ಮನೆಯಲ್ಲಿನ ಸುಮಾರು 40 ಗ್ರಾಂ ಚಿನ್ನಾಭರಣ(ಓಲೆ, ಉಂಗುರ, ಸರ ) ಮನೆ ಕಟ್ಟಲು ಸೇರಿಸಿಟ್ಟಿದ್ದ ₹2 ಲಕ್ಷ ನಗದು, ಟಿವಿ, ಫ್ಯಾನ್ ಹಾಗೂ ಇತರೆ ದಾಖಲಾತಿ ಸೇರಿ ಎಲೆಕ್ಟ್ರಿಕಲ್ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಆಕಸ್ಮಿಕ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಗ್ರಾಮ ಪಂಚಾಯ್ತಿಯ ಸದಸ್ಯರೊಬ್ಬರ ಮನೆ ಹಾಗೂ ಮನೆಯಲ್ಲಿದ್ದ ನಗದು, ಚಿನ್ನಾಭರಣ ಸುಟ್ಟು ಕರಕಲಾಗಿರುವ ಘಟನೆ ಬುಧವಾರ ಬೆಳಗ್ಗೆ ಜರುಗಿದೆ.

ಮನೆಯಲ್ಲಿನ ಸುಮಾರು 40 ಗ್ರಾಂ ಚಿನ್ನಾಭರಣ(ಓಲೆ, ಉಂಗುರ, ಸರ ) ಮನೆ ಕಟ್ಟಲು ಸೇರಿಸಿಟ್ಟಿದ್ದ ₹2 ಲಕ್ಷ ನಗದು, ಟಿವಿ, ಫ್ಯಾನ್ ಹಾಗೂ ಇತರೆ ದಾಖಲಾತಿ ಸೇರಿ ಎಲೆಕ್ಟ್ರಿಕಲ್ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಗ್ರಾಮದ ನಾಯಕರ ಬೀದಿಯಲ್ಲಿರುವ ಮನೆಯ ಸದಸ್ಯರು ಎಲ್ಲರೂ ಹೊರಗಡೆ ಇದ್ದಾಗ ಬುಧವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿ ಉರಿಯಲು ಆರಂಭಿಸಿದೆ.

ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಅಗ್ನಿಶಾಮಕ ದಳ ಕರೆಸಿ ಬೆಂಕಿ ನಂದಿಸುವಷ್ಟರಲ್ಲಿ ಅಪಾರ ಹಾನಿ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ್ದ ಗ್ರಾಪಂ ಅಧ್ಯಕ್ಷೆ ಕಮಲಮ್ಮ ಹಾಗೂ ಸದಸ್ಯರು, ಮುಖಂಡರು, ನಷ್ಟಗೊಂಡಿರುವ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಜೊತೆಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.