ತೀವ್ರ ವಿವಾದಕ್ಕೆ ಕಾರಣವಾಗಿರುವ ಹಳೇ ಹುಬ್ಬಳ್ಳಿ ಆಸಾರ ಓಣಿಯ ಶ್ರೀಭವಾನಿಶಂಕರ ನಾರಾಯಣ ದೇವಸ್ಥಾನದ ಪುಷ್ಕರಣಿಯ ಕುರಿತು ಮಹಾನಗರ ಪಾಲಿಕೆಯೂ ಸದನ ಸಮಿತಿ ರಚಿಸಿದ್ದು, ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಿದೆ.
ಹುಬ್ಬಳ್ಳಿ:
ತೀವ್ರ ವಿವಾದಕ್ಕೆ ಕಾರಣವಾಗಿರುವ ಹಳೇ ಹುಬ್ಬಳ್ಳಿ ಆಸಾರ ಓಣಿಯ ಶ್ರೀಭವಾನಿಶಂಕರ ನಾರಾಯಣ ದೇವಸ್ಥಾನದ ಪುಷ್ಕರಣಿಯ ಕುರಿತು ಮಹಾನಗರ ಪಾಲಿಕೆಯೂ ಸದನ ಸಮಿತಿ ರಚಿಸಿದ್ದು, ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಿದೆ.ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಕಾವೇರಿದ ಚರ್ಚೆ ನಡೆಯಿತು. ಆಡಳಿತ- ಪ್ರತಿಪಕ್ಷದ ಸದಸ್ಯರ ನಡುವೆ ಚಕಮಕಿ ನಡೆಯಿತು. ಸಾಮಾನ್ಯ ಸಭೆಯಲ್ಲಿನ ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ 15 ನಿಮಿಷ ಸಭೆ ಮುಂದೂಡಲಾಯಿತು. ಕೊನೆಗೆ ಸರ್ವ ಪಕ್ಷದ ಹಿರಿಯ ಸದಸ್ಯರು, ಅಧಿಕಾರಿಗಳನ್ನೊಳಗೊಂಡ ಸದನ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಅಲ್ಲದೇ, ಪುಷ್ಕರಣೆ ಕುರಿತಂತೆ ಯಾವುದೇ ದಾಖಲೆಗಳಿದ್ದರೂ ಅವುಗಳನ್ನು ಈ ಸಮಿತಿಗೆ ನೀಡಬೇಕು. ಸಮಿತಿಯೂ ಪುರಾತತ್ವ, ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆಗೆ ಸಲ್ಲಿಸಿ ಅಲ್ಲಿಂದ ಸಮೀಕ್ಷೆ ನಡೆಸಬೇಕು ಎಂದು ಮೇಯರ್ ದುರ್ಗಮ್ಮ ಬಿಜವಾಡ ಆದೇಶಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಈ ಕುರಿತು ಗಮನ ಸೆಳೆದ ಪಾಲಿಕೆ ಹಿರಿಯ ಸದಸ್ಯ ತಿಪ್ಪಣ್ಣ ಮಜ್ಜಗಿ, ಶ್ರೀ ಭವಾನಿಶಂಕರ ನಾರಾಯಣ ದೇವಸ್ಥಾನ ಪುರಾತತ್ವ ಇಲಾಖೆಗೆ ಸೇರಿದ್ದು, ನೂರಾರು ವರ್ಷದ ಇತಿಹಾಸ ಹೊಂದಿದೆ. ಈ ಸ್ಥಳದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಾದರೂ ಪುರಾತತ್ವ ಇಲಾಖೆಯ ಅನುಮತಿ ಕಡ್ಡಾಯ. ಅಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರಿಂದ ವಿರೋಧ ಮಾಡಿದರೂ ಪಾಲಿಕೆ ಅಧಿಕಾರಿಗಳು ಅದನ್ನು ಪರಿಶೀಲನೆಯನ್ನೂ ಮಾಡದೆ ಪೊಲೀಸ್ ಭದ್ರತೆಯಲ್ಲಿ ರಸ್ತೆ ನಿರ್ಮಿಸುವ ಅವಶ್ಯಕತೆ ಏನು ಇತ್ತು? ಅಧಿಕಾರಿಗಳು ತಪ್ಪು ಮಾಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಜಗಳ ತಂದಿದ್ದಾರೆ. ಪಾಲಿಕೆ ಇದನ್ನು ಸರಿಪಡಿಸಬೇಕು. ಪುರಾತತ್ವ ಇಲಾಖೆ ನಿಯಮದಂತೆ ಅಧಿಕಾರಿಗಳು ಸರ್ವೇ ನಡೆಸಿ ದೇವಸ್ಥಾನ ಉಳಿಸಬೇಕು. ಪುರಷ್ಕರಣಿ ಉತ್ಖನನ ಮಾಡಲು ನಿರ್ಧಾರ ಕೈಗೊಳ್ಳಬೇಕು. ಪಾಲಿಕೆ ಆಯುಕ್ತರು ಪುರಾತತ್ವ ಇಲಾಖೆಗೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.ವಿಧಾನಪರಿಷತ್ ಸದಸ್ಯ ಎಚ್.ಎಫ್. ಚಕ್ಕಪ್ಪನವರ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 20 ವರ್ಷದಿಂದ ಆಡಳಿತದಲ್ಲಿದೆ. ಅವಳಿ ನಗರದಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯ ಈ ಅವಧಿಯಲ್ಲಿ ಆಗಿವೆ. 2014ರಲ್ಲಿ ಆಗಿನ ಸೆಂಟ್ರಲ್ ಕ್ಷೇತ್ರದ ಶಾಸಕರಾಗಿದ್ದ ಜಗದೀಶ ಶೆಟ್ಟರ ಅವರು ₹ 24 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಿದ್ದಾರೆ. ಈಗ ಕಾಂಗ್ರೆಸ್ ಸದಸ್ಯರು ಮಾಡಿದ ರಸ್ತೆಗೆ ಏಕೆ ವಿರೋಧ ಎಂದು ಪ್ರಶ್ನಿಸಿದರು.
ಮಹಾನಗರದಲ್ಲಿ 2292 ಆಸ್ತಿಗಳು ಲೀಸ್‌ನಲ್ಲಿವೆ. ಬಹುತೇಕ ಕಡೆ ಪುಷ್ಕರಣಿ, ಬಾವಿಗಳು, ಕೆರೆಗಳು ಅತಿಕ್ರಮಣವಾಗಿವೆ. ಇವೆಲ್ಲವೂ ಕುರಿತು ಸರ್ವೇ ಕಾರ್ಯ ನಡೆಯಬೇಕು. ಪುಷ್ಕರಣಿ ಉತ್ಖನನ ಮಾಡುವ ಬಗ್ಗೆ ನಮಗೆ ವಿರೋಧವಿಲ್ಲ. ಆಧಾರಗಳಿಲ್ಲದೇ ಉತ್ಖನನ ಮಾಡುವುದು ಸರಿಯಲ್ಲ ಎಂದು ಹೇಳಿದರು.ಸದಸ್ಯ ವೀರಣ್ಣ ಸವಡಿ ಮಾತನಾಡಿ, ಹುಬ್ಬಳ್ಳಿ ಶಾಂತಿಯುತವಾಗಿರಬೇಕು. ಅಶಾಂತಿಗೆ ಅವಕಾಶ ನೀಡಬಾರದು. ಸರ್ವಪಕ್ಷದ ಸದಸ್ಯರ ಹಾಗೂ ಅಧಿಕಾರಿಗಳ ಒಳಗೊಂಡ ಸದನ ಸಮಿತಿ ರಚಿಸಬೇಕು. ಆ ಸ್ಥಳದಲ್ಲಿ ಪುಷ್ಕರಣಿ ಇರುವ ಬಗ್ಗೆ ದಾಖಲೆಗಳ ಸಂಗ್ರಹಿಸಿ ನಿಜಾಂಶದ ವರದಿ ಪುರಾತತ್ವ ಇಲಾಖೆಗೆ ಸಲ್ಲಿಸಬೇಕು ಎಂದು ಆಗ್ರಹಿಸಿದರು. ಆಡಳಿತ ಪಕ್ಷದ ಸದಸ್ಯ ಈರೇಶ ಅಂಚಟಗೇರಿ ಕಾಮಗಾರಿಗೆ ವಿರೋಧವಿದ್ದರೂ ರಾತ್ರೋರಾತ್ರಿ ಕಾಮಗಾರಿ ನಡೆಸಿದ್ದು ಏಕೆ ಎಂದು ಪ್ರಶ್ನಿಸಿದರು.
ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಚಕಮಕಿ ತಾರಕ್ಕೇರಿತು. ಸಮಾಧಾನ ಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಸಭೆಯನ್ನು 15 ನಿಮಿಷ ಮುಂದೂಡಲಾಯಿತು. ನಂತರ ಶುರುವಾದ ಸಭೆಯಲ್ಲಿ ಪುಷ್ಕರಣಿಗೆ ಸಂಬಂಧಿಸಿದಂತೆ ಸದನ ಸಮಿತಿ ರಚಿಸಲು ತೀರ್ಮಾನಿಸಿ ಮೇಯರ್ ಅವರು ರೂಲಿಂಗ್ ನೀಡಿದರು. ಈಗಾಗಲೇ ಹಲವರು ಅಲ್ಲಿ ಪುಷ್ಕರಣಿ ಇರುವ ಬಗ್ಗೆ ದಾಖಲೆ ನೀಡಿದ್ದಾರೆ. ಪುರಾತತ್ವ ಇಲಾಖೆಯಿಂದ ಆದಷ್ಟು ಬೇಗ ಉತ್ಖನನ ಮಾಡುವ ಕೆಲಸ ಆರಂಭವಾಗಬೇಕು. ಈ ಬಗ್ಗೆ ಗೊಂದಲ ನಿವಾರಣೆಯಾಗಬೇಕು.ಲಿಂಗರಾಜ ಪಾಟೀಲ, ವಿಧಾನ ಪರಿಷತ್ ಸದಸ್ಯಪುರಾತತ್ವ ಇಲಾಖೆಯೇ 2023ರಲ್ಲಿ ಯಾವುದೇ ಪುಷ್ಕರಣಿ ಇಲ್ಲ ಎಂದು ಪಾಲಿಕೆಗೆ ಪತ್ರ ಬರೆದಿದೆ. ಪುಷ್ಕರಣಿ ಇರುವ ಕುರಿತು ದಾಖಲೆ ಇದ್ದರೆ ನೀಡಿ ಎಂದು ಇಲಾಖೆಯೇ ತಿಳಿಸಿದೆ. ಯಾರ ಬಳಿ ಇದೆಯೋ ಅವರು ಇಲಾಖೆಗೆ ನೀಡಬಹುದು.
ಎಫ್.ಎಚ್. ಜಕ್ಕಪ್ಪನವರ, ವಿಧಾನ ಪರಿಷತ್ ಸದಸ್ಯ