ನಾಲ್ಕೈದು ಸಾವಿರ ಜನರಿಗೆ ಮಾತ್ರ ಹಕ್ಕುಪತ್ರ ಒದಗಿಸುವ ಕಾರ್ಯದಲ್ಲಿ ತಾಲೂಕು ಆಡಳಿತ ಅತ್ಯಂತ ಕಾಳಜಿಯಿಂದ ಕೆಲಸ ಮಾಡುತ್ತಿದೆ

ಹಾನಗಲ್ಲ: ಸ್ವಂತ ಮನೆಯಲ್ಲಿದ್ದರೂ ದಾಖಲೆಗಳಿಲ್ಲದ ಕಾರಣ ಯಾವುದೇ ಸಮಯದಲ್ಲಿ ಒಕ್ಕಲೇಳುವ ಭಯದಲ್ಲಿದ್ದ ೧೩ ಸಾವಿರ ಕುಟುಂಬಗಳಿಗೆ ಭೂಗ್ಯಾರಂಟಿ ನೀಡುವ ಮೂಲಕ ಮನೆಯಲ್ಲಿ ನೆಮ್ಮದಿಯಿಂದ ಬದುಕು ನಡೆಸಲು ಅಧಿಕೃತ ದಾಖಲೆ ನೀಡಿ ಮನೆ ಹಕ್ಕುಪತ್ರ ಒದಗಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ತಾಲೂಕಿನ ಚಿಕ್ಕಾಂಸಿಹೊಸೂರಿನಲ್ಲಿ ತಾಲೂಕು ಆಡಳಿತದಿಂದ ಚಿಕ್ಕಾಂಸಿಹೊಸೂರು, ಕ್ಯಾಸನೂರು ಹಾಗೂ ಮತ್ತಿಹಳ್ಳಿ ಗ್ರಾಮಗಳ ಮನೆ ಮಾಲೀಕರಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಾಗಲೇ ತಾಲೂಕಿನ ೮ ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಪೂರ್ಣಗೊಂಡಿದೆ ಎಂದರು.

ನಾಲ್ಕೈದು ಸಾವಿರ ಜನರಿಗೆ ಮಾತ್ರ ಹಕ್ಕುಪತ್ರ ಒದಗಿಸುವ ಕಾರ್ಯದಲ್ಲಿ ತಾಲೂಕು ಆಡಳಿತ ಅತ್ಯಂತ ಕಾಳಜಿಯಿಂದ ಕೆಲಸ ಮಾಡುತ್ತಿದೆ. ನಾವು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ್ದೇವೆ. ಇದು ನಮ್ಮ ೬ನೇ ಗ್ಯಾರಂಟಿ. ಹಕ್ಕುಪತ್ರ ನೀಡುವಾಗ ಇ- ಸ್ವತ್ತು, ಜಾಗದ ಚೆಕ್‌ಬಂದಿ, ಕಾನೂನು ರೀತಿಯ ಎಲ್ಲ ದಾಖಲೆಗಳನ್ನು ನೀಡಲಾಗುತ್ತಿದೆ. ಕೆಲವರು ಮನೆಯ ಕರವನ್ನು ತುಂಬದ ಕಾರಣ ತಡವಾಗಿದೆ. ಪಂಚಾಯಿತಿಗೆ ಮನೆಗಳ ಕರ ನೀಡಿ ಊರಿನ ಹಿತ ಕಾಪಾಡಿ, ತಮ್ಮ ಹಕ್ಕು ಪತ್ರವನ್ನೂ ಪಡೆಯಿರಿ ಎಂದರು.

ಪ್ರಸ್ತುತ ಅವಧಿಯಲ್ಲಿ ₹೩೦ ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಸುಧಾರಣೆ ಕಾಮಗಾರಿ ಚಾಲ್ತಿಯಲ್ಲಿವೆ. ಇನ್ನೂ ₹೨೦ ಕೋಟಿ ಅನುದಾನ ಗ್ರಾಮೀಣ ರಸ್ತೆ ಕಾಮಗಾರಿಗೆ ಬಿಡುಗಡೆಗೊಳ್ಳಲಿದೆ. ಅತಿ ಶೀಘ್ರ ಚಿಕ್ಕಾಂಸಿ ಹೊಸೂರು ಭಾಗದಲ್ಲಿ ಅಲ್ಪಸಂಖ್ಯಾತರ ವಸತಿಯುತ ಶಾಲೆ ಆರಂಭವಾಗಲಿದೆ ಎಂದರು.

ತಹಸೀಲ್ದಾರ್ ಎಸ್. ರೇಣುಕಾ ಮಾತನಾಡಿ, ಮನೆ ಇದ್ದರೂ ಅದರ ಹಕ್ಕಿಗಾಗಿ ಕಾಯಬೇಕಾದ ಹಾನಗಲ್ಲ ತಾಲೂಕಿನ ೧೩ ಸಾವಿರ ಮಾಲೀಕರಿಗೆ ಈಗ ಹಕ್ಕುಪತ್ರ ನೀಡಲಾಗುತ್ತಿದೆ. ನಾಲ್ಕೈದು ದಶಕಗಳಿಂದ ಭಯದಲ್ಲಿಯೇ ತಮ್ಮ ಮನೆಯಲ್ಲಿ ವಾಸಿಸುವಂತಾದ ಜನರು ಈಗ ಭಯಮುಕ್ತರಾಗಿದ್ದಾರೆ. ಈಗ ಇದೇ ಮನೆ ಮೇಲೆ ತಮ್ಮ ಹಕ್ಕು ಪ್ರತಿಪಾದಿಸಿ ಹಲವು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮಾಜಿ ಜಿಪಂ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಮತಪ್ಪ ಮರಗಡಿ, ಈರಣ್ಣ ಬೈಲವಾಳ, ವೀರಭದ್ರಗೌಡ ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಸದಾಶಿವಗೌಡ ಪಾಟೀಲ, ಶಿವಾನಂದಪ್ಪ ಈಳಿಗೇರ, ನಾಗರಾಜ ಗಾಜೀಪುರ, ಹರೀಶ ಈಳಿಗೇರ, ರಾಜೇಂದ್ರ ರಡ್ಡೇರ ಮೊದಲಾದವರು ಇದ್ದರು.