ರಾಮನಗರ ಜಿಲ್ಲೆ ಚನ್ನಪಟ್ಟಣದ ಉಜ್ಜೀವನ್ ಬ್ಯಾಂಕ್‌ನಿಂದ 6 ಲಕ್ಷ ರು. ಸಾಲ ಪಡೆದಿದ್ದ ಪ್ರೇಮಾ, ಪೂರ್ತಿ ಹಣವನ್ನು ಪಾವತಿಸಿದ್ದರೂ ಬಾಕಿ 3 ಕಂತುಗಳ ಹಣವನ್ನು ಪಾವತಿಸುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಬಾಕಿ ಕಂತುಗಳನ್ನು ಕಟ್ಟದ ಹಿನ್ನೆಲೆಯಲ್ಲಿ ಸಂಸ್ಥೆಯವರು ಮನೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಲದ ಕೆಲವು ಕಂತುಗಳನ್ನು ಕಟ್ಟಲಿಲ್ಲವೆಂಬ ಕಾರಣಕ್ಕೆ ಮೈಕ್ರೋ ಫೈನಾನ್ಸ್‌ನವರು ಮನೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಮಳವಳ್ಳಿ ತಾಲೂಕು ಕೊನ್ನಾಪುರ ಗ್ರಾಮದ ಪ್ರೇಮಾ (59) ಮೃತ ಮಹಿಳೆ. ಮಂಗಳವಾರವಷ್ಟೇ ನಿದ್ರೆ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಅಸ್ವಸ್ಥರಾಗಿದ್ದ ಮಹಿಳೆಯನ್ನು ಕುಟುಂಬದವರು ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಪ್ರೇಮಾ ಅಸುನೀಗಿದರು.

ರಾಮನಗರ ಜಿಲ್ಲೆ ಚನ್ನಪಟ್ಟಣದ ಉಜ್ಜೀವನ್ ಬ್ಯಾಂಕ್‌ನಿಂದ 6 ಲಕ್ಷ ರು. ಸಾಲ ಪಡೆದಿದ್ದ ಪ್ರೇಮಾ, ಪೂರ್ತಿ ಹಣವನ್ನು ಪಾವತಿಸಿದ್ದರೂ ಬಾಕಿ 3 ಕಂತುಗಳ ಹಣವನ್ನು ಪಾವತಿಸುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಬಾಕಿ ಕಂತುಗಳನ್ನು ಕಟ್ಟದ ಹಿನ್ನೆಲೆಯಲ್ಲಿ ಸಂಸ್ಥೆಯವರು ಮನೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.

ಒಂದು ವಾರದಿಂದ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಪ್ರೇಮಾ ಮನನೊಂದು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಪ್ರೇಮಾ ಸಾವಿನ ಹಿನ್ನೆಲೆಯಲ್ಲಿ ಕುಟುಂಬದವರ ರೋಧನ ಮುಗಿಲುಮುಟ್ಟಿತ್ತು. ಮೈಕ್ರೋಫೈನಾನ್ಸ್‌ ಸಂಸ್ಥೆಯವರಿಗೆ ಹಿಡಿಶಾಪ ಹಾಕಿದರು.

----------

ಮನೆ ವಾಪಸ್‌ ನೀಡುವಂತೆ ಸಂಸ್ಥೆಯವರಿಗೆ ತಿಳಿಸಿದ್ದೇನೆ; ಡಾ.ಕುಮಾರ

3 ಕಂತುಗಳನ್ನು ಮಾತ್ರ ಪಾವತಿ ಮಾಡಿರಲಿಲ್ಲ । ಜಿಲ್ಲಾಡಳಿತದಿಂದಲೂ ಪರಿಹಾರ ದೊರಕಿಸಲು ಚಿಂತನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಮೃತ ಮಹಿಳೆ ಪ್ರೇಮಾ ಅವರ ಮನೆಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಉಜ್ಜೀವನ್‌ ಬ್ಯಾಂಕ್‌ ಸಿಬ್ಬಂದಿಗೆ ಮನೆಯನ್ನು ವಾಪಸ್‌ ನೀಡುವಂತೆ ಹೇಳಿರುವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಮೈಕ್ರೋ ಫೈನಾನ್ಸ್‌ನವರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಾ ಅಸುನೀಗಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರೇಮಾ ಅವರು ಮಗಳ ಮದುವೆಗಾಗಿ ಉಜ್ಜೀವನ್‌ ಬ್ಯಾಂಕ್‌ನಿಂದ 6 ಲಕ್ಷ ರು. ಸಾಲ ಪಡೆದಿದ್ದರು. ಸಾಲ ತೆಗೆದುಕೊಂಡ ನಂತರ ಆಗಾಗ್ಗೆ ಕಂತು ಕಟ್ಟಿಕೊಂಡು‌ ಬಂದಿದ್ದಾರೆ. ಕಳೆದ ಮೂರು ತಿಂಗಳು ಅವರು ಕಂತು ಕಟ್ಟಿಲ್ಲ. ಹೀಗಾಗಿ ಉಜ್ಜೀವನ್ ಬ್ಯಾಂಕ್ ಅವರು ಕೋರ್ಟ್‌ನಿಂದ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯದಿಂದ ಆದೇಶ ತಂದು ಮನೆಯನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.

ಇದರಿಂದ ಮನನೊಂದು ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿರೋದು ದುರ್ದೈವ. ನ್ಯಾಯಾಲಯದ ಆದೇಶವಿರುವುದರಿಂದ ನಾವು ಇತಿ ಮಿತಿಯಲ್ಲಿ ಕೆಲಸ ಮಾಡಬೇಕಿದೆ. ಜಪ್ತಿ ಮಾಡಿರುವ ಪ್ರೇಮಾ ಅವರ ಮನೆಯನ್ನು ವಾಪಸ್ಸು ನೀಡಲು ಬ್ಯಾಂಕ್ ಅವರಿಗೆ ಹೇಳಿದ್ದೇನೆ. ಜೊತೆಗೆ ಜಿಲ್ಲಾಡಳಿತದಿಂದ ಪರಿಹಾರದ ಬಗ್ಗೆಯೂ ಚಿಂತಿಸಿದ್ದೇವೆ. ಈಗ ಇವರ ಸಾಲ ಎಷ್ಟಿದೆ ಎಂದು ಬ್ಯಾಂಕ್‌ನವರಿಂದ ಮಾಹಿತಿ ಕೇಳಿದ್ದೇವೆ.

ಅವರು ಬಂದು ಮಾಹಿತಿ ನೀಡಲಿದ್ದಾರೆ ಎಂದು ನುಡಿದರು.