ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಭೂಸ್ವಾಧೀನ ಪ್ರಕ್ರಿಯೆನ್ನು ಶೀಘ್ರವಾಗಿ ಪೂರ್ಣಗೊಳಿಸಿ ರೈತರಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಆಗ್ರಹಿಸಿ ಮೂರು ಜಿಲ್ಲೆಯ ಮುಳುಗಡೆ ಸಂತ್ರಸ್ತರಿಂದ ಡಿ.3ರಿಂದ ಡಿಸಿ ಕಚೇರಿ ಎದುರಿಗೆ ಅಹೋರಾತ್ರಿ ಧರಣಿ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಬಾಗಲಕೋಟೆ ತಾಲೂಕು ಸಮಿತಿ ಸದಸ್ಯ ಮಂಜುನಾಥ ಕಲ್ಲಪ್ಪ ಅರಕೇರಿ ಹೇಳಿದರು.ಈ ಕುರಿತು ಪತ್ರಿಕೆಗೆ ತಿಳಿಸಿದ ಅವರು, ಕೃ.ಮೇ.ಯೋ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ 75,000 ಎಕರೆ ಭೂಮಿ ಭೂಸ್ವಾಧೀನ ಹಾಗೂ 20 ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ರೈತರಿಗೆ ಭೂಮಿಯಲ್ಲಿ ಯಾವುದೇ ಅಬಿವೃದ್ಧಿ ಕಾರ್ಯ ಕೈಗೊಳ್ಳಲು ಆಗುತ್ತಿಲ್ಲ. ಇದರಿಂದ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ. 524.256 ಎತ್ತರಕ್ಕೆ ಭೂಸ್ವಾಧೀನಗೊಳ್ಳುವ ಭೂಮಿಯನ್ನು ಏಕಲಾಕ್ಕೆ ಭೂಸ್ವಾಧೀನ ಪಡಿಸಿಕೊಂಡು ರೈತರನ್ನು ಹಲವು ತೊಂದರೆಯಿಂದ ಪಾರು ಮಾಡಬೇಕು. ಸಂತ್ರಸ್ತರ ಇನ್ನೂ ಅನೇಕ ತೊಂದರೆಗಳಿಗೆ ಪರಿಹಾರ ಪಡೆದೆಕೊಳ್ಳಲು ಅಹೋರಾತ್ರಿ ಹೋರಾಟ ಮಾಡಲು ಸಮಿತಿ ನಿರ್ಧರಿಸಿದ್ದು ಜಿಲ್ಲೆಯ ತಾಲೂಕಿನ ಸಂತ್ರಸ್ತರು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.
ಧರಣಿಗೆ ಭಾರತೀಯ ಕಿಸಾನ್ ಸಂಘದ ಬೆಂಬಲಕಲಾದಗಿ: ಉತ್ತರ ಕರ್ನಾಟಕ ಪ್ರಮುಖ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೃ.ಮೇ.ಯೋ ಬಾಧಿತ ಸಂತ್ರಸ್ತರ ಹಿತರಕ್ಷಣಾ ಸಮಿತಿ ನಡೆಸಲು ತೀರ್ಮಾನಿಸಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಭಾರತೀಯ ಕಿಸಾನ್ ಸಂಘವು ಬೆಂಬಲ ನೀಡುವುದಾಗಿ ಭಾ.ಕಿ.ಸಂ ಬಾಗಲಕೋಟೆ ಜಿಲ್ಲಾಧ್ಯಕ್ಷ ವೀರೂಪಾಕ್ಷಯ್ಯ ಹಿರೇಮಠ ಹಾಗೂ ಬಾಗಲಕೋಟೆ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಡಪದ ತಿಳಿಸಿದ್ದಾರೆ.
ಈ ಕುರಿತು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ ನೀರಾವರಿ ಯೋಜನೆಗಳಿಗೆ ತೋರುವ ಆಸಕ್ತಿ ಉತ್ತರ ಕರ್ನಾಟದ ನೀರಾವರಿ ಯೋಜನೆ ತೋರುತ್ತಿಲ್ಲ. ಇದು ಪ್ರಾದೇಶಿಕ ಅಸಮಾನತೆ ತೋರಿದ ಹಾಗಾಗಿದೆ. ಕೂಡಲೇ ಸರ್ಕಾರ ನುಡಿದಂತೆ ಕೃ.ಮೇ.ಯೋಜನೆಗೆ ವರ್ಷಕ್ಕೆ ₹40 ಸಾವಿರ ಕೋಟಿ ನೀಡಿ, 2023 ಹಾಗೂ 2024 ಎರಡು ವರ್ಷದ ₹80 ಸಾವಿರ ಕೋಟಿ ನೀಡಿ ಮುಂದಿನ ಆಡಳಿತ ಅವಧಿಯಲ್ಲೂ ಅಷ್ಟೇ ಹಣ ಅನುದಾನವನ್ನು ಮೀಸಲಿಟ್ಟು ಯೋಜನೆ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲೆಯ ರೈತರು ಈ ಯೋಜನೆಯಿಂದ ಸಂತ್ರಸ್ತರಾಗಿದ್ದು ಸಂತ್ರಸ್ತರ ಹಿತ ಕಾಪಾಡುವುದು ಸರಕಾರದ ಆದ್ಯ ಕೆಲಸವಾಗಬೇಕು. ಇದನ್ನು ಹೋರಾಟ ಸಮಿತಿ ಮಾಡುವಂತೆ ಆಗಿದೆ ಹೋರಾಟ ಸಮಿತಿ ಹೋರಾಟಕ್ಕೆ ಬೆಂಬಲ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.