ಸುಂಟಿಕೊಪ್ಪ: ಭಾರಿ ಮಳೆ ಗಾಳಿಗೆ ಮನೆ ಗೋಡೆ ಕುಸಿದು ನಷ್ಟ

| Published : Jul 31 2025, 12:55 AM IST / Updated: Jul 31 2025, 01:03 AM IST

ಸುಂಟಿಕೊಪ್ಪ: ಭಾರಿ ಮಳೆ ಗಾಳಿಗೆ ಮನೆ ಗೋಡೆ ಕುಸಿದು ನಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಮಧುರಮ್ಮ ಬಡಾವಣೆಯ ನಿವಾಸಿ ಜಗದೀಶ್‌ ಎಂಬವರ ಮನೆಯ ಗೋಡೆಯು ಗಾಳಿ ಮಳೆಗೆ ಕುಸಿದು ಬಿದ್ದಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನಿವಾಸಿ ಜಗದೀಶ್ ಎಂಬವರ ಮನೆಯ ಗೋಡೆಯು ಗಾಳಿ ಮಳೆಗೆ ಕುಸಿದು ಬಿದ್ದಿದೆ. ಬುಧವಾರ ಬೆಳಗ್ಗೆ ಭಾರಿ ಮಳೆ ಗಾಳಿಗೆ ವಾಸದ ಮನೆಯ ಗೋಡೆಯು ಕುಸಿದು ಬಿದ್ದಿದ್ದು ಇದರಿಂದ ಸಾವಿರಾರು ರು. ನಷ್ಟವುಂಟಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಉಷಾ, ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸುಂಟಿಕೊಪ್ಪದಿಂದ ಮಾದಾಪುರ ಸೋಮವಾರಪೇಟೆಗೆ ಹಾದು ಹೋಗಿರುವ 66 ಮುಖ್ಯವಾಹಕ ಟವರ್ ಮೇಲೆ ಮರ ಬಿದ್ದ ಪರಿಣಾಮ 66 ಕೆವಿ ಟವರ್ ಸಂಪೂರ್ಣ ಹಾನಿಗೀಡಾಗಿದ್ದು, ಸೋಮವಾರಪೇಟೆ ಮತ್ತು ಮಾದಾಪುರ ಭಾಗಗಳಿಗೆ ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಕೆಪಿಟಿಸಿಎಲ್ ಸಹಾಯಕ ಅಭಿಯಂತರರಾದ ರಮೇಶ್, ಸೆಸ್ಕ್ ಕಿರಿಯ ಅಭಿಯಂತರ ಲವಕುಮಾರ್ ಮತ್ತು ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿ ಹಾನಿಗೀಡಾದ ಟವರ್ ದುರಸ್ತಿಗೆ ಮುಂದಾಗಿದ್ದಾರೆ. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಕಾನ್‌ಬೈಲ್ ಬೈಚನಹಳ್ಳಿ ಗ್ರಾಮದ ಗುರು ಹಾಗೂ ಸಂಜೀವ ಎಂಬವರ ಮನೆ ಮುಂಭಾಗದ ತೋಟದ ಮರವೊಂದು ಭಾರೀ ಮಳೆ ಗಾಳಿಗೆ ತುಂಡಾಗಿ ನೇತಾಡುತ್ತಿದ್ದು ಅದನ್ನು ಕಡಿಯುವ ಸಂದರ್ಭ ಗುರು ಅವರ ಮನೆ ಮೇಲೆ ಕೊಂಬೆಯೊಂದು ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಯ ಶೀಟುಗಳು ಹಾನಿಗೀಡಾಗಿವೆ.

ಈ ಭಾಗದಲ್ಲಿ ಭಾರಿ ಗಾಳಿ ಮಳೆಗೆ ನಿರಂತರವಾಗಿ ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡಾದ ಪರಿಣಾಮ ಗ್ರಾಮೀಣ ಭಾಗದ ಜನತೆ ಕಳೆದ 5 ದಿನಗಳಿಂದ ವಿದ್ಯುತ್ ಸಂಪರ್ಕವೂ ಇಲ್ಲದೆ ಕುಡಿಯುವ ನೀರು ಹಾಹಾಕಾರ ಪಡುವಂತಾಗಿದ್ದು ಈ ಭಾಗದ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಸುಂಟಿಕೊಪ್ಪ ವ್ಯಾಪ್ತಿಯ ಬೆಟ್ಟಗೇರಿ ಪಾಪ್ಲಿಕಾಡು ಹಾಲೇರಿ ಸೇರಿದಂತೆ ಇತರೆ ಭಾಗಗಳಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ರಾತ್ರಿ ವೇಳೆ ಕಗ್ಗತ್ತಲ್ಲಲ್ಲಿ ದಿನ ದೂಡುವಂತಾಗಿದೆ. ಕೆಲವೆಡೆ ವಿದ್ಯುತ್ ಸಂಪರ್ಕ ಗೊಂಡರೂ ಆಗಾಗ ಗಾಳಿಮಳೆಗೆ ವಿದ್ಯುತ್ ನಿಲುಗಡೆ ಗೊಂಡು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.