ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ವಿರೋಧವಿಲ್ಲ

| Published : Aug 20 2025, 01:30 AM IST

ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ವಿರೋಧವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ತಿದ್ದುಪಡಿ 2024ರಲ್ಲೇ ಬಂದಿದ್ದು, ಇದಕ್ಕೆ ಕೆಲವು ತಿದ್ದುಪಡಿ ಮಾಡಿ ಮತ್ತೆ ಸದನಕ್ಕೆ ತರಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಹಕಾರ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಸರ್ಕಾರ ಹಾಗೂ ರಾಜಕೀಯ ಹಸ್ತಕ್ಷೇಪ ಇರಬಾರದು. ಇದರಿಂದ ಸಹಕಾರ ಕ್ಷೇತ್ರಕ್ಕೆ ಉಳಿಗಾಲವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ ಆಗ್ರಹಿಸಿದರು.

ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ತಿದ್ದುಪಡಿ ಸಂಬಂಧ ಸದನದಲ್ಲಿ ಮಾತನಾಡಿದ ಅವರು, ಸಹಕಾರಿ ಕಾಯ್ದೆಯ ಕುರಿತು ವಿಸ್ತೃತ ಚರ್ಚೆ ನಡೆಸುವ ಮೂಲಕ ಸರ್ಕಾರಕ್ಕೆ ಸಹಕಾರಿ ಕ್ಷೇತ್ರದ ತತ್ವಗಳ ಬಗ್ಗೆ ಸದನದ ಗಮನ ಸೆಳೆದರು.

ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ತಿದ್ದುಪಡಿ 2024ರಲ್ಲೇ ಬಂದಿದ್ದು, ಇದಕ್ಕೆ ಕೆಲವು ತಿದ್ದುಪಡಿ ಮಾಡಿ ಮತ್ತೆ ಸದನಕ್ಕೆ ತರಲಾಗಿದೆ. ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ನಮ್ಮ ವಿರೋಧವಿಲ್ಲ, ನಾವು ಸಹ ಇದನ್ನು ಸ್ವಾಗತಿಸುತ್ತೇವೆ. ಆದರೆ ಸಹಕಾರ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಸರ್ಕಾರ ನೀಡಬೇಕಿದೆ ಎಂದರು.

ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೆ ತರಲಾಗಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಗಳು ಯಾವ ರೀತಿ ನಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಅಲ್ಲದೇ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ಆದರೆ ಸಹಕಾರ ಸಂಘಗಳಿಗೆ ಸರ್ಕಾರ ಯಾವುದೇ ಅನುದಾನ ಕೊಡುತ್ತಿಲ್ಲ. ಹೀಗಿರುವಾಗ ಸಹಕಾರ ಕ್ಷೇತ್ರದಲ್ಲಿ ಮೀಸಲಾತಿಯನ್ನು ಯಾವ ರೀತಿಯಲ್ಲಿ ಸರ್ಕಾರ ಅನುಷ್ಟಾನಕ್ಕೆ ತರಲಿದೆ ಎಂಬುದು ಮುಖ್ಯವಾಗಲಿದೆ.

ಸ್ವಾಯತ್ತತೆ ಉಳಿಸಿ ?

ಸಹಕಾರ ಕ್ಷೇತ್ರದಲ್ಲಿ ಸ್ವಾಯತ್ತತೆ ಉಳಿಯಬೇಕಿದ್ದು, ಸರ್ಕಾರದ ಹಸ್ತಕ್ಷೇಪ ಇರಬಾರದು ಎಂಬುದು ಸಹಕಾರಿ ತತ್ವವಾಗಿದೆ. ಆದರೂ ಸಹ ಸರ್ಕಾರದ ಹಸ್ತಕ್ಷೇಪ ಇರಬೇಕೆಂಬ ಉದ್ದೇಶದಿಂದ ಈ ವಿಧೇಯಕಕ್ಕೆ ತಿದ್ದುಪಡಿಯನ್ನು ಮಾಡಲಾಗಿದ್ದು, ಈ ಉದ್ದೇಶದೊಂದಿಗೆ ಮೀಸಲಾತಿ ತರಲಾಗುತ್ತಿದೆ. ಆದರೆ ಈ ಮೀಸಲಾತಿ ನಿಗದಿ ಮಾಡುವವರು ಯಾರು? ಯಾವ ರೀತಿ ಮೀಸಲಾತಿ ಅನುಷ್ಠಾನಕ್ಕೆ ತರುತ್ತೀರಾ? ಎಂದು ಪ್ರಶ್ನಿಸಿದ ಅವರು, ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಉಂಟಾದರೆ ಸಹಕಾರ ಸಂಘಗಳು ಉಳಿಯುವುದಿಲ್ಲ. ಆದ್ದರಿಂದ ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಾಗೂ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ಅವರು ಆಗ್ರಹಿಸಿದರು.

ಎಲ್ಲರನ್ನೂ ಕೊಂಡೊಯ್ಯಬೇಕಿದೆ

ಶಾಸಕ ಜಿ.ಡಿ. ಹರೀಶ್ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಎಚ್‌.ಕೆ. ಪಾಟೀಲ್‌, ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಅವಶ್ಯಕವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಈವರೆಗೂ ರೈತರನ್ನು ಮಾತ್ರವೇ ಇರುತ್ತಿದ್ದರು, ಆದರೆ ಇಂದು ಎಲ್ಲರನ್ನೂ ಒಗ್ಗೂಡಿ ಕರೆದೊಯ್ಯಬೇಕಾಗಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಎಲ್ಲರನ್ನೂ ಕೊಂಡೊಯ್ಯುವ ಅಗತ್ಯವಿದೆ. ಎಲ್ಲರಿಗೂ ಆಡಳಿತದಲ್ಲಿ, ಆರ್ಥಿಕ ಕ್ಷೇತ್ರದಲ್ಲಿ ಅವಕಾಶವನ್ನು ನೀಡಿದರೆ ಎಲ್ಲರೂ ತಮ್ಮ ವಿದ್ವತ್ಹಾಗೂ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ. ಈ ಎಲ್ಲ ಕಾರಣಕ್ಕೆ ಬದಲಾವಣೆ ತಿದ್ದುಪಡಿಯನ್ನು ಒಪ್ಪಿಕೊಳ್ಳಬೇಕಿದೆ ಎಂದರು.

ಜಿಟಿಡಿ ಸೋಲೊಪ್ಪಬೇಕು

ಯುವ ಶಾಸಕ ಜಿ.ಡಿ. ಹರೀಶ್ ಗೌಡ ಸಹಕಾರಿ ‌ಕ್ಷೇತ್ರದ ನ್ಯೂನತೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುವುದರ ಜತೆಗೆ ಸಹಕಾರ ಕ್ಷೇತ್ರಕ್ಕೆ ಒಳ್ಳೆಯದು ಏನೆಂಬುದನ್ನು ತಿಳಿಸಿಕೊಟ್ಟಿದ್ದಾರೆ. ನಮ್ಮಂತ ಹಿರಿಯ ಸಹಕಾರಿಗಳಿಗೆ ತಿಳಿ ಹೇಳಿದ್ದಾರೆ ಹಾಗೂ ಸರ್ಕಾರದ ಪ್ರಸ್ತಾವನೆಗೆ ಬಲವನ್ನು ಸಹ ನೀಡಿದ್ದು, ಆ ಮೂಲಕ ತಂದೆಯನ್ನು ಮೀರಿಸಿದ್ದಾರೆ ಎಂದು ಶ್ಲಾಘಿಸಿದ ಸಚಿವ ಎಚ್‌.ಕೆ. ಪಾಟೀಲ್‌, ಈ ಕಾರಣದಿಂದ ಜಿ.ಟಿ. ದೇವೇಗೌಡ ಅವರು ತಮ್ಮ ಸೋಲೊಪ್ಪಬೇಕಿದೆ ಎಂದು ಹಿರಿಯ ಸಹಕಾರಿಯ ಕಾಲೆಳೆದರು. ಇದರ ಮಧ್ಯ ಸಭಾಧ್ಯಕ್ಷರು ಕೂಡ ಹರೀಶ್ ಗೌಡರು ಅಪ್ಪನನ್ನು ಮೀರಿಸಿ ಬೆಳೆದಿದ್ದಾರೆ ಅಲ್ವಾ ಎಂದು ಸದನದಲ್ಲಿ ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.