ಸಾರಾಂಶ
ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಮುದ್ರತೀರದಲ್ಲಿರುವವರು ಎಚ್ಚರಿಕೆಯಿಂದ ಇರಲು ಉಳ್ಳಾಲ ತಾಲೂಕು ತಹಸೀಲ್ದಾರ್ ಸೂಚಿಸಿದ್ದಾರೆ.
ಕನ್ನಪ್ರಭ ವಾರ್ತೆ ಉಳ್ಳಾಲ
ಉಚ್ಚಿಲ ಬಟ್ಟಪ್ಪಾಡಿ ಸಮುದ್ರತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಬುಧವಾರವಷ್ಟೇ ಸೋಮೇಶ್ವರ ಪುರಸಭೆ ಅಧಿಕಾರಿಗಳು ಸ್ಥಳಾಂತರಗೊಳಿಸಿದ್ದ ಬೀಫಾತುಮ್ಮ ಅವರ ಮನೆ ಗುರುವಾರ ಸಂಜೆ ವೇಳೆ ಸಂಪೂರ್ಣ ಸಮುದ್ರಪಾಲಾಗಿದೆ. ಅಪಾಯದಲ್ಲಿರುವ ಇನ್ನೆರಡು ಮನೆಮಂದಿಯನ್ನು ಸ್ಥಳಾಂತರಿಸಲಾಗಿದೆ.ಮದನಿ ನಗರದಲ್ಲಿ ಸಂಭವಿಸಿದ ಘೋರ ದುರಂತದ ಹಿನ್ನೆಲೆಯಲ್ಲಿ ಇನ್ನೊಂದು ದುರಂತ ಸಂಭವಿಸದಿರಲಿ ಎಂಬ ಕಾರಣದಿಂದ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಾಡಿ, ತಹಸೀಲ್ದಾರ್ ಪ್ರದೀಪ್ ಕೋರ್ಡೇಕರ್ ಸಹಿತ ಹಲವು ಅಧಿಕಾರಿಗಳು ಗುರುವಾರ ಉಚ್ಚಿಲ ಬಟ್ಟಪ್ಪಾಡಿಗೆ ತೆರಳಿ ಬೀಫಾತುಮ್ಮ ಮನೆಯ ಐದು ಮಂದಿಯನ್ನು ಸ್ಥಳಾಂತರಿಸಿದ್ದರು. ಕೋಟೆಕಾರಿನಲ್ಲಿ ಬಾಡಿಗೆ ಮನೆಗೆ ತೆರಳಿದ್ದಾರೆ. ಈ ಬಾಡಿಗೆ ಮನೆಯ ಮೂರು ತಿಂಗಳ ಬಾಡಿಗೆಯನ್ನು ಸರ್ಕಾರ ಭರಿಸಲಿದೆ. ಅವರು ಸ್ಥಳಾಂತರಗೊಂಡಿದ್ದ ಮನೆ ಗುರುವಾರ ಸಮುದ್ರಪಾಲಾಗಿದೆ.
ಈ ಘಟನೆ ನಡೆಯುತ್ತಿದ್ದಂತೆಯೇ ಅಲಿಮಮ್ಮ ಕುಟುಂಬದ 11 ಮಂದಿ ಹಾಗೂ ಸೌದಾ ಎಂಬವರ ಮನೆಯ 6 ಮಂದಿಯನ್ನು ಅವರ ಸಂಬಂಧಿಕರ ಮನೆಗೆ ಸ್ಥಳಾಂತರಗೊಳಿಸಲಾಗಿದೆ.ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಮುದ್ರತೀರದಲ್ಲಿರುವವರು ಎಚ್ಚರಿಕೆಯಿಂದ ಇರಲು ಉಳ್ಳಾಲ ತಾಲೂಕು ತಹಸೀಲ್ದಾರ್ ಸೂಚಿಸಿದ್ದಾರೆ. ಅಗತ್ಯಬಿದ್ದಲ್ಲಿ ಅಪಾಯದಂಚಿನಲ್ಲಿ ಇರುವ ಇನ್ನಷ್ಟು ಮನೆಮಂದಿಗೆ ಬಾಡಿಗೆ ಮನೆಗಳನ್ನು ಗುರುತಿಸಿ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.