ಪೌರಕಾರ್ಮಿಕರಿಗೆ ನಿವೇಶನದ ಜತೆಗೆ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ಪೌರಕಾರ್ಮಿಕರಿಗೆ ನಿವೇಶನದ ಜತೆಗೆ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಶ್ರಮ ಮತ್ತು ಸೇವೆ ಅತ್ಯಂತ ಮಹತ್ವದ್ದಾಗಿದೆ. ಮಳೆ, ಬಿಸಿಲು ಎನ್ನದೆ ಪ್ರತಿನಿತ್ಯ ಕಾರ್ಯನಿರ್ವಹಿಸಿ ಪಟ್ಟಣವನ್ನು ಸ್ವಚ್ಛವಾಗಿಡುವ ಅವರ ಸೇವೆಗೆ ನಾವೆಲ್ಲರೂ ಕೃತಜ್ಞರಾಗಿರಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಪೌರಕಾರ್ಮಿಕರಿಗೆ ನಿವೇಶನದ ಜೊತೆಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಆಶ್ರಯ ಸಮಿತಿ ರಚನೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಸೌಲಭ್ಯ ಪಡೆದವರನ್ನು ಹೊರತುಪಡಿಸಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ದೊರೆಯುವಂತಾಗಬೇಕು. ಪೌರಕಾರ್ಮಿಕರ ಮೂಲಸೌಕರ್ಯ ಸಮಸ್ಯೆಗಳನ್ನು ಗುರುತಿಸಿ, ನಿಗದಿತ ಸಮಯದಲ್ಲಿ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ತಿಳಿಸಿದರು.
ಕೈಗಾರಿಕಾ ಪ್ರದೇಶಕ್ಕೆ ಪ್ರಾಮುಖ್ಯ:ಹನೂರು ವಿಧಾನಸಭಾ ಕ್ಷೇತ್ರದ ಯುವಜನರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಕೈಗಾರಿಕಾ ಪ್ರದೇಶ ಸ್ಥಾಪನೆಯ ಅಗತ್ಯವಿದೆ. ಈ ಸಂಬಂಧ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದು ಮನವಿ ಸಲ್ಲಿಸಲಾಗಿದೆ. ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರ ಜತೆಗೆ ನೀರಾವರಿ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಉಡುತೊರೆ ಹಳ್ಳ, ಗುಂಡಾಲ್ ಅಣೆಕಟ್ಟು ಹಾಗೂ ಉಬ್ಬೆಹುಣಸೆ ಕೆರೆ ಅಭಿವೃದ್ಧಿಪಡಿಸಿ ನೀರು ಸಂಗ್ರಹಿಸುವ ಮೂಲಕ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶವಿದೆ. ಉಡುತೊರೆ ಹಳ್ಳ ಯೋಜನೆಗೆ ₹490 ಕೋಟಿ ಅನುದಾನ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡರೆ ರೈತರಿಗೆ ಅನುಕೂಲವಾಗುವುದರ ಜತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.ಹನೂರು ಪಟ್ಟಣವನ್ನು ಅಭಿವೃದ್ಧಿಪಡಿಸಿ ಸುಂದರ ನಗರವನ್ನಾಗಿ ರೂಪಿಸುವ ಕನಸು ಇದ್ದು, ಅದನ್ನು ನನಸಾಗಿಸಲು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು. ಪಟ್ಟಣದ ಬೆಳವಣಿಗೆಗೆ ಪೂರಕವಾಗಿ ರಿಂಗ್ ರಸ್ತೆ ನಿರ್ಮಿಸುವ ಸಂಬಂಧ ಸರ್ಕಾರ ಪ್ರಸ್ತಾಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಭವಿಷ್ಯದಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸುವುದರ ಜೊತೆಗೆ ಪಟ್ಟಣದ ವಿಸ್ತರಣೆಗೂ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹನೂರು ಪಟ್ಟಣದ ಪ್ರತಿಯೊಂದು ಮನೆಗೂ ಕಾವೇರಿ ನೀರು ಪೂರೈಸುವ ಯೋಜನೆ ಹಾಗೂ ಒಳಚರಂಡಿ ವ್ಯವಸ್ಥೆ (ಯುಜಿಡಿ) ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಪ್ರಮುಖ ರಸ್ತೆಗಳನ್ನು ಮಾದರಿ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವುದು, ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗ ನಿರ್ಮಿಸುವುದು ಹಾಗೂ ಸುಸಜ್ಜಿತ ವಿದ್ಯುತ್ ಕಂಬಗಳನ್ನು ಅಳವಡಿಸುವ ಮೂಲಕ ಪಟ್ಟಣದ ಸೌಂದರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಚಪ್ಪ, ತಹಸೀಲ್ದಾರ್ ಚೈತ್ರಾ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರೇಖಾ ಸೇರಿದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಪೌರಕಾರ್ಮಿಕರು ಹಾಜರಿದ್ದರು.