ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಕ್ಕಳ ವಿದ್ಯಾಭ್ಯಾಸ ಹಾಗೂ ಹೊಟ್ಟೆಪಾಡಿಗಾಗಿ ಒಂದು ಶೆಡ್ ಹಾಕಿಕೊಂಡು ಹೋಟೆಲ್ ನಡೆಸುತ್ತಿರುವ ನಮಗೆ ಆರ್‌ಟಿಐ ಕಾರ್ಯಕರ್ತ ಅಪ್ಪಾಜಿ ಕಿರುಕುಳ ನೀಡುತ್ತಿದ್ದಾರೆ ಎಂದು ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ನಿವಾಸಿ ತಾಂಡಶೆಟ್ಟಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಪಿ.ಜಿ ಪಾಳ್ಯ ಗ್ರಾಮದಲ್ಲಿ ಮಾಧ್ಯಮದ ಜತೆ ಮಾತನಾಡಿ, ಪಿಜಿ ಪಾಳ್ಯ ಗ್ರಾಪಂ ವ್ಯಾಪ್ತಿಯ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ನಿವಾಸಿಯಾದ ನಾನು ಈ ಹಿಂದೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೆ. ಆದರೆ ವಿದ್ಯುತ್ ಶಾಕ್‌ನಿಂದ ಗಾಯಗೊಂಡ ನಂತರ ಅತಿ ಭಾರದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, 4 ಹೆಣ್ಣು ಮಕ್ಕಳು, 1 ಗಂಡು ಮಗು ಇರುವುದರಿಂದ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಶೆಡ್ ಹಾಕಿಕೊಂಡು ಕಾಫಿ, ತಿಂಡಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮಾಡಿ ಜೀವನ ನಡೆಸುತ್ತಿದ್ದೇವೆ. ಆದರೆ ಆರ್‌ಟಿಐ ಕಾರ್ಯಕರ್ತ ಅಪ್ಪಾಜಿ ನೀನು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಬೇಕಾದರೆ ಇಂತಿಷ್ಟು ಹಣ ಕೊಡಬೇಕು ಇಲ್ಲದಿದ್ದರೆ ನಿನ್ನ ವಿರುದ್ಧ ಅರಣ್ಯ ಇಲಾಖೆ ಪೊಲೀಸರಿಗೆ ದೂರು ನೀಡಿ ತೆರವು ಮಾಡಿಸುತ್ತೇನೆ ಎಂದು ಕಿರುಕುಳ ನೀಡುತ್ತಿದ್ದಾರೆ. ಇದಲ್ಲದೆ ಬೇರೆಯವರ ಬಳಿ ಇಂತಿಷ್ಟು ಹಣ ಕೊಟ್ಟುಬಿಡಿ ಸುಮ್ಮನ್ನು ಎದುರು ಹಾಕಿಕೊಳ್ಳಬೇಡಿ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಇದರಿಂದ ನಮಗೆ ಜೀವನವೇ ಸಾಕಾಗಿ ಹೋಗಿದೆ. ಮುಂದೆ ಇದೇ ರೀತಿ ತೊಂದರೆ ನೀಡಿದರೆ ಕುಟುಂಬ ಸಮೇತ ವಿಷ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಸ್ಥಿತಿಯನ್ನು ಕಂಡು ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ಒಡೆಯರ ಪಾಳ್ಯ ಗ್ರಾಮದಲ್ಲಿ ಸಾಲ ಕೊಡಿಸಿ ಸಾಮಗ್ರಿಗಳನ್ನು ಕೊಡಿಸಿದ್ದಾರೆ. ಮಾಧ್ಯಮದವರು ಸಹ ನಮಗೆ ಸಹಾಯ ಮಾಡಿದ್ದಾರೆ. ಆದರೆ ಆರ್‌ಟಿಐ ಕಾರ್ಯಕರ್ತ ಅಪ್ಪಾಜಿ ಕಿರುಕುಳಕ್ಕೆ ಬೇಸತ್ತು ಹೋಗಿದ್ದೇವೆ, ಜೀವನದಲ್ಲಿ ಜಿಗುಪ್ಸೆ ಪ್ರಾರಂಭವಾಗಿದೆ. ನಾವು ಕಷ್ಟಪಟ್ಟು ಜೀವನ ನಡೆಸಲು ಈ ರೀತಿ ತೊಂದರೆ ಕೊಡುತ್ತಿದ್ದರೆ, ನಾವು ಬದುಕುವುದು ಹೇಗೆ? ಸಂಬಂಧಪಟ್ಟ ಜಿಲ್ಲಾಡಳಿತ ನಮಗೆ ಸೂಕ್ತ ರಕ್ಷಣೆ ಕೊಡಬೇಕು ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಅಪ್ಪಾಜಿಯೇ ನೇರ ಕಾರಣರಾಗುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.ತಾಂಡಾಶೆಟ್ಟಿ ಎಂಬವರು ಹೊಟೇಲ್ ನಡೆಸುತ್ತಿರುವುದರಿಂದ ಯಾವುದೇ ತೊಂದರೆ ಇಲ್ಲ. ಲೋಕೋಪಯೋಗಿ ರಸ್ತೆ ಒತ್ತುವರಿ ಮಾಡಿಕೊಂಡಿಲ್ಲ, ಅವರು ಜಮೀನಿನ ಬಳಿ ಹೋಟಲ್ ಹಾಕಿಕೊಂಡಿದ್ದಾರೆ. ತೊಂದರೆ ಇದ್ದಿದ್ದರೆ ನಾವೇ ಗ್ರಾಪಂಗೆ ದೂರು ನೀಡುತ್ತಿದ್ದೆವು. ಆರ್‌ಟಿಐ ಕಾರ್ಯಕರ್ತ ಅಪ್ಪಾಜಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಇವರ ವಿರುದ್ಧ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು.
ಕೃಷ್ಣಮೂರ್ತಿ, ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರ ಸಂಘ ಪಿಜಿ ಪಾಳ್ಯ