ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಗದಗಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ, ಕುರ್ಲಗೇರಿ ಬೆಣ್ಣೆಹಳ್ಳದ ಪ್ರವಾಹದಿಂದ ಹಾಗೂ ಬೂದಿಹಾಳ ಮಲಪ್ರಭಾ ನದಿ ಪ್ರವಾಹಕ್ಕೆ ಪದೇ ಪದೇ ತುತ್ತಾಗುತ್ತಿದ್ದ ಗ್ರಾಮಗಳಾಗಿದ್ದು, ಇವುಗಳ ಶಾಶ್ವತ ಸ್ಥಳಾಂತರಕ್ಕೆ ಸರ್ಕಾರ ವಿಶೇಷ ಕ್ರಮ ತೆಗೆದುಕೊಂಡು ಆಸರೆ ಯೋಜನೆಯಡಿ ಸಂಪೂರ್ಣ ಗ್ರಾಮಗಳ ಸ್ಥಳಾಂತರಕ್ಕಾಗಿ ಸಾವಿರಾರು ಮನೆಗಳನ್ನು ನಿರ್ಮಿಸಿದೆ. ಆದರೆ ಮನೆಗಳ ಹಂಚಿಕೆಯಲ್ಲಾಗುತ್ತಿರುವ ಗೊಂದಲ, ವಿಳಂಬದಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
2007 ಮತ್ತು 2009ರಲ್ಲಿ ಸುರಿದ ಭಾರೀ ಮಳೆಗೆ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿಗೆ ಪ್ರವಾಹ ಬಂದು ಈ ಮೂರು ಗ್ರಾಮಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಸಾರ್ವಜನಿಕರ ಆಸ್ತಿ ಮತ್ತು ಜೀವ ಹಾನಿಗಳು ಸಂಭವಿಸಿದ್ದವು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದಕ್ಕಾಗಿಯೇ ವಿಶೇಷ ಯೋಜನೆ ರೂಪಿಸಿ, ಸಾರ್ವಜನಿಕರು, ಮಠಗಳು ಸೇರಿದಂತೆ ಪ್ರಮುಖರ ಸಹಾಯ ಹಸ್ತದಿಂದ ಸಂಪೂರ್ಣ ಗ್ರಾಮಗಳನ್ನೇ ಸ್ಥಳಾಂತರ ಮಾಡಿದ್ದರು.ಮೂರು ಗ್ರಾಮಗಳಲ್ಲಿ ಒಂದೇ ಸಮಸ್ಯೆ: ನರಗುಂದ ತಾಲೂಕಿನ ಸುರಕೋಡ, ಕುರ್ಲಗೇರಿ ಮತ್ತು ಬೂದಿಹಾಳ ಗ್ರಾಮಗಳಲ್ಲಿ ಸರ್ಕಾರದಿಂದ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ದಶಕವೇ ಕಳೆದಿದೆ. ಆದರೆ ಇದುವರೆಗೂ ಮನೆಗಳ ಹಂಚಿಕೆ ಮಾತ್ರ ಸಮರ್ಪಕವಾಗಿ ಆಗಿಲ್ಲ, ಹಾಗಾಗಿ ಹಲವಾರು ಬಡವರು ತಮ್ಮ ಹಳೆಯ ಗ್ರಾಮದಲ್ಲಿರುವ ಮನೆಗಳಲ್ಲಿಯೇ ಇಂದಿಗೂ ವಾಸಿಸುತ್ತಿದ್ದಾರೆ. ಮನೆಗಳ ಹಂಚಿಕೆ ಎನ್ನುವ ಗೊಂದಲ ಮೂರು ಗ್ರಾಮಗಳಲ್ಲಿ ಸಾಮಾನ್ಯವಾಗಿದ್ದು, ಸ್ಥಳೀಯ ಗ್ರಾಮ ಮಟ್ಟದಲ್ಲಿರುವ ಸಮಸ್ಯೆಯಿಂದಲೇ ಇಂದಿಗೂ ವಿಳಂಬವಾಗುತ್ತಿದೆ ಎನ್ನುವುದಂತು ಸ್ಪಷ್ಟ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ: ನವ ಗ್ರಾಮಗಳಿಗೆ ಸಂಪೂರ್ಣ ಜನರು ಸ್ಥಳಾಂತರವಾಗಬೇಕಾದಲ್ಲಿ ಮೂಲ ಗ್ರಾಮದಲ್ಲಿರುವ ಎಲ್ಲಾ ನಿವಾಸಿಗಳಿಗೂ ಮನೆಗಳು ಸಿಗಬೇಕು. ಆದರೆ ಮನೆ ಹಂಚಿಕೆ ವಿಳಂಬವಾದಂತೆಲ್ಲಾ ಸಹೋದರರು ಪ್ರತ್ಯೇಕವಾಗಿ ಒಂದು ಇದ್ದ ಮನೆಗಳು ಈಗ ನಾಲ್ಕಾಗಿವೆ. ಹೀಗೆ ಸಮಸ್ಯೆ ದಿನೇ ದಿನೇ ಬೆಳೆಯುತ್ತಲೇ ಇದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಯೂ ಗ್ರಾಮಸ್ಥರೊಂದಿಗೆ ಸಭೆಗಳು ಆಗಿವೆ. ತಹಸೀಲ್ದಾರ್ ನೇತೃತ್ವದಲ್ಲಿ ತನಿಖಾ ಕಾರ್ಯಗಳು ಪೂರ್ಣಗೊಂಡಿವೆ. ಆದರೂ ಮನೆಗಳ ಹಂಚಿಕೆ ಮಾತ್ರ ಸಾಧ್ಯವಾಗಿಲ್ಲ.ಒಮ್ಮತ ಮೂಡಬೇಕಿದೆ: ಗ್ರಾಮ ಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳಿರುವುದು ಸಾಮಾನ್ಯ. ಆದರೆ ಸರ್ಕಾರ ಪ್ರವಾಹದಿಂದ ಸಮಸ್ಯೆ ಎದುರಿಸುವವರಿಗಾಗಿ ಮನೆಗಳನ್ನು ನಿರ್ಮಿಸಿದ್ದು ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಗ್ರಾಮಸ್ಥರಲ್ಲಿಯೇ ಒಮ್ಮತ ಮೂಡಬೇಕಿದೆ. ಅಂದಾಗ ಮಾತ್ರ ಈ ಸಮಸ್ಯೆಗೆ ಮುಕ್ತಿ ಸಿಗಲು ಸಾಧ್ಯ, ಈಗಾಗಲೇ ಕಟ್ಟಿರುವ ಮನೆಗಳು ಬಳಕೆ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆಗೆ ತಲುಪಿದ್ದು ಇನ್ನಷ್ಟು ವಿಳಂಬವಾದಲ್ಲಿ ಸಂಪೂರ್ಣ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ.
2007 ಮತ್ತು 2009ರಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗಿ ಮಲಪ್ರಭಾ ಜಲಾಶಯ ಭರ್ತಿಯಾಗಿತ್ತು. ನಂತರ ಅಚ್ಚುಕಟ್ಟು ಪ್ರದೇಶದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗಿತ್ತು. ಇದೇ ವೇಳೆಯಲ್ಲಿಯೇ ಹುಬ್ಬಳ್ಳಿ ಧಾರವಾಡ ಸೇರಿದಂತೆ ಬೆಣ್ಣೆಹಳ್ಳ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರ ಮಳೆಯಾಗಿ ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳ ಎರಡಕ್ಕೂ ಒಮ್ಮೆಲೇ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಈ ಗ್ರಾಮಗಳಿಗೆ ತೀವ್ರ ಸಮಸ್ಯೆಯಾಗಿತ್ತು. ಆದರೆ 2019 ಮತ್ತು 2020ರಲ್ಲಿ ಪ್ರವಾಹ ಸಮಸ್ಯೆ ತಲೆ ದೋರಿದ್ದರೂ ಈ ಹಿಂದಿನಂತೆ ಎರಡೂ ಒಮ್ಮಿಲೇ ಆಗದೇ ಇರುವ ಹಿನ್ನೆಲೆಯಲ್ಲಿ ಬೆಣ್ಣೆಹಳ್ಳ ದಡದಲ್ಲಿರುವ ಗ್ರಾಮಗಳಲ್ಲಿ ಈಗ ಪ್ರವಾಹದ ಭೀಕರತೆ ಭಯ ಅಲ್ಪ ಕಡಿಮೆಯಾಗಿದೆ. ಹಾಗಾಗಿ ನವ ಗ್ರಾಮಗಳಿಗೆ ತೆರಳಬೇಕು ಎನ್ನುವ ಆಸೆ ಕೂಡಾ ಕಡಿಮೆಯಾಗಿದೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.ಸ್ಥಳೀಯವಾಗಿ ಬಗೆಹರಿದಾಗ ಸಮಸ್ಯೆಗೆ ಮುಕ್ತಿ: ಸುರಕೋಡದ ನವ ಗ್ರಾಮಗಳ ನಿರ್ಮಾಣಕ್ಕಾಗಿ 89 ಎಕರೆ ಜಮೀನು ಖರೀದಿಸಿ ಅಲ್ಲಿ 438 ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಕೆಲವರು ನಿರ್ಮಾಣವಾಗಿರುವ ಮನೆಗಳು ಕಳಪೆಯಾಗಿವೆ ಎನ್ನುವ ದೂರು ಹೇಳಿದರೆ, ಇನ್ನು ಕೆಲವರು ಮನೆಗಳ ಹಂಚಿಕೆಯಲ್ಲಿಯೇ ತಾರತಮ್ಯವಾಗಿದೆ ಎಂದು ದೂರುತ್ತಾರೆ. ಈ ವಿಷಯ ಈಗಾಗಲೇ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಇದೇ ರೀತಿಯ ಸಮಸ್ಯೆ ಇನ್ನುಳಿದ ಕುರ್ಲಗೇರಿ ಮತ್ತು ಬೂದಿಹಾಳ ಗ್ರಾಮಗಳಲ್ಲಿಯೂ ಇದ್ದು ಇದು ಸ್ಥಳೀಯವಾಗಿಯೇ ಬಗೆಹರಿದಾಗ ಮಾತ್ರ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗುತ್ತದೆ.