ಸಾರಾಂಶ
ಶಹಾಪುರದ ಬೆನಕನಹಳ್ಳಿ ಜೆ. ಗ್ರಾಮದಲ್ಲಿ ಘಟನೆ. 8 ತೊಲೆ ಬಂಗಾರ, ಹತ್ತಿ ಮಾರಾಟದಿಂದ ಬಂದ 1.50 ಲಕ್ಷ ಹಣ, ಟಿವಿ, ಬಟ್ಟೆಗಳು, 3 ಚೀಲ ಜೋಳ, 3 ಚೀಲ ಅಕ್ಕಿ ಹಾಗೂ ದಾಖಲಾತಿಗಳು, ಅಡುಗೆ ಪಾತ್ರೆಗಳು ಸೇರಿದಂತೆ ಅಂದಾಜು 8 ಲಕ್ಷ ರು. ಅಧಿಕ ಹಾನಿಯಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಹಾಪುರ
ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ, ಇಲ್ಲಿನ ಮಲ್ಲಣ್ಣ ಜಕ್ಕಪ್ಪ ಸಗರ ಅವರ ಮನೆಗೆ ಮನೆಯಲ್ಲಿದ್ದ ಹಣ, ಒಡವೆ, ವಸ್ತುಗಳು ಅಲ್ಲದೆ ದವಸ-ಧಾನ್ಯಗಳು ಸೇರಿ ಲಕ್ಷಾಂತರ ಮೌಲ್ಯದ ಆಸ್ತಿ ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಬೆನಕನಹಳ್ಳಿ ಜೆ. ಗ್ರಾಮದಲ್ಲಿ ಸಂಭವಿಸಿದೆ.ಮನೆಯಲ್ಲಿದ್ದ 8 ತೊಲೆ ಬಂಗಾರ, ಹತ್ತಿ ಮಾರಾಟದಿಂದ ಬಂದ 1.50 ಲಕ್ಷ ಹಣ, ಟಿವಿ, ಬಟ್ಟೆಗಳು, 3 ಚೀಲ ಜೋಳ, 3 ಚೀಲ ಅಕ್ಕಿ ಹಾಗೂ ಕಾಲೇಜು ಮತ್ತು ಆಟೋ ರಿಕ್ಷಾದ ದಾಖಲಾತಿಗಳು, ಅಡುಗೆ ಪಾತ್ರೆಗಳು ಸೇರಿದಂತೆ ಅಂದಾಜು 8 ಲಕ್ಷ ರು. ಅಧಿಕ ಹಾನಿಯಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಯಾವುದರಿಂದ ಬೆಂಕಿ ಹತ್ತಿಕೊಂಡಿದೆ ಎಂಬುದರ ಬಗ್ಗೆ ತಿಳಿದಿಲ್ಲ. ಮಂಗಳವಾರ ಪೂಜೆ ಮಾಡಿ ಜಗಲಿ ಮೇಲೆ ದೀಪ ಹಚ್ಚಲಾಗಿತ್ತು. ಅದರಿಂದ ಏನಾದರೂ ಬೆಂಕಿ ಹತ್ತಿರಬಹುದು ಎಂದು ಅಂದಾಜಿಸಿದ್ದಾರೆ.
ಬೆಂಕಿ ಅವಘಡ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹಾವೇರಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ಆಗುವ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ಮಲ್ಲಣ್ಣ ಸಗರ ತಿಳಿಸಿದ್ದಾರೆ. ಮನೆಗೆ ಬೆಂಕಿ ಹೇಗೆ ಹತ್ತಿಕೊಂಡಿದೆ ಎಂದು ತಿಳಿದಿಲ್ಲ.ಈಗಾಗಲೇ ಒಕ್ಕಲುತನಕ್ಕೆ ಲಕ್ಷಾಂತರ ಖಾಸಗಿಯವರ ಹತ್ತಿರ ಸಾಲ ಮಾಡಿದ್ದೇನೆ. ಇನ್ನು ಒಂದೆರಡು ದಿನದಲ್ಲಿ ಸಾಲ ತೀರಿಸುವ ಸಲುವಾಗಿ ಇನ್ನೊಂದಿಷ್ಟು ಹಣ ಜಮಾ ಮಾಡುವುದಿತ್ತು. ಅಷ್ಟರಲ್ಲಿ ಈ ಅನಾಹುತ ನಡೆದು ಹೋಗಿದೆ ನಮಗೆ ದಿಕ್ಕು ಕಾಣದಂತಾಗಿದೆ ಎಂದು ಮಲ್ಲಣ್ಣ ತಮ್ಮಅಳಲು ತೋಡಿಕೊಂಡರು.
ಗ್ರಾಮಾಡಳಿತ ಅಧಿಕಾರಿಗೆ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಹಸೀಲ್ದಾರ್ ಉಮಾಕಾಂತ್ ಹಳ್ಳೆ ತಿಳಿಸಿದ್ದಾರೆ.