ಮನೆ ಕಳ್ಳನ ಬಂಧನ: ೧೮ ಲಕ್ಷದ ವಸ್ತುಗಳ ವಶ

| Published : Feb 02 2024, 01:01 AM IST

ಸಾರಾಂಶ

ತುರುವೇಕೆರೆ ತಾಲೂಕಿನ ದಂಡಿನಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ತುರುವೇಕೆರೆ ಮತ್ತು ಕುಣಿಗಲ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ದಂಡಿನಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ತುರುವೇಕೆರೆ ಮತ್ತು ಕುಣಿಗಲ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬೆಂಗಳೂರಿನ ಇಲಿಯಾಜ್ ನಗರದ ನೂರಾನಿ ಮಸೀದಿ ಹತ್ತಿರದ ನಿವಾಸಿ ಇರ್ಫಾನ್ ಷರೀಫ್ (೬೦) ಬಂಧಿತ ಆರೋಪಿ.

ತಾಲೂಕಿನ ದಂಡಿನಶಿವರ ಪೊಲೀಸ್‌ ಠಾಣಾ ವ್ಯಾಪ್ತಿಯ ನೀರುಗುಂದ ಗ್ರಾಮದ ನಿವಾಸಿ ಕೃಷ್ಣಮೂರ್ತಿ ಅವರು ೨೦೨೩ರ ಫೆ. ೧೩ ರಂದು ತಮ್ಮ ಕುಟುಂಬದೊಂದಿಗೆ ಬೇರೆಡೆ ತೆರಳಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ರಾತ್ರಿ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ ೫ ಗ್ರಾಂ ತಾಳಿ, ಗುಂಡು ಮತ್ತು ೩೫ ಸಾವಿರ ರೂಪಾಯಿಗಳ ನಗದನ್ನು ಕಳವು ಮಾಡಿದ್ದರು. ಅದೇ ರಾತ್ರಿ ಸಮೀಪದ ಕೋಳಘಟ್ಟ ಗ್ರಾಮದ ಮಂಗಳಮ್ಮ ಅವರ ಮನೆಯ ಬೀರುವಿನ ಲಾಕರ್ ಒಡೆದು ೧೫ ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು ೧ ಲಕ್ಷ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಂಡಿನಶಿವರ ಮತ್ತು ತುರುವೇಕೆರೆ ವೃತ್ತ ವ್ಯಾಪ್ತಿಯಲ್ಲಿ ದಾಖಲಾಗಿರುವ ಇನ್ನಿತರೆ ಸ್ವತ್ತು, ಕಳವು ಪ್ರಕರಣಗಳನ್ನು ಆರೋಪಿ ಸಮೇತ ಮಾಲುಗಳನ್ನು ಪತ್ತೆ ಹಚ್ಚಲು ಕುಣಿಗಲ್ ಉಪವಿಭಾಗ ಪೊಲೀಸ್ ಉಪಾಧೀಕ್ಷರಾದ ಲಕ್ಷ್ಮೀಕಾಂತ್ ನೇತೃತ್ವದಲ್ಲಿ ಮತ್ತು ತುರುವೇಕೆರೆ ವೃತ್ತದ ಸಿಪಿಐ ಲೋಹಿತ್ ಬಿ.ಎನ್ ಅವರು ಪತ್ತೆ ಕಾರ್ಯಕ್ಕೆ ತಂಡವನ್ನು ರಚಿಸಲಾಗಿತ್ತು. ಬೆಂಗಳೂರಿನಲ್ಲಿದ್ದ ಆರೋಪಿ ಇರ್ಫಾನ್ ಷರೀಫ್‌ನನ್ನು ಪತ್ತೆ ಹಚ್ಚಿ ಬಂಧಿಸಲಾಯಿತು. ಆತನಿಂದ ದಂಡಿನಶಿವರ ಠಾಣೆಯ ೨ ಪ್ರಕರಣಗಳು, ತುಮಕೂರು ನಗರದ ಹೊಸ ಬಡಾವಣೆ ಠಾಣೆಯ ೧ ಪ್ರಕರಣಗಳಲ್ಲಿ ಕಳವು ಮಾಡಿದ್ದ ೧೮.೧೬ ಲಕ್ಷ ರೂಪಾಯಿಗಳ ಮೌಲ್ಯದ ೩೧೭ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣಗಳ ಪತ್ತೆ ಮಾಡುವಲ್ಲಿ ದಕ್ಷತೆ ತೋರಿದ ಕುಣಿಗಲ್ ಉಪವಿಭಾಗ ಪೊಲೀಸ್ ಉಪಾಧೀಕ್ಷರಾದ ಲಕ್ಷ್ಮೀಕಾಂತ್, ತುರುವೇಕೆರೆ ವೃತ್ತದ ಸಿಪಿಐ ಬಿ.ಎನ್. ಲೋಹಿತ್, ಪಿಎಸ್‌ಐ ಚಿತ್ತರಂಜನ್ ಹಾಗೂ ಸಿಬ್ಬಂದಿಗಳಾದ ಗುರುಮೂರ್ತಿ, ಮಲ್ಲಿಕಾರ್ಜುನ್, ರಾಜಕುಮಾರ್, ವಗ್ಗೇರಿ, ಮಂಜುನಾಥ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ವಿ. ಅಶೋಕ್ ಅವರು ಶ್ಲಾಘಿಸಿದ್ದಾರೆ.