ಸಾಮಾನ್ಯವಾಗಿ ಯಾರು ಕನಿಷ್ಠ ಸಂಭಾವನೆ ಪಡೆದರೂ ಸರ್ಕಾರದ ಕೆಲಸ ಮಾಡುತ್ತಾರೆಯೋ ಅವರು ಹೆಚ್ಚು ಪ್ರಾಮಾಣಿಕೆತೆ, ನಿಷ್ಠೆಯಿಂದ ದುಡಿಯುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗೃಹರಕ್ಷಕ ದಳದವರು. ಅವರು ಸರ್ಕಾರದಿಂದ ಅತಿ ಕಡಿಮೆ ಸಂಭಾವನೆ ಪಡೆದರೂ ಸಾಮಾಜಿಕವಾಗಿ ಅತ್ಯಂತ ಶ್ರಮ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.
- ಹೊನ್ನಾಳಿ ಗೃಹರಕ್ಷಕ ದಳದ ಘಟಕಾಧಿಕಾರಿ ಕೆ.ನಾಗರಾಜಪ್ಪಗೆ ಗೌರವಿಸಿ ಶಾಸಕ ಶಾಂತನಗೌಡ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಾಮಾನ್ಯವಾಗಿ ಯಾರು ಕನಿಷ್ಠ ಸಂಭಾವನೆ ಪಡೆದರೂ ಸರ್ಕಾರದ ಕೆಲಸ ಮಾಡುತ್ತಾರೆಯೋ ಅವರು ಹೆಚ್ಚು ಪ್ರಾಮಾಣಿಕೆತೆ, ನಿಷ್ಠೆಯಿಂದ ದುಡಿಯುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗೃಹರಕ್ಷಕ ದಳದವರು. ಅವರು ಸರ್ಕಾರದಿಂದ ಅತಿ ಕಡಿಮೆ ಸಂಭಾವನೆ ಪಡೆದರೂ ಸಾಮಾಜಿಕವಾಗಿ ಅತ್ಯಂತ ಶ್ರಮ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಗೃಹರಕ್ಷಕ ದಳ ಹೊನ್ನಾಳಿ ಘಟಕ ವತಿಯಿಂದ 2024-25ನೇ ಸಾಲಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಹೊನ್ನಾಳಿ ಗೃಹರಕ್ಷಕ ದಳದ ಘಟಕಾಧಿಕಾರಿ ಕೆ.ನಾಗರಾಜಪ್ಪ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಹಾಗೂ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗೃಹರಕ್ಷಕ ದಳವು ಸಮಾಜಸೇವೆಯಲ್ಲಿ ಪೊಲೀಸ್ ಇಲಾಖೆ ಜೊತೆಗೆ ಕೈಜೋಡಿಸಿ ತಮ್ಮ ಜೀವನದ ಹಂಗನ್ನು ತೊರೆದು ಕೆಲಸ ಮಾಡುವ ಸಂಸ್ಥೆಯಾಗಿದೆ. ಪ್ರಕೃತಿ ವಿಕೋಪಗಳಂಥ ಸಂದರ್ಭ ನದಿಯಲ್ಲಿ ಮುಳುಗಿದವರ ಪತ್ತೆಗಾಗಿ ಹೀಗೆ ಹತ್ತು ಹಲವು ದುರ್ಘಟನೆಗಳ ಸಂದರ್ಭ ಮುನ್ನುಗ್ಗಿ ಸೇವೆ ಸಲ್ಲಿಸುವ ಗೃಹರಕ್ಷಕ ದಳ ಸೇವಾವೈಖರಿ ಶ್ಲಾಘನೀಯ ಎಂದರು.ಇತ್ತೀಚೆಗೆ ಪೊಲೀಸ್ ಕ್ಯಾಪ್ ಬದಲಾಗಿದೆ. ಅದರಂತೆ ಗೃಹರಕ್ಷಕ ದಳದ ಕ್ಯಾಪ್ ಕೂಡ ಬದಲಾಗಬೇಕಾಗಿದೆ. ಪ್ರಸ್ತುತ ಗೃಹರಕ್ಷಕ ದಳಕ್ಕೆ ಸಿಗುತ್ತಿರುವ ಸಂಭಾವನೆ ತೀರಾ ಕಡಿಮೆ ಇದ್ದು, ಇಷ್ಟರಲ್ಲೇ ಈ ಬಗ್ಗೆ ಗೃಹ ಖಾತೆ ಸಚಿವರೊಂದಿಗೆ ತಾವು ಚರ್ಚಿಸುವುದಾಗಿ ಹೇಳಿದರು.
ನ್ಯಾಮತಿ ಅಗ್ನಿಶಾಮಕ ದಳದ ಕಚೇರಿಗೆ ₹3 ಕೋಟಿ ಮಂಜೂರಾಗಿದೆ. ಹೊನ್ನಾಳಿ ನ್ಯಾಮತಿಯಲ್ಲಿ ಗೃಹರಕ್ಷಕ ದಳ ಘಟಕಗಳಿಗೂ ಕೂಡ ನಿವೇಶನ, ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಜೊತೆಗೆ ಹೊನ್ನಾಳಿಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗೆ ವಿಶ್ರಾಂತಿ ಗೃಹ ನಿರ್ಮಿಸಲಾಗುವುದು ಎಂದು ಹೇಳಿದರು.ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕೆ.ನಾಗರಾಜ್ ಅವರನ್ನು ಸನ್ಮಾನಿಸಿ, ಸರ್ಕಾರದಿಂದ ಜೀವನ ಭದ್ರತೆ ಇಲ್ಲದ ಹೊರತಾಗಿಯೂ ಕೂಡ ಸಮಾಜಕ್ಕಾಗಿ ಗೃಹರಕ್ಷಕ ದಳ ಉತ್ತಮ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಕೆ.ನಾಗರಾಜ್ ಅವರ ಸಾಮಾಜಿಕ ಕಳಕಳಿ ಅನನ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ಸಮಾದೇಷ್ಠರು ಗೃಹರಕ್ಷಕ ದಳ ದಾವಣಗೆರೆ, ಡಾ. ಬಿ.ಎಚ್. ವೀರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ ನಿವೃತ್ತ ಜಿಲ್ಲಾ ಸಮಾದೇಷ್ಠ ಎ. ಮಹಾಲಿಂಗಪ್ಪ, ರಾಷ್ಟ್ರಪತಿ ಪದಕ ಪುರಸ್ಕೃತ ಎಂ.ಪಿ.ಎಂ. ಚನ್ನಬಸಯ್ಯ, ಸ್ಟಾಫ್ ಆಫೀಸರ್ ಜಿಲ್ಲಾ ಗೃಹ ರಕ್ಷಕ ದಳ ದಾವಣಗೆರೆ ಕೆ.ಸರಸ್ವತಿ, ಮುಖ್ಯಮಂತ್ರಿಗಳ ಪದಕ ಪುರಸ್ಕೃತ ನ್ಯಾಮತಿ ಘಟಕದ ಅಧಿಕಾರಿ ರಾಘವೇಂದ್ರ ಮಾತನಾಡಿದರು.ಜಿಲ್ಲಾ ಸಮಾದೇಷ್ಠರಾದ ಡಾ. ಎಸ್.ಎಚ್. ಸುಜಿತ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಹೊನ್ನಾಳಿ, ನ್ಯಾಮತಿ ಗೃಹರಕ್ಷಕ ದಳದ ಸಿಬ್ಬಂದಿ, ವಿವಿಧ ಗಣ್ಯರು ಭಾಗವಹಿಸಿದ್ದರು.
- - --22ಎಚ್.ಎಲ್.ಐ1:
2024-25ನೇ ಸಾಲಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಹೊನ್ನಾಳಿ ಗೃಹರಕ್ಷಕ ದಳದ ಘಟಕಾಧಿಕಾರಿ ಕೆ. ನಾಗರಾಜಪ್ಪ ಅವರನ್ನು ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಭಿನಂದಿಸಿದರು.