಳುತ್ತಿದ್ದೇವೆ ಎಂದು ಎಚ್‌ಪಿ ಗ್ಯಾಸ್ ಸಿಲಿಂಡರ್ ವಿತರಕ ಎಚ್.ಎಚ್. ರವಿಕುಮಾರ ಹೇಳುತ್ತಾರೆ.ಸಹಾಯಕ್ಕೆ ಬರಲಿ: ವಾಣಿಜ್ಯ ಉಪಯೋಗದ ಸಿಲಿಂಡರ್ ಕೊರತೆ ಹೊಟೆಲ್ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೇವಲ ಹೋಟೆಲ್ ಮಾಲೀಕರಿಗೆ ಮಾತ್ರವಲ್ಲ, ಕಾರ್ಮಿಕರು, ಆಹಾರ ಸಾಮಗ್ರಿ ವಿತರಕರಿಗೂ ಇದರಿಂದ ನಷ್ಟವಾಗುತ್ತಿದೆ. ಸರ್ಕಾರ ಇಂತಹ ಸಂದರ್ಭದಲ್ಲಿ ಹೊಟೆಲ್ ಉದ್ಯಮದ ಸಹಾಯಕ್ಕೆ ನಿಲ್ಲಬೇಕು ಎಂದು ಹೋಟೆಲ್ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಆದರ್ಶ ಶೆಟ್ಟಿ ಹೇಳುತ್ತಾರೆ.