ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾವರ
ತಾಲೂಕಿನ ಮುಗ್ವಾ ಗ್ರಾಮದ ಆರೊಳ್ಳಿ ಸಮೀಪ ಧಾರಾಕಾರ ಸುರಿದ ಮಳೆಗೆ ಮನೆ ಕುಸಿದು ಬಿದ್ದಿದ್ದು, ಮನೆಯೊಳಗೆ ಸಿಲುಕಿದ್ದ ವೃದ್ಧೆಯನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮನೆ ಕುಸಿದು ಬಿದ್ದಿದ್ದು, ಮನೆಯೊಳಗೆ ಸುಲಬ ವೆಂಕಟೇಶ ಕಾಮತ್ ಎನ್ನುವ ವೃದ್ಧೆ ಸಿಲುಕಿದ್ದರು.ಘಟನಾ ಸ್ಥಳಕ್ಕೆ ಹೊನ್ನಾವರ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ, ವೃದ್ಧೆಯನ್ನು ಮನೆಯಿಂದ ಹೊರತೆಗೆಯುವ ಕಾರ್ಯ ನಡೆಸಿದರು. ಅವಶೇಷಗಳಡಿ ಸಿಲುಕಿದ್ದ ವೃದ್ಧೆಯನ್ನು ಸುರಕ್ಷಿತವಾಗಿ ಹೊರತೆಗೆದು ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಸಾರ್ವಜನಿಕರು ಸಹ ಕಾರ್ಯಾಚರಣೆಗೆ ಕೈಜೋಡಿಸಿದ್ದರು. 2 ರೆಸಾರ್ಟ್‌ಗಳ ತೆರವಿಗೆ ತಡೆಯಾಜ್ಞೆ
ಕಾರವಾರ: ಜಿಲ್ಲೆಯ ಅರಣ್ಯ ಭೂಮಿಯಲ್ಲಿ ಎರಡು ರೆಸಾರ್ಟ್ ನಿರ್ಮಿಸಿರುವುದನ್ನು ಅರಣ್ಯ ಇಲಾಖೆ ಗುರುತಿಸಿ, ನೋಟಿಸ್ ನೀಡಿದೆ. ಆದರೆ ರೆಸಾರ್ಟ್ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.ಹಳಿಯಾಳ ಅರಣ್ಯ ವಿಭಾಗದಲ್ಲಿ ಎರಡು ರೆಸಾರ್ಟ್‌ಗಳನ್ನು ಅರಣ್ಯ ಅತಿಕ್ರಮಣ ಮಾಡಿ ನಿರ್ಮಿಸಿರುವುದನ್ನು ಅರಣ್ಯ ಇಲಾಖೆ ಗುರುತಿಸಿ, ರೆಸಾರ್ಟ್ ತೆರವಿಗೆ ನೋಟಿಸ್ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ ತಡೆಯಾಜ್ಞೆ ತೆರವು ಆಗುವ ತನಕ ಯಾವುದೆ ಕ್ರಮ ಕೈಗೊಳ್ಳಲು ಸಾಧ್ಯವಾಗದು ಎಂದು ಸಿಸಿಎಫ್ ವಸಂತ ರೆಡ್ಡಿ ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.ಶಿರೂರು ಗುಡ್ಡ ಕುಸಿತ ದುರಂತದ ಹಿನ್ನೆಲೆ ಅರಣ್ಯ ಭೂಮಿಯಲ್ಲಿ ಅಕ್ರಮ ರೆಸಾರ್ಟ್, ಹೋಂ ಸ್ಟೇ ಇದ್ದಲ್ಲಿ ಅದನ್ನು ಪಟ್ಟಿ ಮಾಡಿ ತೆರವಿಗೆ ಅರಣ್ಯ ಸಚಿವ ಈಶ್ವರ ಕಂಡ್ರೆ ಜುಲೈ ತಿಂಗಳಿನಲ್ಲಿ ಆದೇಶಿಸಿದ್ದರು. ಈ ಬಗ್ಗೆ ಹತ್ತು ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಇಲಾಖೆಯಿಂದ ಜ್ಞಾಪನಾಪತ್ರವನ್ನೂ ಕಳುಹಿಸಲಾಗಿತ್ತು.
ಸಿಎಂ ರಾಜೀನಾಮೆ ಊಹಾಪೋಹ: ಬಿ.ಕೆ. ಹರಿಪ್ರಸಾದ್ಭಟ್ಕಳ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆನ್ನುವುದು ಊಹಾಪೋಹವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ ಹೇಳಿದ್ದಾರೆ.ಭಾನುವಾರ ಭಟ್ಕಳದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇತ್ತೀಚಿನ ಕೆಲವು ಆರೋಪಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪಕ್ಷದಲ್ಲೂ ಅಂತಹ ಯಾವುದೇ ಚರ್ಚೆಯೂ ನಡೆದಿಲ್ಲ ಎಂದರು.